ಕ್ರೀಡೆ

PHOTOS: ಫೋಟೋಗಳ ಮೂಲಕ ಧೋನಿ ಸಾಧನೆ ಅನಾವರಣಗೊಳಿಸಿದ ಬಿಸಿಸಿಐ

ಬೆಂಗಳೂರು: ಭಾರತೀಯ ಕ್ರಿಕೆಟ್​ ಇತಿಹಾಸದ ಸರ್ವಶ್ರೇಷ್ಠ ನಾಯಕ ಎನಿಸಿಕೊಂಡಿದ್ದ ಎಂಎಸ್​ ಧೋನಿ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಜರ್ನಿಗೆ ಶನಿವಾರ ವಿದಾಯ ಘೋಷಿಸಿದ್ದಾರೆ. ಕಳೆದ ಒಂದು ವರ್ಷದಿಂದ ಎದ್ದಿದ್ದ ಊಹಾಪೋಹಗಳಿಗೂ ಧೋನಿ ಬ್ರೇಕ್​ ಹಾಕಿದ್ದಾರೆ. ವಿಶ್ವ ಕ್ರಿಕೆಟ್​ಗೆ ಇದು ಶಾಕಿಂಗ್​ ನ್ಯೂಸ್​ ಆಗಿದ್ದರೂ ಎಲ್ಲದಕ್ಕೂ ಒಂದು ಅಂತ್ಯ ಎಂಬುದು ಅಷ್ಟೇ ಸತ್ಯ. ನಾಯಕತ್ವದಲ್ಲಿ ಅಚ್ಚರಿಗಳಿಗೆ ಕಾರಣವಾಗಿದ್ದ ಧೋನಿ ನಿರ್ಧಾರಗಳಿಗೆ ಶಾಕ್​ ಆದವರೇ ಇಲ್ಲ. ಧೋನಿ ಅವರ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ಜರ್ನಿ ಕುರಿತು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಫೋಟೋಗಳ ಮೂಲಕ ದಿಗ್ಗಜನ ಸಾಧನೆಯನ್ನು ಕೊಂಡಾಡಿದೆ. ಜತೆಗೆ ಪ್ರಮುಖ ಘಟಾನುವಳಿಗಳ ಕಿರು ಪರಿಚಯದೊಂದಿಗೆ ಫೋಟೋಗಳ ಸಮೇತ ಪ್ರಕಟಿಸಲಾಗಿದೆ.

ಶನಿವಾರ ಸಂಜೆ 7.29ಕ್ಕೆ ತಮ್ಮ ಇಸ್ಟಾಗ್ರಾಂ ಖಾತೆ ಮೂಲಕ ವಿದಾಯ ನಿರ್ಧಾರ ಹೊರಹಾಕಿದ ಧೋನಿ, ಎಲ್ಲರಿಗೂ ಅಚ್ಚರಿ ಮೂಡಿಸಿದರು. ಇದರ ಬೆನ್ನ ಹಿಂದೆಯೇ ದಿಗ್ಗಜ ಪ್ರತಿಕ್ರಿಯೆಗಳ ಸುರಿಮಳೆ ಆಯಿತು. ಭಾನುವಾರವೂ ಧೋನಿ ಗುಣಗಾನ ಮುಂದುವರಿಸಿರುವ ಬಿಸಿಸಿಐ, ಬೆಳಗ್ಗೆಯೇ ತನ್ನ ಟ್ವಿಟರ್​ ಖಾತೆಯಲ್ಲಿ ಧೋನಿ ಫೋಟೋ ಪ್ರಕಟಿಸಿ ದ ಎಂಡ್​ ಆಫ್ ಆನ್ ಎರಾ ಎಂದು ಬರೆದುಕೊಂಡಿದೆ. ನಿಮಗೆ ಧನ್ಯವಾದಗಳು, ಅತ್ಯುತ್ತಮ ನೆನಪುಗಳನ್ನು ನಿಮ್ಮೊಂದಿಗಿವೆ ಎಂದು ಬರೆದುಕೊಂಡಿದೆ.

ಎಂಎಸ್​ ಧೋನಿ 2004ರಲ್ಲಿ ಚಿತ್ತಾಗಾಂಗ್​ನಲ್ಲಿ ಬಾಂಗ್ಲಾ ಎದುರು ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಇದರಿಂದ ಭಾರತದ 157ನೇ ಏಕದಿನ ಕ್ರಿಕೆಟಿಗ ಎನಿಸಿಕೊಂಡರು.

2005 ಡಿಸೆಂಬರ್​ ಧೋನಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್​ 251ನೇ ಆಟಗಾರ, ರಾಹುಲ್​ ದ್ರಾವಿಡ್​ ನಾಯಕತ್ವದಲ್ಲಿ ಶ್ರೀಲಂಕಾ ಎದುರು ಮೊದಲ ಟೆಸ್ಟ್​ ಪಂದ್ಯವಾಡಿದರು. ಬಳಿಕ 2006ರಲ್ಲಿ ತಮ್ಮ 5ನೇ ಟೆಸ್ಟ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಫೈಸ್ಲಾಬಾದ್​ನಲ್ಲಿ (148) ಚೊಚ್ಚಲ ಶತಕ ಸಿಡಿಸಿದರು.

2005ರಲ್ಲಿ ಜೈಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧ ಅಜೇಯ 183 ರನ್​ ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್​ ಕೀಪರ್​ವೊಬ್ಬ ಗಳಿಸಿದ ವೈಯಕ್ತಿಕ ಅಧಿಕ ಮೊತ್ತವಾಗಿದೆ.

ಅಲ್ಲದೆ, 2007ರ ಟಿ20 ವಿಶ್ವಕಪ್​, 2011ರ ಏಕದಿನ ವಿಶ್ವಕಪ್​, 2009ರ ಡಿಸೆಂಬರ್​ನಲ್ಲಿ ಭಾರತ ಐಸಿಸಿ ಟೆಸ್ಟ್​ ಕ್ರಿಕೆಟ್​ನಲ್ಲಿ ನಂ.1 ಪಟ್ಟಕ್ಕೇರಿದ್ದು, ಬಳಿಕ 600 ದಿನಗಳ ಈ ಸ್ಥಾನ ಕಾಯ್ದುಕೊಂಡಿತ್ತು.