ದಿಗ್ಗಜರು ಸಿನಿಮಾ ಖ್ಯಾತಿಯ ನಟಿ ಸಾಂಘವಿ 
ಸ್ಯಾಂಡಲ್‌ವುಡ್

ದಿಗ್ಗಜರು ಸಿನಿಮಾದ ಕೋಮಲೆ ಈಗ ಹೇಗಿದ್ದಾರೆ ಗೊತ್ತಾ? ಗುರುತೇ ಸಿಗದಷ್ಟು ಬದಲಾದ ನಟಿ ಸಾಂಘವಿ! Actress Sanghavi

ಪ್ರಮುಖ ಮುಖ್ಯಾಂಶಗಳು

  • ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ
  • ಆಗಿನ ಕಾಲದ ನಟ-ನಟಿಯರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ
  • ಕೋಮಲೆ...ಕೋಮಲೆ ಹಾಡಿನಲ್ಲಿ ಮಾದಕ ಡಾನ್ಸ್​ ಮೂಲಕ ಕನ್ನಡಿಗರಿಗೆ ಪರಿಚಿತವಾದ ನಟಿ ಈಗ ಹೇಗಿದ್ದಾರೆ ಗೊತ್ತಾ?
  • ನಟಿ ಸಾಂಘವಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಫೋಟೋಗಳು ವೈರಲ್​
Actress Sanghavi : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಆಗಿನ ಕಾಲದ ನಟ-ನಟಿಯರು ಈಗ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಕೆಲ ನಟ-ನಟಿಯರು ಒಂದು ಕಾಲದಲ್ಲಿ ಬಹಳ ಸದ್ದು ಮಾಡಿ ಇದ್ದಕ್ಕಿದ್ದಂತೆ ಸಿನಿಮಾ ಕ್ಷೇತ್ರದಿಂದ ಕಣ್ಮರೆಯಾಗಿಬಿಡುತ್ತಾರೆ. ಆದರೂ ಅವರ ನಟನೆಯ ಸಿನಿಮಾಗಳು ಮತ್ತು ಹಾಡುಗಳು ಸದಾ ಸಿನಿರಸಿಕರನ್ನು ರಂಜಿಸುತ್ತಲೇ ಇರುತ್ತದೆ. ಅಂತಹ ಸಿನಿಮಾಗಳಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್​ ನಟನೆಯ ದಿಗ್ಗಜರು ಸಿನಿಮಾ ಕೂಡ ಒಂದು. ಈ ಚಿತ್ರದಲ್ಲಿ ನಟಿಸಿದ ನಟಿ ಸಾಂಘವಿ ಹೆಸರು ಗೊತ್ತಿಲ್ಲದೇ ಇರಬಹುದು. ಆದರೆ, ಕೋಮಲೆ...ಕೋಮಲೆ ಹಾಡು ಮಾತ್ರ ಇಂದಿಗೂ ಜನರ ಬಾಯಿಯಲ್ಲಿ ಗುಣಗುತ್ತಲೇ ಇರುತ್ತದೆ. ಹೌದು, ಆ ಕೋಮಲೆಯೇ ಈ ಸಾಂಘವಿ.

ಫೋಟೋಗಳು ವೈರಲ್​

90ರ ದಶಕದಲ್ಲಿ ಪ್ರಮುಖ ನಟಿಯಾಗಿದ್ದ ನಟಿ ಸಾಂಘವಿ, ತುಂಬಾ ವರ್ಷಗಳ ಬಳಿಕ ತಮ್ಮ ಹತ್ತು ವರ್ಷಗಳ ದಾಂಪತ್ಯ ಜೀವನದ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿವೆ.

ದಿಗ್ಗಜರು ಸಿನಿಮಾದಿಂದ ಖ್ಯಾತಿ

ಸಾಂಘವಿ ಅವರು ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಯರ ಮಗ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ 1994ರಲ್ಲಿ ಪದಾರ್ಪಣೆ ಮಾಡಿದರು. ಇದಾದ ಬಳಿಕ ಅದೇ ವರ್ಷ ಲವ್​ 94 ಸಿನಿಮಾದಲ್ಲಿ ನಟಿಸಿದರು. ಆ ನಂತರ ಕನ್ನಡ ಸಿನಿಮಾಗಳಲ್ಲಿ ಸಾಂಘವಿ ಕಾಣಿಸಿಕೊಳ್ಳಲೇ ಇಲ್ಲ. ತುಂಬಾ ವರ್ಷಗಳ ಗ್ಯಾಪ್​ ನಂತರ 2001ರಲ್ಲಿ ದಿಗ್ಗಜರು ಸಿನಿಮಾ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ವಿಷ್ಣುವರ್ಧನ್​ ಅವರಿಗೆ ನಾಯಕಿಯಾಗಿ ನಟಿಸಿದರು.

