ಬೆಂಗಳೂರು: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ 2011ರ ವಿಶ್ವಕಪ್ ವಿಜೇತ ತಂಡದ ಏಕೈಕ ಸದಸ್ಯರಾಗಿರುವ ವಿರಾಟ್ ಕೊಹ್ಲಿಗೆ (2011, 2015, 2019) ಇದು 4ನೇ ವಿಶ್ವಕಪ್ ಎನಿಸಿದೆ.
ಉಳಿದಂತೆ ರೋಹಿತ್ ಶರ್ಮ, ಮೊಹಮದ್ ಶಮಿ, ರವೀಂದ್ರ ಜಡೇಜಾಗೆ (2015, 2019) ಇದು 3ನೇ ವಿಶ್ವಕಪ್ ಆಗಿದ್ದರೆ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ (2019), ಅಕ್ಷರ್ ಪಟೇಲ್ಗೆ (2015) ಇದು 2ನೇ ವಿಶ್ವಕಪ್. ಶ್ರೇಯಸ್ ಅಯ್ಯರ್, ಶುಭಮಾನ್ ಗಿಲ್, ಸೂರ್ಯಕುಮಾರ್, ಇಶಾನ್ ಕಿಶನ್, ಮೊಹಮದ್ ಸಿರಾಜ್, ಶಾರ್ದೂಲ್ ಠಾಕೂರ್ಗೆ ಇದು ಚೊಚ್ಚಲ ವಿಶ್ವಕಪ್ ಆಗಿದೆ.
ಕನ್ನಡಿಗ ಕೆಎಲ್ ರಾಹುಲ್ 2019ರ ವಿಶ್ವಕಪ್ನಲ್ಲಿ ಆಡಿದ್ದರೂ, ಆಗ ಅವರು ಕೇವಲ ಬ್ಯಾಟರ್ ಆಗಿದ್ದರು. ಹೀಗಾಗಿ ಈ ಬಾರಿ ಸಯ್ಯದ್ ಕಿರ್ಮಾನಿ (1983) ಮತ್ತು ರಾಹುಲ್ ದ್ರಾವಿಡ್ (2003) ನಂತರದಲ್ಲಿ ಏಕದಿನ ವಿಶ್ವಕಪ್ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸ್ಥಾನ ಸಂಪಾದಿಸಿದ 3ನೇ ಕನ್ನಡಿಗ ಎಂಬ ಹೆಗ್ಗಳಿಕೆ ಕೆಎಲ್ ರಾಹುಲ್ ಅವರದಾಗಿದೆ.