ಕ್ರೀಡೆ

ಇಂಗ್ಲೆಂಡ್​ ಕಿರಿಯರ ಕ್ರಿಕೆಟ್​ ತಂಡದಲ್ಲಿ ಫ್ಲಿಂಟಾಫ್​ ಪುತ್ರನಿಗೆ ಅವಕಾಶ!

ಲಂಡನ್​: ಇಂಗ್ಲೆಂಡ್​ನ ಮಾಜಿ ಆಲ್ರೌಂಡರ್​ ಆಂಡ್ರ್ಯೋ ಫ್ಲಿಂಟಾಫ್ ಪುತ್ರ ರಾಕಿ ಫ್ಲಿಂಟಾಫ್ ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್​ನ 19 ವಯೋಮಿತಿಯ ಕ್ರಿಕೆಟ್​ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.

16 ವರ್ಷದ ರಾಕಿ ಫ್ಲಿಂಟಾಫ್ ಲಂಕಾಶೈರ್​ನ ಸೆಕೆಂಡ್​ ಇಲೆವೆನ್​ ತಂಡದ ಪರ ಮಿಂಚಿರುವ ಹಿನ್ನೆಲೆಯಲ್ಲಿ ಈ ಅವಕಾಶ ಪಡೆದಿದ್ದಾರೆ. 46 ವರ್ಷದ ಆಂಡ್ರ್ಯೋ ಫ್ಲಿಂಟಾಫ್ ಸದ್ಯ ಟಿ20 ವಿಶ್ವಕಪ್​ಗೆ ಇಂಗ್ಲೆಂಡ್​ ತರಬೇತಿ ಬಳಗದ ಭಾಗವಾಗಿ ವೆಸ್ಟ್​ ಇಂಡೀಸ್​ನಲ್ಲಿದ್ದಾರೆ. 79 ಟೆಸ್ಟ್​, 141 ಏಕದಿನ ಮತ್ತು 7 ಟಿ20 ಪಂದ್ಯ ಆಡಿರುವ ಫ್ಲಿಂಟಾಫ್​ 2009ರಲ್ಲಿ ನಿವೃತ್ತಿ ಹೊಂದಿದ್ದರು.

19 ವಯೋಮಿತಿಯ ಮುಂದಿನ ವಿಶ್ವಕಪ್​ 2026ರಲ್ಲಿ ಜಿಂಬಾಬ್ವೆ-ನಮೀಬಿಯಾ ಆತಿಥ್ಯದಲ್ಲಿ ನಡೆಯಲಿದ್ದು, ರಾಕಿ ಫ್ಲಿಂಟಾಫ್ ಅದಕ್ಕೆ ಸಜ್ಜಾಗುತ್ತಿದ್ದಾರೆ. ಆಂಡ್ರ್ಯೋ ಫ್ಲಿಂಟಾಫ್ ಅವರ ಹಿರಿಯ ಪುತ್ರ 18 ವರ್ಷದ ಕೋರಿ ಫ್ಲಿಂಟಾಫ್ ಕೂಡ ಲಂಕಾಶೈರ್​ ಸೆಕೆಂಡ್​ ಇಲೆವೆನ್​ ತಂಡದ ಭಾಗವಾಗಿದ್ದಾರೆ.