ಕ್ರೀಡೆ

ದುಬೈನಲ್ಲಿ ಕಳವಾಗಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ವಾಚ್ ಅಸ್ಸಾಂನಲ್ಲಿ ಪತ್ತೆ! ಓರ್ವನ ಬಂಧನ

ಅಸ್ಸಾಂ: ದುಬೈನಲ್ಲಿ ಕಳವಾಗಿದ್ದ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಅವರ ವಾಚ್ ಇಂದು(ಶನಿವಾರ) ಬೆಳಗ್ಗೆ ಅಸ್ಸಾಂನ ಶಿವಸಾಗರ್ ಜಿಲ್ಲೆಯಲ್ಲಿ ಸಿಕ್ಕಿದ್ದು, ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಾಜಿದ್ ಹುಸೇನ್ ಬಂಧಿತ. ಈತ ದುಬೈನಲ್ಲಿರುವ ಯುಎಇ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈ ಕಂಪನಿಯು ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ದಿ. ಡಿಯಾಗೋ ಮರಡೋನಾ ಅವರ ವಸ್ತುಗಳನ್ನು ಸಂಗ್ರಹಿಸುತ್ತಿತ್ತು. ಇತ್ತೀಚಿಗೆ ಡಿಯಾಗೋ ಮರಡೋನಾ ಅವರ ವಾಚ್​ ಕಳವಾಗಿತ್ತು. ದುಬೈನಲ್ಲಿ ಕೇಸ್​ ದಾಖಲಾಗಿತ್ತು. ಆರೋಪಿಯು ಕಳೆದ ಆಗಸ್ಟ್‌ನಲ್ಲಿ ತಂದೆಗೆ ಆರೋಗ್ಯ ಸರಿ ಇಲ್ಲವೆಂದು ರಜೆ ಮೇಲೆ ಅಸ್ಸಾಂಗೆ ವಾಪಸ್​ ಆಗಿದ್ದ.

ವಾಚ್​ ನಾಪತ್ತೆಯಾಗಿದ್ದರ ಹಿಂದೆ ವಾಜಿದ್​ ಮೇಲೆ ಅನುಮಾನಗೊಂಡ ದುಬೈ ಪೊಲೀಸರು ಭಾರತದ ಅಸ್ಸಾಂ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ವಾಜಿದ್​ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ದಾಳಿ ಮಾಡಿ ಪರಿಶೀಲಿಸಿದಾಗ ವಾಚ್​ ಪತ್ತೆಯಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತ ತಿಳಿಸಿದ್ದಾರೆ.

ವಾಚ್​ ಕದ್ದ ಆರೋಪಿ ವಾಜಿದ್​ ಹುಸೇನ್​

ಉಭಯ ದೇಶಗಳ ಪೊಲೀಸ್ ಪಡೆಗಳ ನಡುವಿನ ಅಂತಾರಾಷ್ಟ್ರೀಯ ಸಮನ್ವಯವನ್ನು ಒಳಗೊಂಡ ಕಾರ್ಯಾಚರಣೆ ಇದಾಗಿದೆ. ಈ ವಾಚ್ ವಾಪಸ್ ನೀಡಲು ದುಬೈ ಪೊಲೀಸ್ ಮುಖ್ಯ ಕಚೇರಿಗೆ ಮಾಹಿತಿ ನೀಡಲಾಗಿದೆ. ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಅರ್ಜೆಂಟೀನಾದ ಫುಟ್​ಬಾಲ್​ ಆಟಗಾರ ಡಿಯಾಗೋ ಮರಡೋನಾ ಅವರು 2020ರ ನವೆಂಬರ್ 25ರಂದು ನಿಧನರಾದರು.