ನವದೆಹಲಿ: ರಣಜಿಯಲ್ಲಿ ಗುರುವಾರ ಒಂದೇ ದಿನ 4 ತ್ರಿಶತಕ ದಾಖಲಾಯಿತು. ಗೋವಾ ಪರ ಕಶ್ಯಪ್ ಬಾಕ್ಲೆ (300*ರನ್, 269 ಎಸೆತ, 39 ಬೌಂಡರಿ, 2 ಸಿಕ್ಸರ್) ಮತ್ತು ಸ್ನೇಹನ್ ಕೌಥಂಕರ್ (314*ರನ್, 215 ಎಸೆತ, 45 ಬೌಂಡರಿ, 4 ಸಿಕ್ಸರ್) ತ್ರಿಶತಕ ಸಿಡಿಸಿದರು. ರಣಜಿಯಲ್ಲಿ ಒಂದೇ ಇನಿಂಗ್ಸ್ನಲ್ಲಿ ಅವಳಿ ತ್ರಿಶತಕ ದಾಖಲಾದ 2ನೇ ದೃಷ್ಟಾಂತ ಇದಾಗಿದೆ. ಈ ಮುನ್ನ 1989-90ರಲ್ಲಿ ತಮಿಳುನಾಡಿನ ಡಬ್ಲ್ಯುವಿ ರಾಮನ್&ಕೃಪಾಲ್ ಸಿಂಗ್ ಒಂದೇ ಇನಿಂಗ್ಸ್ನಲ್ಲಿ ತ್ರಿಶಕ ಸಿಡಿಸಿದ್ದರು.
ಕಶ್ಯಪ್-ಸ್ನೇಹಲ್ ಮುರಿಯದ 3ನೇ ವಿಕೆಟ್ಗೆ 606 ರನ್ ಜತೆಯಾಟವಾಡಿದರು. ಇದು ರಣಜಿ ಇತಿಹಾಸದಲ್ಲೇ ಗರಿಷ್ಠ ಜತೆಯಾಟವಾಗಿದೆ. ಮಹಾರಾಷ್ಟ್ರದ ಸ್ವಪ್ನಿಲ್ ಗುಗಲೆ-ಅಂಕಿತ್ ಬಾವ್ನೆ 594 ರನ್ ಜತೆಯಾಟವಾಡಿದ್ದು ಹಿಂದಿನ ದಾಖಲೆ. ಅರುಣಾಚಲ ಪ್ರದೇಶ ವಿರುದ್ಧ ಗೋವಾ 2 ವಿಕೆಟ್ಗೆ 727 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಶ್ರೀಲಂಕಾದ ಮಹೇಲ ಜಯವರ್ಧನೆ-ಕುಮಾರ ಸಂಗಕ್ಕರ 2006ರಲ್ಲಿ 624 ರನ್ ಜತೆಯಾಟವಾಡಿದ ವಿಶ್ವದಾಖಲೆಯನ್ನು ಕೇವಲ 18 ರನ್ಗಳಿಂದ ತಪ್ಪಿಸಿಕೊಂಡರು.
ಮಹಿಪಾಲ್ ಲೊಮ್ರೊರ್ (300*ರನ್, 360 ಎಸೆತ, 25 ಬೌಂಡರಿ, 13 ಸಿಕ್ಸರ್) ರಾಜಸ್ಥಾನ ಪರ ಮತ್ತು ಚೇತನ್ ಬಿಷ್ಟ್ (304*ರನ್, 423 ಎಸೆತ, 33 ಬೌಂಡರಿ, 5 ಸಿಕ್ಸರ್) ನಾಗಾಲ್ಯಾಂಡ್ ಪರ ತ್ರಿಶತಕ ಸಿಡಿಸಿದರು.