ಕ್ರೀಡೆ

ಆಸ್ಟ್ರೇಲಿಯಾದಲ್ಲಿ ಟೀಮ್​ ಇಂಡಿಯಾಗೆ ಕಹಿ ಅನುಭವ: ಇನ್ಮುಂದೆ ಇದಕ್ಕೆ ಅನುಮತಿಯೇ ಇಲ್ಲ | Team India

Team India: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡಕ್ಕೆ ಕಹಿ ಅನುಭವವಾಗಿದೆ. ಪ್ರತಿಷ್ಠಿತ 'ಬಾರ್ಡರ್-ಗವಾಸ್ಕರ್ ಟ್ರೋಫಿ' ಅಂಗವಾಗಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗುತ್ತಿರುವ ಟೀಮ್​ ಇಂಡಿಯಾ, ಇಂದಿನಿಂದ ನಡೆಯಲಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಗೆಲುವಿಗಾಗಿ ಸೆಣಸಾಡಲಿದೆ. ಉಭಯ ತಂಡಗಳ ನಡುವಿನ 'ಪಿಂಕ್ ಬಾಲ್' ಟೆಸ್ಟ್ ಪಂದ್ಯ ಅಡಿಲೇಡ್ ಮೈದಾನದಲ್ಲಿ ನಡೆಯಲಿದೆ.

ಇತ್ತೀಚೆಗೆ ಟೀಮ್​ ಇಂಡಿಯಾ ಆಟಗಾರರು ಪಿಂಕ್​ ಬಾಲ್​ನಲ್ಲಿ ಕಠಿಣ ಅಭ್ಯಾಸ ನಡೆಸುವಾಗ ಕೆಲ ಆಸೀಸ್ ಅಭಿಮಾನಿಗಳು ಭಾರತದ ಕ್ರಿಕಿಟಿಗರನ್ನು ಲೇವಡಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾವುದೇ ಸರಣಿಯಲ್ಲಿ ಭಾರತ ತಂಡದ ಅಭ್ಯಾಸದ ವೇಳೆ ಅಭಿಮಾನಿಗಳಿಗೆ ಅವಕಾಶ ಇರುವುದಿಲ್ಲ.

ಅಡಿಲೇಡ್ ಮೈದಾನದಲ್ಲಿ ಅಭಿಮಾನಿಗಳಿಗೆ ನೆಟ್ಸ್ ಹತ್ತಿರ ಬರಲು ಅವಕಾಶ ನೀಡಲಾಯಿತು. ಅಲ್ಲಿಗೆ ತಲುಪಿದ ಅನೇಕರು, ಭಾರತೀಯ ಆಟಗಾರರನ್ನು ಅಸಭ್ಯ ಭಾಷೆಯಲ್ಲಿ ನಿಂದಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ)ಗೆ ದೂರು ನೀಡಿದೆ. ಇನ್ನು ಮುಂದೆ ಟೀಮ್​ ಇಂಡಿಯಾದ ಅಭ್ಯಾಸದಲ್ಲಿ ಪಾಲ್ಗೊಳ್ಳಲು ಅಭಿಮಾನಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ನಿರ್ಧರಿಸಲಾಗಿದೆ.

ಅಂದಹಾಗೆ ತವರಿನಲ್ಲಿ ನ್ಯೂಜಿಲೆಂಡ್​ ಎದುರು ವೈಟ್​ವಾಷ್​ ಎದುರಿಸಿದ ಹಿನ್ನಡೆಯ ನಡುವೆ ಕಾಂಗರೂ ನೆಲಕ್ಕೆ ಕಾಲಿಟ್ಟಿರುವ ಭಾರತ ತಂಡ ಪರ್ತ್​ನಲ್ಲಿ ಅಮೋಘ ನಿರ್ವಹಣೆ ತೋರುವ ಮೂಲಕ ಆತಿಥೇಯರನ್ನು ಬಗ್ಗುಬಡಿದು ಬೀಗಿದೆ. ಬಾರ್ಡರ್​-ಗಾವಸ್ಕರ್​ ಟ್ರೋಫಿಯ ಎರಡನೇ ಟೆಸ್ಟ್​ ಪಂದ್ಯಕ್ಕೂ ಟೀಮ್​ ಇಂಡಿಯಾ ಇದೇ ವಿಶ್ವಾಸದಲ್ಲಿ ಸಜ್ಜಾಗಿದ್ದು, ನಾಯಕ ರೋಹಿತ್​ ಶರ್ಮ ಸೇರ್ಪಡೆ ಮತ್ತಷ್ಟು ಬಲ ತುಂಬಿದೆ. ಆಸ್ಟ್ರೆಲಿಯಾ ಎದುರು ಅಡಿಲೇಡ್​ ಓವಲ್​ ಅಂಗಣದ ಹೊನಲು ಬೆಳಕಿನಲ್ಲಿ ನಸುಗೆಂಪು ಬಣ್ಣದ ಚೆಂಡಿನಲ್ಲಿ ನಡೆಯಲಿರುವ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವುದು ಭಾರತ ತಂಡದ ಹಂಬಲವಾಗಿದೆ.

ಹಂಗಾಮಿ ನಾಯಕರಾಗಿ ಜಸ್​ಪ್ರೀತ್​ ಬುಮ್ರಾ ಪರ್ತ್​ನಲ್ಲಿ ಉತ್ತಮ ನಿರ್ವಹಣೆ ತೋರಿಸಿದ್ದು, ರೋಹಿತ್​ ಶರ್ಮ ಮೇಲೂ ಈಗ ನಿರೀಕ್ಷೆಗಳು ಹೆಚ್ಚಿವೆ. 4 ವರ್ಷಗಳ ಹಿಂದೆ ಅಡಿಲೇಡ್​ನಲ್ಲೇ ಆಡಿದ ಕೊನೇ ಪಿಂಕ್​ಬಾಲ್​ ಟೆಸ್ಟ್​ನಲ್ಲಿ ಭಾರತ ಕೇವಲ 36 ರನ್​ಗಳಿಗೆ ಆಲೌಟ್​ ಆಗಿ ಮುಗ್ಗರಿಸಿತ್ತು. ಆ ಕಹಿ ನೆನಪು ಮರೆಸಲು ಭಾರತಕ್ಕೆ ಇದು ಉತ್ತಮ ಅವಕಾಶವೆನಿಸಿದೆ. ಜತೆಗೆ ಪಿಂಕ್​ಬಾಲ್​ನಲ್ಲಿ ಬಲಿಷ್ಠ ದಾಖಲೆ ಹೊಂದಿರುವ ಆಸ್ಟ್ರೆಲಿಯಾ ಈ ಬಾರಿ ಮತ್ತಷ್ಟು ಸವಾಲೆನಿಸಲಿದೆ. ರೋಹಿತ್​ ಜತೆಗೆ ಕೈ ಹೆಬ್ಬೆರಳು ಗಾಯದಿಂದ ಚೇತರಿಸಿಕೊಂಡಿರುವ ಶುಭಮಾನ್​ ಗಿಲ್​ ಕೂಡ ಈ ಬಾರಿ ಭಾರತದ ಬ್ಯಾಟಿಂಗ್​ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಪರ್ತ್​ನಲ್ಲಿ ಶತಕ ಸಿಡಿಸಿ ಲಯಕ್ಕೆ ಮರಳಿರುವ ವಿರಾಟ್​ ಕೊಹ್ಲಿ ಈಗಾಗಲೆ ಆಸೀಸ್​ ತಲೆನೋವು ಹೆಚ್ಚಿಸಿದ್ದಾರೆ. (ಏಜೆನ್ಸೀಸ್​)