ಮುಂಬೈ: ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ಪಂದ್ಯದಲ್ಲಿ ಇಂದು (ಮಾರ್ಚ್ 09) ಟೀಮ್ ಇಂಡಿಯಾ ನ್ಯೂಜಿಲೆಂಡ್ನ ಸವಾಲನ್ನು ಎದುರಿಸಲಿದ್ದು, ಭಾರತ ತಂಡ ಗೆಲ್ಲಲೆಂದು ದೇಶಾದ್ಯಂತ ಅಭಿಮಾನಿಗಳು ಪೂಜೆ, ಹೋಮ-ಹವನ ಮಾಡಿಸುತ್ತಿದ್ದಾರೆ. ಲೀಗ್ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಸಂಪೂರ್ಣ ಆತ್ಮವಿಶ್ವಾಸದಲ್ಲಿರುವ ಭಾರತ ತಂಡವು ತನ್ನ ಅಜೇಯ ಓಟವನ್ನು ಮುಂದುವರೆಸಲು ಸಜ್ಜಾಗಿದೆ.
ಫೆಬ್ರವರಿ 19ರಂದು ಆರಂಭವಾದ ಟೂರ್ನಿಯಲ್ಲಿ (Champions Trophy) ಭಾರತ ತಂಡ ಅಜೇಯವಾಗಿ ಫೈನಲ್ ಪ್ರವೇಶಿಸಿದ್ದು, ರೋಹಿತ್ ಶರ್ಮ ನಾಯಕತ್ವಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಆದರೆ, ರೋಹಿತ್ ಶರ್ಮ ಫಾರ್ಮ್ ಅಭಿಮಾನಿಗಳು ಹಾಗೂ ತಂಡದ ಮ್ಯಾನೇಜ್ಮೆಂಟ್ಅನ್ನು ಚಿಂತೆಗೀಡು ಮಾಡಿದೆ. ಹಾಲಿ ಟೂರ್ನಿಯಲ್ಲಿ 26ರ ಸರಾಸರಿಯಲ್ಲಿ 104 ರನ್ ಗಳಿಸಿರುವ ರೋಹಿತ್ ಶರ್ಮ ಕಡೆಯುಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ.
ನಾಯಕನಾಗಿ ತಂಡವನ್ನು ಅಜೇಯವಾಗಿ ಮುನ್ನಡೆಸಿದರಾದರು ಅವರ ಬ್ಯಾಟ್ನಿಂದ ಹೆಚ್ಚು ರನ್ ಹರಿದು ಬಂದಿಲ್ಲ. ಹಾಲಿ ಟೂರ್ನಿಯಲ್ಲಿ ರೋಹಿತ್ ಶರ್ಮ ಗರಿಷ್ಠ ಸ್ಕೋರ್ 41 ಆಗಿದ್ದು, ನಾಯಕನ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಇಡಲಾಗಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮ ಶತಕ ಬಾರಿಸಲಿದ್ದಾರೆ ಎಂದು ಪುಟ್ಟ ಬಾಲಕಿಯೊಬ್ಬಳು ಭವಿಷ್ಯ ನುಡಿದಿದ್ದು, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಈ ವಿಡಿಯೋವನ್ನು ಹಂಚಿಕೊಂಡಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಆರು ವರ್ಷದ ಬಾಲಕಿ ಧ್ರುವಿ ರವೀಂದ್ರ ಧೋಡ್ಕೆ, ರೋಹಿತ್ ಶರ್ಮಾ ಫೈನಲ್‌ನಲ್ಲಿ ಶತಕ ಬಾರಿಸಿ ಭಾರತವನ್ನು ಗೆಲುವಿನತ್ತ ಕೊಂಡೊಯ್ಯುತ್ತಾರೆ ಎಂದು ಭವಿಷ್ಯ ನುಡಿದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಬಾಲಕಿಯ ಆಶಯದಂತೆ ರೋಹಿತ್ ಶತಕ ಬಾರಿಸಲಿ ಎಂದು ಕ್ರೀಡಾಭಿಮಾನಿಗಳು ಆಶಿಸಿ ಕಮೆಂಟ್ ಹಾಕುತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಒಟ್ಟು 28 ಏಕದಿನ ಸರಣಿ ಆಡಿರುವ ರೋಹಿತ್ ಶರ್ಮ ಕಿವೀಸ್ ವಿರುದ್ಧ ಅಷ್ಟಾಗಿ ಪ್ರಭಾವಶಾಲಿಯಾಗಿಲ್ಲ ಎಂದು ಅಂಕಿ ಅಂಶಗಳು ತಿಳಿಸಿವೆ. ನ್ಯೂಜಿಲೆಂಡ್ ವಿರುದ್ಧ 36.92 ಸರಾಸರಿಯಲ್ಲಿ ಐದು ಅರ್ಧಶತಕ, ಎರಡು ಶತಕ ಒಳಗೊಂಡಂತೆ 997 ರನ್‌ಗಳನ್ನು ಗಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮರಿಂದ ಭರ್ಜರಿ ಪ್ರದರ್ಶನದ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.