ನವದೆಹಲಿ: ಕ್ರೀಡಾ ಜಗತ್ತಿನಲ್ಲಿ ಕ್ರಿಕೆಟ್ ಒಂದು ವಿಸ್ಮಯಕಾರಿ ಆಟವಾಗಿದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಇದೀಗ ವಿಸ್ಮಯಕಾರಿ ಘಟನೆಯೊಂದರಲ್ಲಿ 17 ವರ್ಷದ ಆಟಗಾರ್ತಿ ಒಂದೇ ಒಂದು ರನ್ ನೀಡದೆ 7 ವಿಕೆಟ್ ಪಡೆದು ದಾಖಲೆ ಬರೆದಿರುವ ಅಪರೂಪದ ಕ್ಷಣ ಬೆಳಕಿಗೆ ಬಂದಿದೆ.
ಮಂಗೋಲಿಯಾ ಹಾಗೂ ಇಂಡೋನೇಷ್ಯಾ ಮಹಿಳಾ ತಂಡಗಳ ನಡುವಿನ ಪಂದ್ಯ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಇಂಡೋನೇಷ್ಯಾದ ಬೌಲರ್ ರೊಹ್ಮಾಲಿಯಾ ಒಂದೇ ಒಂದು ರನ್ ನೀಡದೆ 7 ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
3.2 ಓವರ್ಗಳನ್ನು ಬೌಲ್ ಮಾಡಿದ ರೊಹ್ಮಾಲಿಯಾ ಒಂದೇ ಒಂದು ರನ್ ನೀಡದೆ 7 ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ. ಕ್ರಿಕೆಟ್ನಲ್ಲಿ ಒಬ್ಬ ಬೌಲರ್ ಏಳು ವಿಕೆಟ್ ಕಬಳಿಸುವುದು ಸಾಮಾನ್ಯ. ಆದರೆ ಒಂದೇ ಒಂದು ರನ್ ಬಿಟ್ಟುಕೊಡದೆ ಈ ಸಾಧನೆ ಮಾಡಿರುವುದು ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.
ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಯಾರು ಮಾಡಲಾಗದ ಈ ವಿಶಿಷ್ಟ ಸಾಧನೆಯನ್ನು ಇಂಡೋನೇಷ್ಯಾ ಮಹಿಳಾ ತಂಡದ ಆಟಗಾರ್ತಿ ಮಾಡಿರುವುದು ಕ್ರೀಡಾ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಡೋನೇಷ್ಯಾ ಮಹಿಳಾ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ನಂದಾ ಸಕಾರಿ (44 ಎಸೆತಗಳಲ್ಲಿ 61) ಬ್ಯಾಟಿಂಗ್ ಫಲವಾಗಿ 151 ರನ್ ಗಳಿಸಿತು.
ಚೇಸಿಂಗ್ ಆರಂಭಿಸಿದ ಮಂಗೋಲಿಯಾ ತಂಡವನ್ನು ರೊಹ್ಮಾಲಿಯಾ ಕಟ್ಟಿಹಾಕಿದರು. ಅವರ ದಾಳಿಗೆ ನಲುಗಿದ ಎದುರಾಳಿ ತಂಡದ ಒಬ್ಬ ಬ್ಯಾಟರ್ ಕೂಡ ಎರಡಂಕಿ ದಾಟಲಿಲ್ಲ. ತಂಡದ ಪರ ಸೆಂಡುರೆನ್ (7) ಅಧಿಕ ಸ್ಕೋರರ್ ಎನಿಸಿಕೊಂಡರು. ಬೌಲಿಂಗ್ನಲ್ಲಿ ಮಿಂಚಿದ ರೋಹ್ಮಾಲಿಯಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.