ಕ್ರೀಡೆ

ಶ್ರೀಲಂಕಾ - ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನವೇ ಕಾಡಿದ ಕೋವಿಡ್​-19

ಢಾಕಾ: ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕೇವಲ ಒಂದು ಗಂಟೆ ಬಾಕಿ ಇರುವಾಗಲೇ ಕೋವಿಡ್​-19 ಮಹಾಮಾರಿ ಕಾಡಿದೆ. ಭಾನುವಾರ ಪಂದ್ಯ ಆರಂಭಕ್ಕೂ ಮುನ್ನ ಶ್ರೀಲಂಕಾ ತಂಡದ ಮೂವರಿಗೆ ಕೋವಿಡ್​-19 ಕಾಣಿಸಿಕೊಂಡಿತು. ಕೋವಿಡ್​ ಅಬ್ಬರದ ನಡುವೆಯೂ ಮೊದಲ ಏಕದಿನ ಪಂದ್ಯ ನಿಗದಿತ ವೇಳೆಗೆ ಆರಂಭಗೊಂಡಿತು. ಶ್ರೀಲಂಕಾ ತಂಡ ಬಾಂಗ್ಲಾದೇಶ ಪ್ರವಾಸದಲ್ಲಿದ್ದು, ಮೇ 25 ಹಾಗೂ 28 ರಂದು ಕ್ರಮವಾಗಿ 2ನೇ ಹಾಗೂ 3ನೇ ಏಕದಿನ ಪಂದ್ಯವನ್ನಾಡಲಿದೆ.

ಶ್ರೀಲಂಕಾದ ಇಬ್ಬರು ಆಟಗಾರರು ಹಾಗೂ ಕೋಚ್​ ಸೇರಿದಂತೆ ಮೂರು ಮಂದಿಗೆ ಭಾನುವಾರ ಕೋವಿಡ್​-19 ದೃಢಪಟ್ಟಿದೆ ಎಂದು ಕ್ರಿಕೆಟ್​ ವೆಬ್​ಸೈಟ್​ವೊಂದು ಪ್ರಕಟಿಸಿದೆ. ಆದರೆ, ಪಂದ್ಯ ರದ್ದತಿ ಅಥವಾ ಮುಂಡೂಡಿಕೆ ಕುರಿತು ತಳ್ಳಿಹಾಕಿದ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ನಿಗದಿತ ವೇಳೆ ಪಂದ್ಯ ಆರಂಭಿಸಿದೆ. ಮೂಲಗಳ ಪ್ರಕಾರ ಬೌಲಿಂಗ್​ ಕೋಚ್​ ಚಮಿಂದಾ ವಾಸ್​, ಇಸುರು ಉದಾನ ಹಾಗೂ ಶ್ರೀರನ್​ ಫೆರ್ನಾಂಡೊಗೆ ಕೋವಿಡ್​ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ಮೂರು ಪಂದ್ಯಗಳ ಏಕದಿನ ಸರಣಿಯೂ ವಿಶ್ವಕಪ್​ ಸೂಪರ್​ ಲೀಗ್​ ಭಾಗವಾಗಿ ನಡೆಯುತ್ತಿದೆ. ಶೇರ್​ ಬಾಂಗ್ಲಾ ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಜಯಿಸಿದ ಬಾಂಗ್ಲಾದೇಶ ತಂಡದ ನಾಯಕ ತಮೀಮ್​ ಇಕ್ಬಾಲ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡರು.