ಕ್ರೀಡೆ

2032ರ ಒಲಿಂಪಿಕ್ಸ್​ ಬಳಿಕ ಡೆಮಾಲಿಷ್​ ಆಗುತ್ತೆ ಪ್ರತಿಷ್ಠಿತ ಗಬ್ಬಾ ಕ್ರಿಕೆಟ್​ ಸ್ಟೇಡಿಯಂ! ಕಾರಣ ಹೀಗಿದೆ... Gabba stadium

Gabba stadium : ಆಸ್ಟ್ರೇಲಿಯಾದ ಬ್ರಿಸ್ಬೇನ್​ನಲ್ಲಿರುವ ಪ್ರತಿಷ್ಠಿತ ಗಬ್ಬಾ ಕ್ರಿಕೆಟ್ ಕ್ರೀಡಾಂಗಣವು ಶಿಥಿಲಗೊಂಡಿರುವುದಾಗಿ ಕ್ವೀನ್ಸ್‌ಲ್ಯಾಂಡ್ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ. 2032ರ ಒಲಿಂಪಿಕ್ಸ್ ನಂತರ ಗಬ್ಬಾ ಕ್ರೀಡಾಂಗಣವನ್ನು ಕೆಡವಲು ಸರ್ಕಾರ ನಿರ್ಧರಿಸಿದೆ.

2032ರ ಒಲಿಂಪಿಕ್ಸ್ ಅನ್ನು ಆಯೋಜಿಸಲು ವಿಕ್ಟೋರಿಯಾ ಪಾರ್ಕ್ ಪ್ರದೇಶದಲ್ಲಿ 63,000 ಪ್ರೇಕ್ಷಕರ ಸಾಮರ್ಥ್ಯದ ಹೊಸ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಒಲಿಂಪಿಕ್ಸ್ ನಂತರ ಕ್ರಿಕೆಟ್ ಈ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳಲಿದೆ. ಇದನ್ನು ಇತ್ತೀಚೆಗೆ ಕ್ವೀನ್ಸ್‌ಲ್ಯಾಂಡ್ ಪ್ರೀಮಿಯರ್ ಡೇವಿಡ್ ಕ್ರಿಸಾಫುಲ್ಲಿ ಘೋಷಣೆ ಮಾಡಿದ್ದಾರೆ.

2032ರ ಒಲಿಂಪಿಕ್ಸ್ ಆಯೋಜಿಸಲು ಸಿದ್ಧವಾಗಿರುವ ಕ್ವೀನ್ಸ್‌ಲ್ಯಾಂಡ್ ಸರ್ಕಾರಕ್ಕೆ ಗಬ್ಬಾ ಕ್ರೀಡಾಂಗಣವು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ, ಗಬ್ಬಾ ಕ್ರೀಡಾಂಗಣವೂ ಶಿಥಿಲಗೊಂಡಿದೆ. ಇದನ್ನು ನವೀಕರಿಸಲು ಆರಂಭದಲ್ಲಿ ಯೋಜಿಸಲಾಗಿತ್ತು. ಆದಾಗ್ಯೂ, ಹೆಚ್ಚುತ್ತಿರುವ ಅನಗತ್ಯ ವೆಚ್ಚಗಳಿಂದಾಗಿ ಈ ನಿರ್ಧಾರವನ್ನು ಕೈಬಿಡಲಾಗಿದೆ.

ಬಳಿಕ ಈ ಕುರಿತು ಹೆಚ್ಚಿನ ಚರ್ಚೆ ನಡೆಸಿದ ನಂತರ, ಬ್ರಿಸ್ಬೇನ್​​ನ ವಿಕ್ಟೋರಿಯಾ ಪಾರ್ಕ್‌ನಲ್ಲಿ ಹೊಸ ಕ್ರೀಡಾಂಗಣವನ್ನು ನಿರ್ಮಿಸಲು ಕ್ವೀನ್ಸ್​ಲ್ಯಾಂಡ್​ ಸರ್ಕಾರ ನಿರ್ಧರಿಸಿದೆ. ಈ ಕ್ರೀಡಾಂಗಣವು ಅತ್ಯಾಧುನಿಕ ಸೌಲಭ್ಯಗಳೊಂದಿಗೆ 63 ಸಾವಿರ ಆಸನಗಳ ಸಾಮರ್ಥ್ಯವನ್ನು ಹೊಂದಿರುತ್ತದೆ.

ಕ್ವೀನ್ಸ್‌ಲ್ಯಾಂಡ್ ಸರ್ಕಾರವು ವಿಶ್ವ ದರ್ಜೆಯ ಕ್ರೀಡಾಂಗಣವನ್ನು ಅನಾವರಣಗೊಳಿಸಲು ಸಿದ್ಧತೆ ನಡೆಸುತ್ತಿದೆ. ಗಬ್ಬಾ ಶಿಥಿಲಾವಸ್ಥೆಯಲ್ಲಿದ್ದು, ಕ್ರೀಡಾಂಗಣವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. 2032ರ ಒಲಿಂಪಿಕ್ಸ್ ಅನ್ನು ಆಯೋಜಿಸಲು ನಮಗೆ ಉತ್ತಮ ಕ್ರೀಡಾಂಗಣ ಬೇಕಿದೆ. ತಾತ್ಕಾಲಿಕ ಸೌಲಭ್ಯಗಳನ್ನು ಒದಗಿಸದ ಸ್ಟ್ಯಾಂಡ್‌ಗಳಿಗಾಗಿ ನಾವು ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಲು ಸಾಧ್ಯವಿಲ್ಲ. ನಾವು ಹೊಸ ಕ್ರೀಡಾಂಗಣವನ್ನು ನಿರ್ಮಿಸಲು ನಿರ್ಧರಿಸಿದ್ದೇವೆ ಎಂದು ಕ್ವೀನ್ಸ್‌ಲ್ಯಾಂಡ್ ಪ್ರೀಮಿಯರ್ ಡೇವಿಡ್ ಕ್ರಿಸಾಫುಲ್ಲಿ ಇತ್ತೀಚಿನ ಒಲಿಂಪಿಕ್ ಯೋಜನೆಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹೊಸ ಕ್ರೀಡಾಂಗಣವನ್ನು ನಿರ್ಮಿಸಿದ ನಂತರ ಪ್ರತಿಷ್ಠಿತ ಗಬ್ಬಾ ಕ್ರಿಕೆಟ್ ಕ್ರೀಡಾಂಗಣವನ್ನು ಕೆಡವಲಾಗುವುದು ಎಂದು ಇದೇ ಸಂದರ್ಭದಲ್ಲಿ ಕ್ರಿಸಾಪುಲ್ಲಿ ಹೇಳಿದರು. (ಏಜೆನ್ಸೀಸ್​)