ಕ್ರೀಡೆ

ಡಬ್ಲ್ಯುಪಿಎಲ್​ ಹರಾಜಿಗೆ 165 ಆಟಗಾರ್ತಿಯರು; ಕಣದಲ್ಲಿದ್ದಾರೆ 7 ಕನ್ನಡತಿಯರು...

ಬೆಂಗಳೂರು: ಡಿಸೆಂಬರ್​ 9ರಂದು ಮುಂಬೈನಲ್ಲಿ ನಡೆಯಲಿರುವ 2ನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ 104 ಭಾರತೀಯರು ಮತ್ತು 61 ವಿದೇಶೀಯರ ಸಹಿತ 165 ಮಹಿಳಾ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ಟೂರ್ನಿಯಲ್ಲಿ ಆಡುವ 5 ತಂಡಗಳು ಈಗಾಗಲೆ 21 ವಿದೇಶೀಯರ ಸಹಿತ 60 ಆಟಗಾರ್ತಿಯರನ್ನು ರಿಟೇನ್​ ಮಾಡಿಕೊಂಡಿದ್ದು, ಹರಾಜಿನಲ್ಲಿ 9 ವಿದೇಶಿಯರ ಸಹಿತ ಗರಿಷ್ಠ 30 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ.

ವೆಸ್ಟ್​ ಇಂಡೀಸ್​ ಆಲ್ರೌಂಡರ್​ ಡಿಯೇಂಡ್ರಾ ಡಾಟಿನ್​ ಮತ್ತು ಆಸ್ಟ್ರೆಲಿಯಾದ ವೇಗಿ ಕಿಮ್​ ಗಾರ್ತ್​ ಗರಿಷ್ಠ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಆಸ್ಟ್ರೆಲಿಯಾದ ಅನಾಬೆಲ್​ ಸುದರ್​ಲ್ಯಾಂಡ್​, ಜಾರ್ಜಿಯಾ ವಾರ್​ಹ್ಯಾಮ್​, ದಣ ಆಫ್ರಿಕಾದ ವೇಗಿ ಶಬ್ನಿಮ್​ ಇಸ್ಮಾಯಿಲ್​, ಇಂಗ್ಲೆಂಡ್​ ವಿಕೆಟ್​ ಕೀಪರ್​ ಆಮಿ ಜೋನ್ಸ್​ 40 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಹರಾಜಿನಲ್ಲಿ ಗುಜರಾತ್​ ಜೈಂಟ್ಸ್​ಗೆ ಗರಿಷ್ಠ 10 ಆಟಗಾರ್ತಿಯರನ್ನು ಖರೀದಿಸಲು ಅವಕಾಶವಿದೆ. ಜತೆಗೆ ಗರಿಷ್ಠ 5.95 ಕೋಟಿ ರೂ. ಬಜೆಟ್​ ಹೊಂದಿದೆ. ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ 2.1 ಕೋಟಿ ರೂ. ಬಜೆಟ್​ ಉಳಿಸಿಕೊಂಡಿದ್ದು, ಗರಿಷ್ಠ 5 ಆಟಗಾರ್ತಿಯರು ಬೇಕಿದೆ.

ಹಾಲಿ ರನ್ನರ್​ಅಪ್​ ಡೆಲ್ಲಿ ಕ್ಯಾಪಿಟಲ್ಸ್​ 2.25 ಕೋಟಿ ಬಜೆಟ್​ ಹೊಂದಿದ್ದು, 3 ಆಟಗಾರ್ತಿಯರಷ್ಟೇ ಬೇಕಿದೆ. ಆರ್​ಸಿಬಿ ತಂಡ 3.35 ಕೋಟಿ ರೂ. ಬಜೆಟ್​ ಉಳಿಸಿಕೊಂಡಿದ್ದು, ಗರಿಷ್ಠ 7 ಆಟಗಾರರ ಖರೀದಿಗೆ ಅವಕಾಶವಿದೆ. ಯುಪಿ ವಾರಿಯರ್ಸ್​ ಬಳಿ 4 ಕೋಟಿ ರೂ. ಬಜೆಟ್​ ಇದ್ದು, 5 ಆಟಗಾರ್ತಿಯರು ಬೇಕಿದೆ.

ಕಣದಲ್ಲಿದ್ದಾರೆ 7 ಕನ್ನಡತಿಯರು

ಡಬ್ಲ್ಯುಪಿಎಲ್​ ಹರಾಜಿನಲ್ಲಿ ರಾಜ್ಯದ 7 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಅನುಭವಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಈ ಬಾರಿ 30 ಲಕ್ಷ ರೂ. ಮೂಲಬೆಲೆಯೊಂದಿಗೆ ಅದೃಷ್ಟ ಪರೀಸಲಿದ್ದಾರೆ. ಕಳೆದ ಬಾರಿ ಹರಾಜಿನಲ್ಲಿ ಅವರು ಯಾವುದೇ ತಂಡಕ್ಕೆ ಸೇಲಾಗಿರಲಿಲ್ಲ. ಪ್ರತ್ಯುಷಾ ಸಿ. ಕೂಡ 30 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ವೃಂದಾ ದಿನೇಶ್​, ಜಿ. ದಿವ್ಯಾ, ರಾಮೇಶ್ವರಿ ಗಾಯಕ್ವಾಡ್​, ಸಹನಾ ಪವಾರ್​, ಮಿಥಿಲಾ ವಿನೋದ್​ (ಮೂಲಬೆಲೆ 10 ಲಕ್ಷ ರೂ) ಹರಾಜಿನಲ್ಲಿರುವ ಇತರ ಕನ್ನಡತಿಯರು.