ಕೊನೆಯ ಸಿನಿಮಾ ಇಂದ್ರ

ದಿಗ್ಗಜರು ಸಿನಿಮಾ ಸೂಪರ್​ ಡೂಪರ್​ ಹಿಟ್​ ಆಯಿತು. ಅದರಲ್ಲೂ ಸಾಂಘವಿ ಅವರ ಗ್ಲಾಮರಸ್​ ಲುಕ್​ ಪಡ್ಡೆ ಹುಡುಗರ ಗಮನ ಸೆಳೆಯಿತು. ಕೋಮಲೆ... ಕೋಮಲೆ ಹಾಡಂತೂ ಇಂದಿಗೂ ಕನ್ನಡಿಗರ ಫೇವರಿಟ್​ ಲೀಸ್ಟ್​ನಲ್ಲಿ ಒಂದಾಗಿದೆ. ದಿಗ್ಗಜರು ಸಿನಿಮಾಗಳ ಧೀರಾ ಸಿನಿಮಾದಲ್ಲಿ ನಟಿಸಿದರು. ಬಳಿಕ ಹತ್ತೂರ ಒಡೆಯ, ನಿಧಿ ಹಾಗೂ ಅನಾಥರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಕೊನೆಯದಾಗಿ 2008ರಲ್ಲಿ ಬಿಡುಗಡೆಯಾಗ ದರ್ಶನ್​ ನಟನೆಯ ಇಂದ್ರ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಅಲ್ಲಿಂದಾಚೆಗೆ ಸಿನಿಮಾಗಳಿಂದಲೇ ಸಾಂಘವಿ ಅಂತರ ಕಾಯ್ದುಕೊಂಡರು.

ದಾಂಪತ್ಯದಲ್ಲಿ ಬಿಜಿ

ಸುಮಾರು ಹದಿನೈದು ವರ್ಷಗಳ ವೃತ್ತಿಜೀವನದಲ್ಲಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಸಾಂಘವಿ, ಮದುವೆಯ ಬಳಿಕ ಚಿತ್ರರಂಗದಿಂದ ದೂರ ಉಳಿದರು. ವೆಂಕಟೇಶ್ ಎಂಬ ಐಟಿ ಉದ್ಯೋಗಿಯನ್ನು ಮದುವೆಯಾಗಿರುವ ಸಾಂಘವಿಗೆ ಪ್ರಸ್ತುತ ಒಂದು ಹೆಣ್ಣು ಮಗುವಿದೆ. ಅವರು ತಮ್ಮ ಮಗಳಿಗೆ ಸಾನ್ವಿ ಎಂದು ಹೆಸರಿಟ್ಟಿದ್ದಾರೆ.
ತುಂಬಾ ವರ್ಷಗಳ ನಂತರ, ಸಾಂಘವಿ ಅವರು ತಮ್ಮ ಇನ್‌ಸ್ಟಾಗ್ರಾಮ್​ ಪೇಜ್​ನಲ್ಲಿ 10 ವರ್ಷಗಳ ಕುಟುಂಬ ಜೀವನದ ಪ್ರಮುಖ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸಾಂಘವಿ ಅವರನ್ನು ನೋಡಿದ ಅಭಿಮಾನಿಗಳು 90ರ ದಶಕದ ಹಾಟ್​ ಬ್ಯೂಟಿ ಈಗ ಎಷ್ಟು ಬದಲಾಗಿದ್ದಾರೆ ನೋಡಿ ಎಂದು ಹುಬ್ಬೇರಿಸಿದ್ದಾರೆ. ಅಲ್ಲದೆ, ನಿಮ್ಮ ದಾಂಪತ್ಯ ಜೀವನ ಸುಖಕರವಾಗಿ ಸಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ, (ಏಜೆನ್ಸೀಸ್​).