ಟಾಕ್ಸಿಕ್ ಕುರಿತು ರೋಚಕ ಸಂಗತಿ ಬಿಚ್ಚಿಟ್ಟ ರಾಯ! ಯಶ್ ಅವರ ಈ ಪ್ಲಾನ್ ನಿಜಕ್ಕೂ ವರ್ಕೌಟ್ ಆಗುತ್ತಾ? Toxic
- ಕೆಜಿಎಫ್ ಸರಣಿ ಯಶಸ್ಸಿನ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್
- ತಮ್ಮ ಮುಂದಿನ ಚಿತ್ರ ಟಾಕ್ಸಿಕ್ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿರುವ ರಾಯ
- ಇತ್ತೀಚಿನ ಸಂದರ್ಶನವೊಂದರಲ್ಲಿ ಟಾಕ್ಸಿಕ್ ಬಗ್ಗೆ ಯಶ್ ಆಡಿರುವ ಮಾತುಗಳು ಅಭಿಮಾನಿಗಳ ಕುತೂಹಲವನ್ನು ಡಬಲ್ ಮಾಡಿದೆ
Toxic : ಕೆಜಿಎಫ್ ಸರಣಿ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿರುವ ರಾಕಿಂಗ್ ಸ್ಟಾರ್ ಯಶ್, ತಮ್ಮ ಮುಂದಿನ ಚಿತ್ರ ಟಾಕ್ಸಿಕ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಟಾಕ್ಸಿಕ್ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಟಾಕ್ಸಿಕ್ ಸಿನಿಮಾ ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಲಾಗಿದೆ.
ಈಗಾಗಲೇ ಟಾಕ್ಸಿಕ್ ಸಿನಿಮಾದ ಟೀಸರ್ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದರ ನಡುವೆ ಇತ್ತೀಚಿನ ಸಂದರ್ಶನವೊಂದರಲ್ಲಿ ನಟ ಯಶ್, ಟಾಕ್ಸಿಕ್ ಚಿತ್ರದ ಬಗ್ಗೆ ಆಡಿರುವ ಮಾತುಗಳು ಅಭಿಮಾನಿಗಳ ಕುತೂಹಲವನ್ನು ಡಬಲ್ ಮಾಡಿದೆ. ಕೆಜಿಎಫ್ ಸರಣಿಯೊಂದಿಗೆ ಗ್ಲೋಬಲ್ ಸ್ಟಾರ್ ಆಗಿರುವ ಯಶ್, ಟಾಕ್ಸಿಕ್ ಸಿನಿಮಾಗಾಗಿ ಹೊಸ ಜಗತ್ತನ್ನೇ ಸೃಷ್ಟಿ ಮಾಡಿರುವುದಾಗಿ ಹೇಳಿದರು. ಇದು ಕೇವಲ ಸಾಮಾನ್ಯ ಗ್ಯಾಂಗ್‌ಸ್ಟರ್ ನಾಟಕವಲ್ಲ, ಅದಕ್ಕಿಂತಲೂ ಆಳವಾದ ಕಥಾಹಂದರವನ್ನು ಹೊಂದಿರುತ್ತದೆ ಎಂದು ಯಶ್ ಸ್ಪಷ್ಟಪಡಿಸಿದರು.
'ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಎಂಬ ಟ್ಯಾಗ್‌ಲೈನ್‌ನೊಂದಿಗೆ ಬರುತ್ತಿರುವ ಈ ಚಿತ್ರವು ದೃಶ್ಯಗಳು ಮತ್ತು ಕಥೆಯ ವಿಚಾರದಲ್ಲಿ ಪ್ರೇಕ್ಷಕರಿಗೆ ಹೊಸ ರೀತಿಯ ಅನುಭವವನ್ನು ನೀಡಲಿದೆ ಎಂದು ಯಶ್ ಹೇಳಿದ್ದಾರೆ.
ಅಂದಹಾಗೆ, ಕೆಜಿಎಫ್ ಚಿತ್ರದಲ್ಲಿ ತಾಯಿಯ ಸೆಂಟಿಮೆಂಟ್ ದೃಶ್ಯಗಳು ಆ ಸಿನಿಮಾದ ಪ್ರಮುಖ ಶಕ್ತಿಯಾಗಿತ್ತು ಮತ್ತು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯಲು ಇದು ಕೂಡ ಪ್ರಮುಖ ಕಾರಣವಾಯಿತು. ಆದಾಗ್ಯೂ, 'ಟಾಕ್ಸಿಕ್' ಚಿತ್ರದಲ್ಲಿ ತಂದೆಯ ಸೆಂಟಿಮೆಂಟ್ ಪ್ರಮುಖ ಪಾತ್ರ ವಹಿಸಲಿದೆ ಎಂದು ವರದಿಯಾಗಿದೆ. ತಂದೆ ಮತ್ತು ಮಗನ ನಡುವಿನ ಭಾವನಾತ್ಮಕ ಬಾಂಧವ್ಯದ ಸುತ್ತ ಕಥೆ ಸುತ್ತುತ್ತದೆ ಎಂದು ಯಶ್ ಸುಳಿವು ನೀಡಿದ್ದಾರೆ. ಆ್ಯಕ್ಷನ್ ಪ್ರಿಯರಿಗೆ ಅಗತ್ಯವಿರುವ ಸಾಕಷ್ಟು ಮಾಸ್ ಅಂಶಗಳನ್ನು ಹೊಂದಿರುವ ಈ ಚಿತ್ರವು ಪ್ರತಿಯೊಬ್ಬ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಒಂದೊಳ್ಳೆಯ ಸೆಂಟಿಮೆಂಟ್ ದೃಶ್ಯಗಳು ಇರುತ್ತವೆ ಎಂದು ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಈ ಚಿತ್ರವನ್ನು ಅತ್ಯುನ್ನತ ತಾಂತ್ರಿಕ ಕೌಶಲ್ಯದೊಂದಿಗೆ ಚಿತ್ರೀಕರಿಸಿದ್ದಾರೆ. ಈ ಸಿನಿಮಾ ಕೇವಲ ಆಕ್ಷನ್ ಸೀಕ್ವೆನ್ಸ್‌ಗಳಿಗೆ ಸೀಮಿತವಾಗಿರದೆ, ಪಾತ್ರಗಳ ನಡುವಿನ ಕೆಮಿಸ್ಟ್ರಿ ಮತ್ತು ಭಾವನಾತ್ಮಕ ಬಂಧ ಈ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಯಶ್ ವಿವರಿಸಿದರು.
ಒಟ್ಟಾರೆ, ಕೆಜಿಎಫ್ನಲ್ಲಿ ತಾಯಿ ಸೆಂಟಿಮೆಂಟ್ನೊಂದಿಗೆ ಬಂದಿದ್ದ ಯಶ್, ಈ ಬಾರಿ ತಂದೆ ಸೆಂಟಿಮೆಂಟ್ನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎನ್ನಲಾಗುತ್ತಿದೆ. ಕೆಜಿಎಫ್ನಂತೆ ಟಾಕ್ಸಿಕ್ನಲ್ಲಿ ತಂದೆ ಸೆಂಟಿಮೆಂಟ್ ವರ್ಕೌಟ್ ಆಗುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).