ಬಹಿರಂಗವಾಗಿ ಕ್ಷಮೆ ಕೇಳಿದ ಸಿಂಗರ್​ ಮಂಗ್ಲಿ 
ಸ್ಯಾಂಡಲ್‌ವುಡ್

ಸರ್ಸೆ ನಿನ್ನ ಸೆರಗ ಸರ್ಸೆ ವಿವಾದ: ನೋರಾ ಬಳಿಕ ಬಹಿರಂಗವಾಗಿ ಕ್ಷಮೆ ಕೇಳಿದ ಸಿಂಗರ್​ ಮಂಗ್ಲಿ! Singer Mangli

ಪ್ರಮುಖ ಮುಖ್ಯಾಂಶಗಳು

  • ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನ ವಿವಾದ
  • ಬಹಿರಂಗವಾಗಿ ಕ್ಷಮೆ ಕೇಳಿದ ಸಿಂಗರ್​ ಮಂಗ್ಲಿ
  • ಇದು ಉದ್ದೇಶಪೂರ್ವಕವಾಗಿ ನಡೆದಿದ್ದಲ್ಲ; ಹೊಸ ಆವೃತ್ತಿಯನ್ನು ಇಂದೇ ಬಿಡುಗಡೆ ಮಾಡುತ್ತೇವೆ ಎಂದ ಮಂಗ್ಲಿ
ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಕೆಡಿ: ದಿ ಡೆವಿಲ್ ಸಿನಿಮಾದ ಸರ್ಸೆ ಸರ್ಸೆ ಹಾಡು ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ. ಅಶ್ಲೀಲ ಸಾಹಿತ್ಯ ಮತ್ತು ಮಿತಿಮೀರಿದ ಗ್ಲಾಮರ್‌ನಿಂದಾಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಈ ಹಾಡಿನ ಹಿಂದಿ ವರ್ಷನ್​ನ್ನು ಯೂಟ್ಯೂಬ್‌ನಿಂದ ಕಿತ್ತೆಸೆಯಲಾಗಿತ್ತು. ಈಗ ಈ ವಿವಾದಕ್ಕೆ ಸಂಬಂಧಿಸಿದಂತೆ ಹಾಡಿನ ಗಾಯಕಿ ಮಂಗ್ಲಿ (Singer Mangli) ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಗಾಯಕಿ ಮಂಗ್ಲಿ, ಸಾರ್ವಜನಿಕರ ಭಾವನೆಗಳಿಗೆ ಗೌರವ ನೀಡಿ ಹಾಡನ್ನು ಎಲ್ಲಾ ವೇದಿಕೆಗಳಿಂದ ತೆಗೆದುಹಾಕಲಾಗಿದೆ. ತಿಳಿಯದೇ ಮಾಡಿದ ಈ ತಪ್ಪಿಗೆ ನಾನು ನಿಮ್ಮೆಲ್ಲರಲ್ಲೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನಮಗಿರಲಿಲ್ಲ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಇಂದೇ ಬರ್ತಿದೆ ಹೊಸ ವರ್ಷನ್!

ವಿಶೇಷವೆಂದರೆ, ಹಳೆ ಹಾಡಿನ ಅಶ್ಲೀಲ ಸಾಹಿತ್ಯವನ್ನು ಸಂಪೂರ್ಣವಾಗಿ ಕಿತ್ತುಹಾಕಿ, ಬದಲಾದ ಸಾಹಿತ್ಯದೊಂದಿಗೆ ಪರಿಷ್ಕೃತ ಆವೃತ್ತಿಯನ್ನು ಇಂದು (ಮಾರ್ಚ್ 18) ಸಂಜೆ ಬಿಡುಗಡೆ ಮಾಡಲಾಗುವುದು ಎಂದು ಮಂಗ್ಲಿ ತಿಳಿಸಿದ್ದಾರೆ. ಅರ್ಜುನ್ ಜನ್ಯ ಸರ್ ಮತ್ತು ನಿರ್ಮಾಪಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಕ್ಷಣ ಸಾಹಿತ್ಯ ಸರಿಪಡಿಸಿದ್ದಾರೆ. ಇನ್ನು ಮುಂದೆ ಇಂತಹ ತಪ್ಪುಗಳು ಆಗದಂತೆ ಜಾಗ್ರತೆ ವಹಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದೇಕೆ ಮಂಗ್ಲಿ?

ಕ್ಷಮೆ ಕೇಳಿದ ಬೆನ್ನಲ್ಲೇ ಮಂಗ್ಲಿ ಅವರು ತಮ್ಮ ಪೋಸ್ಟ್‌ನ ಕಾಮೆಂಟ್ ಸೆಕ್ಷನ್​ನ್ನು ಆಫ್ ಮಾಡಿದ್ದಾರೆ. ಬಹುಶಃ ಟ್ರೋಲ್‌ಗಳ ಕಾಟದಿಂದ ತಪ್ಪಿಸಿಕೊಳ್ಳಲು ಅಥವಾ ಮತ್ತಷ್ಟು ವಿವಾದಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಅವರು ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗುತ್ತಿದೆ.

ನನಗೆ ಇದಕ್ಕೆ ಸಂಬಂಧವಿಲ್ಲ: ನೋರಾ

ಈ ಸೆರಗನ್ನು ಸರಿಸುವ ಹಾಡಿನ ವಿವಾದದ ಕುರಿತು ಮಾತನಾಡಿರುವ ನೋರಾ ಫತೇಹಿ, ನನಗೆ ಕನ್ನಡ ಬರುವುದಿಲ್ಲ, ನಿರ್ದೇಶಕ ಮತ್ತು ನಿರ್ಮಾಪಕರು ಏನು ಹೇಳಿದರೋ ಹಾಗೆ ಮಾಡಿದ್ದೇನೆ. ನಂತರ ಹಿಂದಿ ಭಾಷೆಯಲ್ಲಿ ಹಾಡನ್ನು ಕೇಳಿದಾಗ ನನಗೆ ಮುಜುಗರ ಎನಿಸಿದೆ.
ಅದಕ್ಕಾಗಿ ನಾನು ಈ ಸಿನಿಮಾವನ್ನು ಮತ್ತು ಈ ಹಾಡನ್ನು ಏಲ್ಲಿ ಸಹ ಪ್ರಚಾರ ಮಾಡಿಲ್ಲ. ಈ ವಿವಾದಕ್ಕೆ ನನಗೆ ಯಾವುದೇ ಸಂಬಂಧವಿಲ್ಲ. ನೀವು ಏನೇ ಕೇಳುವುದಿದ್ದರೂ ಅದನ್ನು ನಿರ್ದೇಶಕ ಹಾಗೂ ನಿರ್ಮಾಪಕರನ್ನು ಕೇಳಿ ಹಾಗೇಯೇ ನನ್ನ ತೆಜೋವಧೆ ಮಾಡುವುದನ್ನು ನಿಲ್ಲಿಸಿ ಎಂದು ನೋರಾ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ,(ಏಜನ್ಸೀಸ್​).