ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ದೆಹಲಿ ಹಾಗೂ ಮಣಿಪುರ ನಡುವಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯವು ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದು, ಟಿ20 ಕ್ರಿಕೆಟ್ನಲ್ಲಿ (T20 Cricket) ಇದುವರೆಗೆ ಯಾವ ತಂಡವೂ ಮಾಡಲಾಗದ ಸಾಧನೆಯನ್ನು ದೆಹಲಿ ತಂಡ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
ಮಣಿಪುರ ವಿರುದ್ಧದ ಪಂದ್ಯದಲ್ಲಿ ತಂಡದ ಎಲ್ಲಾ 11 ಆಟಗಾರರು ಬೌಲಿಂಗ್ ಮಾಡುವ ಮೂಲಕ ದೆಹಲಿ ತಂಡ ವಿಶೇಷ ದಾಖಲೆಗೆ ಪಾತ್ರವಾಗಿದ್ದು, ವಿಕೆಟ್ ಕೀಪರ್ ಕೂಡ ಈ ಪಂದ್ಯದಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆದಿದ್ದಾರೆ. ಈ ಮೂಲಕ ದೆಹಲಿ ತಂಡವು ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ ನಿರ್ಮಿಸುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಮಣಿಪುರ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಎದುರಾಳಿಗಳ ವಿರುದ್ಧ ರಣತಂತ್ರ ಹೆಣೆದ ದೆಹಲಿ ತಂಡದ ನಾಯಕ ಆಯುಷ್ ಬದೋನಿ ತಮ್ಮನ್ನು ಒಳಗೊಂಡಂತೆ ತಂಡದ ಎಲ್ಲಾ ಆಟಗಾರರು ಬೌಲಿಂಗ್ ಮಾಡಿದರು. ಇದರ ಫಲವಾಗಿ ಮಣಿಪುರ ತಂಡವು 120 ರನ್ ಗಳಿಸಲಷ್ಟೇ ಶಕ್ತವಾಯಿತು.
ದೆಹಲಿ ಪರ ಹರ್ಷ್ ತ್ಯಾಗಿ (3-0-11-2), ದಿಗ್ವೇಶ್ ರಾತಿ (3-1-8-2), ನಾಯಕ ಆಯುಷ್ ಬದೋನಿ (2-1-8-1), ಆಯುಷ್ ಸಿಂಗ್ (2-0-7-1), ಪ್ರಿಯಾಂಶ್ ಆರ್ಯ (1-0-2-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ. 120 ರನ್ಗಳ ಗುರಿ ಪಡೆದ ದೆಹಲಿ ತಂಡವು 18.3 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪುವ ಮೂಲಕ ಗೆಲುವಿನ ನಗೆ ಬೀರಿತು.