ಕ್ರೀಡೆ

ಐಸಿಯುನಿಂದ ಶ್ರೇಯಸ್​ ಅಯ್ಯರ್​ ಶಿಫ್ಟ್​! ಸ್ಟಾರ್​ ಕ್ರಿಕೆಟಿಗನ ಆರೋಗ್ಯ ಸ್ಥಿತಿ ಬಗ್ಗೆ ಇಲ್ಲಿದೆ ಅಪ್ಡೇಟ್​​ | Shreyas Iyer

ಸಿಡ್ನಿ: ಟೀಮ್ ಇಂಡಿಯಾದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ( Shreyas Iyer ) ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಬಹಳ ಚಿಂತಿತರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಗಾಯಗೊಂಡ ಅಯ್ಯರ್,​ ಸಿಡ್ನಿ ನಗರದ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಸ್ತುತ, ಐಸಿಯುನಿಂದ ಅಯ್ಯರ್ ಹೊರಬಂದಿದ್ದೇ ಆದರೂ ಅವರ ಆರೋಗ್ಯ​ ಸ್ಥಿತಿ ತೀರ ಗಂಭೀರವಾಗಿದೆ ಎಂಬ ವರದಿಗಳು ಸೂಚಿಸಿವೆ.

7 ದಿನಗಳ ಕಾಲ

ಆಸ್ಟ್ರೇಲಿಯಾದ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಅಮೋಫ ಕ್ಯಾಚ್​ ಹಿಡಿಯಲು ಜಿಗಿದ ಅಯ್ಯರ್​ ಅವರಿಗೆ ಪಕ್ಕೆಲುಬಿನ ಗಾಯವಾಗಿಯಿತು. ಈ ಗಾಯದ ಪರಿಣಾಮದಿಂದಾಗಿ ಆಂತರಿಕ ರಕ್ತಸ್ರಾವವಾಯಿತು. ಹೀಗಾಗಿ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಬ್ಯಾಕ್​ವರ್ಡ್​ ಪಾಯಿಂಟ್​ನಲ್ಲಿ ಹಿಮ್ಮುಖವಾಗಿ ಓಡಿ, ಅದ್ಭುತ ಕ್ಯಾಚ್​ ಹಿಡಿಯುವ ಮೂಲಕ ಅಲೆಕ್ಸ್​ ಕ್ಯಾರಿ ಔಟ್​ ಮಾಡು​ವಲ್ಲಿ ಅಯ್ಯರ್​ ಪ್ರಮುಖ ಪಾತ್ರವಹಿಸಿದರು. ಈ ವೇಳೆ ಆದ ಎಡವಟ್ಟಿನಿಂದ ಅವರಿಗೆ ಬಲವಾದ ಪೆಟ್ಟು ಬಿದ್ದಿತು.

ಎನ್​ಡಿಟಿವಿ ವರದಿ ಪ್ರಕಾರ, ಮುಂದಿನ 7 ದಿನಗಳವರೆಗೂ ಅಯ್ಯರ್​ ಆಸ್ಪತ್ರೆಯಲ್ಲೇ ಉಳಿಯಬೇಕಿದೆ. ವೈದ್ಯರ ತಂಡ ಅವರ ಆರೋಗ್ಯ ಸ್ಥಿತಿ ಮೇಲೆ ಕಣ್ಣಿಟ್ಟಿದ್ದು, ಆಂತರಿಕ ರಕ್ತಸ್ರಾವವಾದ ಜಾಗದಲ್ಲಿ ಇನ್ಫೆಕ್ಷನ್​ ಆಗದಂತೆ ನೋಡಿಕೊಳ್ಳಬೇಕಿದೆ. ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಅಯ್ಯರ್​ ಅವರ ಕುಟುಂಬ ಆದಷ್ಟು ಬೇಗ ಸಿಡ್ನಿಗೆ ತೆರಳಲು ತುರ್ತು ವೀಸಾಗೆ ಅರ್ಜಿ ಸಲ್ಲಿಸಿದೆ. ವಾರಾಂತ್ಯವಾಗಿದ್ದರಿಂದ ಅರ್ಜಿ ಶೀಘ್ರವೇ ಮುಗಿದಿಲ್ಲ. ಮಗನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ವೀಸಾ ನೀಡುವಂತೆ ಸಂಬಂಧಿತ ಅಧಿಕಾರಿಗಳನ್ನು ಶ್ರೇಯಸ್​ ಪೋಷಕರು ವಿನಂತಿಸಿದ್ದಾರೆ ಎಂದು ತಿಳಿದುಬಂದಿದೆ.

ಬಿಸಿಸಿಐ ಹೇಳಿಕೆ ಏನು?

ಇನ್ನೂ ಅಯ್ಯರ್​ ಆರೋಗ್ಯ ಸ್ಥಿತಿಯ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರತಿಕ್ರಿಯೆ ನೀಡಿದೆ. ಕ್ಯಾಚ್ ತೆಗೆದುಕೊಳ್ಳುವಾಗ ಅಯ್ಯರ್​ ಅವರ ಪಕ್ಕೆಲುಬುಗಳಿಗೆ (ಎಡ) ಗಾಯವಾಗಿದೆ. ಪ್ರಸ್ತುತ, ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ,(ಏಜೆನ್ಸೀಸ್).