ಕ್ರೀಡೆ

ಮೈದಾನದಲ್ಲೇ ಅಭಿಷೇಕ್​-ದಿಗ್ವೇಶ್​ ನಡುವೆ ಮಾತಿನ ಚಕಮಕಿ: ಕೊನೆಯಲ್ಲಿ ಬಿಗ್​ ಟ್ವಿಸ್ಟ್​, ವಿಡಿಯೋ ವೈರಲ್​! Abhishek Sharma

Abhishek Sharma : ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್​ ಭಾಗವಾಗಿ ಸೋಮವಾರ (ಮೇ 19) ಸಂಜೆ ಲಖನೌ ಸೂಪರ್ ಜೈಂಟ್ಸ್ (LSG) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳ ನಡುವೆ ಲೀಗ್​ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಎಸ್​ಆರ್​ಎಚ್​ ತಂಡ ರೋಚಕ ಜಯಗಳಿಸಿತು. ಇದರೊಂದಿಗೆ ಲಖನೌ ತಂಡದ ಪ್ಲೇಆಫ್ ಆಸೆ ನುಚ್ಚು ನೂರಾಯಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಖನೌ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 205 ರನ್ ಗಳಿಸಿತು. ಬೃಹತ್ ಗುರಿ ಬೆನ್ನತ್ತಿದ ಎಸ್​ಆರ್​ಎಚ್​, 18.2 ಓವರ್‌ಗಳಲ್ಲಿ 206 ರನ್ ಗಳಿಸಿ ವಿಜೇತರಾಗಿ ಹೊರಹೊಮ್ಮಿತು. ಆದರೆ, ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ದಿಗ್ವೇಶ್ ರಾಥಿ ನಡುವೆ ನಡೆದ ತೀವ್ರ ವಾಗ್ವಾದವೂ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬೃಹತ್​ ಗುರಿ ಮುಟ್ಟಲು ಆರಂಭದಿಂದಲೇ ಅಭಿಷೇಕ್ ಶರ್ಮಾ ಆಕ್ರಮಣಕಾರಿಯಾಗಿ ಆಡಿದರು. ಕೇವಲ 20 ಎಸೆತಗಳನ್ನು ಎದರಿಸಿ 4 ಬೌಂಡರಿ ಹಾಗೂ 6 ಸಿಕ್ಸರ್​ಗಳೊಂದಿಗೆ 59 ರನ್ ಗಳಿಸಿದರು. ಈ ವೇಳೆ ದಿಗ್ವೇಶ್ ರಾಥಿ ಓವರ್​ನಲ್ಲಿ ದೊಡ್ಡ ಹೊಡೆತವನ್ನು ಪ್ರಯತ್ನಿಸಿ ಬೌಂಡರಿ ಲೈನ್‌ನಲ್ಲಿ ಶಾರ್ದೂಲ್ ಠಾಕೂರ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಎಂದಿನಂತೆ, ದಿಗ್ವೇಶ್ ರಾಥಿ ತಮ್ಮ ನೋಟ್‌ಬುಕ್ ಆಚರಣೆ ಮಾಡಿ ಸಂಭ್ರಮಿಸಿದರು.

