ಕ್ರೀಡೆ

ವರ್ಷಾಂತ್ಯದ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತದಿಂದ ಬೃಹತ್ ತಂಡ!

ನವದೆಹಲಿ: ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವರ್ಷಾಂತ್ಯದ ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ 23-25 ಆಟಗಾರರ ಬೃಹತ್ ತಂಡದೊಂದಿಗೆ ಪ್ರಯಾಣಿಸುವ ನಿರೀಕ್ಷೆ ಇದೆ. ಕರೊನಾ ವೈರಸ್ ಹಾವಳಿಯ ನಡುವೆ, ಹೆಚ್ಚಿನ ಆಟಗಾರರಿದ್ದರೆ ಅಭ್ಯಾಸಕ್ಕೂ ಅನುಕೂಲವಾಗಲಿದೆ. ಅಲ್ಲದೆ, ಆಟಗಾರನೊಬ್ಬನಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡರೆ ಬದಲಿ ವ್ಯವಸ್ಥೆಯೂ ಸಿದ್ಧವಾಗಿರುತ್ತದೆ.

ಕಳೆದ ಇಂಗ್ಲೆಂಡ್ ಪ್ರವಾಸಕ್ಕೆ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ದೊಡ್ಡ ತಂಡದೊಂದಿಗೆ ತೆರಳಿದ್ದವು. ಹೀಗಾಗಿ ಭಾರತ ಕೂಡ ಇದೇ ತಂತ್ರ ಅನುಸರಿಸಬಹುದು. ಇದರಿಂದ ನೆಟ್ ಬೌಲರ್‌ಗಳನ್ನು ಹೊರಗಿನಿಂದ ಕರೆಸಿಕೊಳ್ಳುವ ಅಗತ್ಯ ಬೀಳುವುದಿಲ್ಲ. ಅಲ್ಲದೆ ಭಾರತ ಎ ತಂಡದ ಆಟಗಾರರೂ ಜತೆಯಲ್ಲೇ ಇದ್ದರೆ, ಬಯೋ-ಬಬಲ್‌ನಲ್ಲಿ ಚತುರ್ದಿನ ಅಭ್ಯಾಸ ಪಂದ್ಯವನ್ನೂ ಆಡಲು ಅವಕಾಶ ಲಭಿಸುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರವಾಸಕ್ಕೆ ಅಕ್ಟೋಬರ್ 2 ಅಥವಾ 3ನೇ ವಾರದಲ್ಲಿ ಭಾರತ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ. ಐಪಿಎಲ್‌ನಲ್ಲಿ ಪ್ಲೇಆ್ ಹಂತಕ್ಕೇರದ ತಂಡಗಳ ಟೆಸ್ಟ್ ಆಟಗಾರರು ಮತ್ತು ಕೋಚ್ ರವಿಶಾಸಿ ಸಹಿತ ತರಬೇತಿ ಬಳಗದ ಸಿಬ್ಬಂದಿ ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಮೊದಲ ವಾರದಲ್ಲೇ ಆಸೀಸ್‌ಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಉಳಿದವರು ಐಪಿಎಲ್ ಟೂರ್ನಿ ಮುಗಿದ ಬಳಿಕ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಆಯ್ಕೆಗಾರರ ಮುಂದುವರಿಕೆ ನಿರೀಕ್ಷೆ

ರಾಷ್ಟ್ರೀಯ ಆಯ್ಕೆ ಸಮಿತಿಯ ಮೂವರು ಸದಸ್ಯರಾದ ದೇವಾಂಗ್ ಗಾಂಧಿ, ಜತಿನ್ ಪರಾಂಜಪೆ ಮತ್ತು ಶರಣ್‌ದೀಪ್ ಸಿಂಗ್ ಅವರ ಅವಧಿ ಸೆಪ್ಟೆಂಬರ್ 30ರಂದು ಅಂತ್ಯಗೊಳ್ಳಲಿದ್ದರೂ, ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡದ ಆಯ್ಕೆ ಸಭೆಯಲ್ಲಿ ಅವರೂ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಲಿ ಪರಿಸ್ಥಿತಿಯಲ್ಲಿ ಹೊಸ ಆಯ್ಕೆಗಾರರನ್ನು ಸಂದರ್ಶನ ಮಾಡಿ ನೇಮಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಹಾಲಿ ಸಮಿತಿಯನ್ನೇ ಸದ್ಯಕ್ಕೆ ಮುಂದುವರಿಸುವ ನಿರೀಕ್ಷೆ ಇದೆ.

ಹೊಸ ಆಯ್ಕೆಗಾರರ ಸಂದರ್ಶನದ ಬಗ್ಗೆ ತಮಗಿನ್ನೂ ಬಿಸಿಸಿಐನಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಸದಸ್ಯರಾದ ಮದನ್ ಲಾಲ್, ರುದ್ರಪ್ರತಾಪ್ ಸಿಂಗ್ ಮತ್ತು ಸುಲಕ್ಷಣಾ ನಾಯ್ಕ ತಿಳಿಸಿದ್ದಾರೆ. ಈ ಮುನ್ನ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಅವಧಿ 2019ರ ಸೆಪ್ಟೆಂಬರ್‌ನಲ್ಲೇ ಮುಗಿದಿದ್ದರೂ, ಈ ವರ್ಷ ಮಾರ್ಚ್‌ವರೆಗೆ ಮುಂದುರಿದಿದ್ದರು.