ಆರ್ಸಿಬಿ ತಂಡದ ವಿದೇಶಿ ಆಟಗಾರ್ತಿಯರು
- ಯಾವುದೇ ಭದ್ರತೆ ಇಲ್ಲದೆ ಜನನಿಬಿಡ ರಸ್ತೆಯಲ್ಲೇ ಓಡಾಡಿದ ಆರ್ಸಿಬಿ ಆಟಗಾರ್ತಿಯರು
- ಭಾರತದಲ್ಲಿ ತಮ್ಮ ಭದ್ರತೆಯನ್ನು ಪ್ರಶ್ನೆ ಮಾಡಿದ ಬಾಂಗ್ಲಾದೇಶದ ಮುಖವಾಡ ಕಳಚಿ ಬಿತ್ತು
- ವಡೋದರಾದಲ್ಲಿ ಬೀದಿ ಸುತ್ತಿದ ಲಾರೆನ್ ಬೆಲ್, ನಾಡಿನ್ ಡಿ ಕ್ಲರ್ಕ್ ಮತ್ತು ಜಾರ್ಜಿಯಾ ವೊಲ್
ನವದೆಹಲಿ: ಯಾವುದೇ ಭದ್ರತೆ ಇಲ್ಲದೆ ಜನನಿಬಿಡ ರಸ್ತೆಯಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ವಿದೇಶಿ ಆಟಗಾರ್ತಿಯರು ಆರಾಮಾಗಿ ಅಡ್ಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ತಮ್ಮ ಭದ್ರತೆಯನ್ನು ಪ್ರಶ್ನೆ ಮಾಡಿದ ಬಾಂಗ್ಲಾದೇಶದ ಮುಖವಾಡ ಕಳಚಿ ಬಿದ್ದಿದೆ.
ಪ್ರಸ್ತುತ, ದೇಶದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ನಡೆಯುತ್ತಿದೆ. ದಿನದಿಂದ ದಿನಕ್ಕೆ ಭರ್ಜರಿ ಮನರಂಜನೆ ನೀಡುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಈಗಾಗಲೇ 13 ಪಂದ್ಯಗಳು ಪೂರ್ಣಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸತತ 5 ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿದೆ. ಉಳಿದ ತಂಡಗಳು ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಕಷ್ಟು ಶ್ರಮ ಪಡುತ್ತಿವೆ.
ಆರ್ಸಿಬಿ ತಂಡ ತನ್ನ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಜನವರಿ 24ರಂದು ಗುಜರಾತಿನ ವಡೋದರಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಇಡೀ ತಂಡ ವಡೋದರಾದಲ್ಲಿ ಬೀಡುಬಿಟ್ಟಿದ್ದು, ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಇದರ ನಡುವೆ ಆರ್ಸಿಬಿ ಆಟಗಾರ್ತಿಯರಿಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.
ಊರು ಸುತ್ತಿದ ಆರ್ಸಿಬಿ ಸ್ಟಾರ್ಸ್
ಆರ್ಸಿಬಿ ತಂಡದ ವಿದೇಶಿ ಆಟಗಾರ್ತಿಯರಾದ ಲಾರೆನ್ ಬೆಲ್, ನಾಡಿನ್ ಡಿ ಕ್ಲರ್ಕ್ ಮತ್ತು ಜಾರ್ಜಿಯಾ ವೊಲ್ ಅವರು ವಡೋದರಾದಲ್ಲಿ ಬೀದಿ ಬೀದಿಯನ್ನು ಸುತ್ತಾಡಿದ್ದಾರೆ. ಅದು ಕೂಡ ಯಾವುದೇ ಭದ್ರತೆ ಇಲ್ಲದೆ. ಒಬ್ಬನೇ ಅಂಗರಕ್ಷಕ ಬಿಟ್ಟರೆ ಬೇರೆ ಯಾರೂ ಕೂಡ ಆಟಗಾರ್ತಿಯರ ಹತ್ತಿರವೂ ಇಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಜಾಲತಾಣದಲ್ಲಿ ವೈರಲ್ ಆಗಿ, ಚರ್ಚೆ ಹುಟ್ಟುಹಾಕಿದೆ. ಕೆಲವರು ಆಟಗಾರ್ತಿಯ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರೆ, ಇನ್ನು ಕೆಲವರು ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಾಂಗ್ಲಾ ಮುಖವಾಡ ಬಯಲು
ಆರ್ಸಿಬಿ ಆಟಗಾರ್ತಿಯರು ಯಾವುದೇ ಭದ್ರತೆ ಇಲ್ಲದೇ ವಡೋದರಾ ಬೀದಿಗಳಲ್ಲಿ ಆರಾಮಾಗಿ ಓಡಾಡಿದ್ದಾರೆ. ಆದರೆ, ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿ ಭಾರತದಲ್ಲಿ ತಮ್ಮ ಆಟಗಾರರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದಲ್ಲಿ ಹಿಂದೂಗಳ ಸರಣಿ ಹತ್ಯೆ ನಡೆಯುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೂ, ಹಿಂದೂಗಳ ಮೇಲಿನ ದೌರ್ಜನ್ಯ ಬಾಂಗ್ಲಾದಲ್ಲಿ ನಿಂತಿಲ್ಲ. ಇದೇ ಕಾರಣಕ್ಕೆ ಬಾಂಗ್ಲಾ ಆಟಗಾರ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಹೊರಗಡೆ ಹಾಕಲಾಯಿತು. ಇದರಿಂದ ಹತಾಸೆಗೊಂಡಿರುವ ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿ, ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಆಡುವುದಿಲ್ಲ ಎಂದು ಹೇಳುತ್ತಿದೆ.
ಭಾರತದಲ್ಲಿ ನಮಗೆ ಸೂಕ್ತ ಭದ್ರೆತ ಸಿಗುವುದಿಲ್ಲ ಎಂಬ ಚಿಂತೆ ಇದೆ. ಹೀಗಾಗಿ, ಟಿ20 ವಿಶ್ವಕಪ್ ಪಂದ್ಯಗಳನ್ನು ನಾವು ಭಾರತದಲ್ಲಿ ಆಡುವುದಿಲ್ಲ. ನಮ್ಮ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರ ಮಾಡಿ ಎಂದು ಬಾಂಗ್ಲಾದೇಶ ಆಗ್ರಹಿಸಿದೆ. ಆದರೆ, ಬಾಂಗ್ಲಾ ಮಾತಿಗೆ ಐಸಿಸಿ ಮಣೆ ಹಾಕಿಲ್ಲ. ಆಡುವುದಾದರೆ, ಭಾರತದಲ್ಲೇ ಆಡಿ ಎಂದಿದೆ. ಈ ಬಗ್ಗೆ ಬಾಂಗ್ಲಾ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಇದರ ನಡುವೆ, ಆರ್ಸಿಬಿಯ ವಿದೇಶಿ ಆಟಗಾರ್ತಿಯರು ಆರಾಮಾಗಿ ವಡೋದರಾ ರಸ್ತೆಯಲ್ಲಿ ಓಡಾಡುತ್ತಿರುವುದು ಭಾರತದಲ್ಲಿನ ಶಾಂತಿ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಈ ವಿಡಿಯೋವನ್ನು ಮುಂದಿಟ್ಟುಕೊಂಡು ಬಾಂಗ್ಲಾ ಕ್ರಿಕೆಟ್ ಮಂಡಳಿಯನ್ನು ಭಾರತೀಯ ತರಾಟೆಗೆ ತೆಗೆದುಕೊಂಡಿದ್ದಾರೆ, (ಏಜೆನ್ಸೀಸ್).