ಇದೇ ವೇಳೆ ಪೆವಿಲಿಯನ್ ಕಡೆಗೆ ಹೋಗುತ್ತಿದ್ದ ಅಭಿಷೇಕ್, ದಿಗ್ವೇಶ್​ ಅವರನ್ನು ನೋಡಿ ಏನೋ ಹೇಳಿದರು. ಇದರಿಂದ ಆಕ್ರೋಶಗೊಂಡ ದಿಗ್ವೇಶ್ ಆಕ್ರಮಣಕಾರಿಯಾಗಿ ಅಭಿಷೇಕ್ ಕಡೆಗೆ ಧಾವಿಸಿ ವಾಗ್ವಾದ ಆರಂಭಿಸಿದರು. ಇಬ್ಬರ ನಡುವೆ ಸ್ವಲ್ಪ ಹೊತ್ತು ಮಾತಿನ ಚಕಮಕಿ ನಡೆಯಿತು. ಇದೇ ಸಂದರ್ಭದಲ್ಲಿ ಲಖನೌ ತಂಡದ ನಾಯಕ ರಿಷಭ್ ಪಂತ್ ಹಾಗೂ ಸಹ ಆಟಗಾರರು ಮತ್ತು ಅಂಪೈರ್‌ಗಳು ಇಬ್ಬರನ್ನು ತಡೆದರು. ಬಳಿಕ ಅಭಿಷೇಕ್ ಶರ್ಮಾ ಗಂಭೀರವಾಗಿ ಅಲ್ಲಿಂದ ಪೆವಿಲಿಯನ್‌ಗೆ ತೆರಳಿದರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ದಿಗ್ವೇಶ್ ಎಸೆದ ಇನ್ನೊಂದು ಓವರ್‌ನಲ್ಲಿ ಇಶಾನ್ ಕಿಶನ್ (35) ಔಟಾದರು. ಆ ಸಮಯದಲ್ಲೂ ದಿಗ್ವೇಶ್ ಅವರು ಪೆವಿಲಿಯನ್ ಕಡೆಗೆ ನೋಡಿ ನೋಟ್‌ಬುಕ್ ಆಚರಣೆ ಮಾಡಿ ಸಂಭ್ರಮಿಸಿದರು. ಈ ವೇಳೆ ನಾಯಕ ರಿಷಭ್ ಪಂತ್ ಅವರೇ ದಿಗ್ವೇಶ್ ಅವರನ್ನು ಖಂಡಿಸಿದಂತೆ ತೋರುತ್ತಿತ್ತು. ಆದಾಗ್ಯೂ, ಪಂದ್ಯದ ನಂತರ, ದಿಗ್ವೇಶ್ ಮತ್ತು ಅಭಿಷೇಕ್ ಮುಖಾಮುಖಿಯಾದರು. ಉಭಯ ತಂಡಗಳ ಆಟಗಾರರು ಕೈಕುಲುಕುವಾಗಲೂ ಇಬ್ಬರ ನಡುವೆ ಸ್ವಲ್ಪ ಉದ್ವಿಗ್ನತೆ ಉಂಟಾಯಿತು. ಬಳಿಕ ಇಬ್ಬರು ಸಹಜ ಸ್ಥಿತಿಗೆ ಮರಳಿದರು.

ಐಪಿಎಲ್-18ರ ಆರಂಭದಿಂದಲೂ ಲಖನೌ ಸ್ಪಿನ್ನರ್ ದಿಗ್ವೇಶ್ ರಾಥಿ ತಮ್ಮ ಸಂಭ್ರಮಾಚರಣೆಯಿಂದಲೇ ವಿವಾದದಲ್ಲಿ ಸಿಲುಕಿದ್ದಾರೆ. ಅವರು ಈಗಾಗಲೇ ಹಲವಾರು ಬಾರಿ ಭಾರಿ ದಂಡವನ್ನು ಸಹ ಪಾವತಿಸಿದ್ದಾರೆ. ಹಾಗಿದ್ದರೂ, ಅವರು ತಮ್ಮ ಸಂಭ್ರಮಾಚರಣೆಯನ್ನು ನಿಲ್ಲಿಸಿಲ್ಲ. ಇದೀಗ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅದೇ ರೀತಿ ವರ್ತಿಸಿದ್ದಕ್ಕಾಗಿ ಲಖನೌ ನಾಯಕ ರಿಷಭ್ ಪಂತ್ ಕೂಡ ಅವರನ್ನು ಖಂಡಿಸಿದಂತೆ ಕಂಡುಬಂದಿತು. (ಏಜೆನ್ಸೀಸ್​)