ರಾಜಕೀಯ

ದೇಶವಿರೋಧಿ ಸಾಹಿತ್ಯದ ವಿರುದ್ಧ ಜಮ್ಮು-ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್!...20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ತಪಾಸಣೆ! | Jammu And Kashmir

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಆಕ್ಷೇಪಾರ್ಹ ಹಾಗೂ ದೇಶವಿರೋಧಿ ವಿಷಯ ವಸ್ತು ಹೊಂದಿರುವ ಪುಸ್ತಕಗಳು ಮತ್ತು ಸಾಹಿತ್ಯದ ವಿರುದ್ಧ ಬೃಹತ್ ಮಟ್ಟದ ಕಾರ್ಯಾಚರಣೆ ನಡೆಯುತ್ತಿದ್ದು, ಇದರ ಭಾಗವಾಗಿ ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಆಕ್ಷೇಪಾರ್ಹ ಹಾಗೂ ದೇಶವಿರೋಧಿ ವಿಷಯ ವಸ್ತು ಹೊಂದಿರುವ ಪುಸ್ತಕಗಳು ಮತ್ತು ಸಾಹಿತ್ಯದ ವಿರುದ್ಧ ಬೃಹತ್ ಮಟ್ಟದ ಕಾರ್ಯಾಚರಣೆ ನಡೆಯುತ್ತಿದ್ದು, ಇದರ ಭಾಗವಾಗಿ ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಸಮಗ್ರ ಪರಿಶೋಧನೆಯ ನಂತರ ಗ್ರಂಥಾಲಯಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಿಂದ ಒಟ್ಟು 4,767 ಪುಸ್ತಕಗಳನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಪಕ್ಷೇತರ ಶಾಸಕ ಶೇಖ್ ಖುರ್ಷೀದ್ ಅಹಮದ್ ಕೇಳಿದ ಪ್ರಶ್ನೆಗೆ ಉತ್ತರವಾಗಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಮಂಗಳವಾರ ಈ ಅಧಿಕೃತ ದಾಖಲೆಗಳನ್ನು ಮಂಡಿಸಲಾಯಿತು.

ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಪ್ರಕಾರ, ಇದುವರೆಗೆ ಬರೋಬ್ಬರಿ 21,81,582 ಪುಸ್ತಕಗಳು ಮತ್ತು ಪ್ರಕಟಣೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ಕಳೆದ ವರ್ಷದ ಆರಂಭದಲ್ಲಿ ಪೊಲೀಸರು ಪುಸ್ತಕದ ಅಂಗಡಿಗಳು ಹಾಗೂ ಗ್ರಂಥಾಲಯಗಳ ಮೇಲೆ ದಾಳಿ ನಡೆಸಿ, ವಿಚ್ಛಿದ್ರಕಾರಿ ಮತ್ತು ಪ್ರತ್ಯೇಕತಾವಾದಿ ಸಿದ್ಧಾಂತವನ್ನು ಉತ್ತೇಜಿಸುತ್ತಿದ್ದ ನೂರಾರು ಪುಸ್ತಕಗಳನ್ನು ವಶಪಡಿಸಿಕೊಂಡ ನಂತರ ಈ ಬೃಹತ್ ಪರಿಶೀಲನಾ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಇನ್ನೂ ಹೆಚ್ಚಿನ ಪುಸ್ತಕಗಳ ಪರಿಶೀಲನೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಕೆಲಸ ಪೂರ್ಣಗೊಳ್ಳಲು ಇನ್ನಷ್ಟು ಸಮಯ ತೆಗೆದುಕೊಳ್ಳಬಹುದು ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ:1980ರಲ್ಲೇ ನಕಲಿ ದಾಖಲೆ ಸೃಷ್ಟಿಸಿ ಮತದಾನ ಮಾಡಿದ್ರಾ ಸೋನಿಯಾ..? ವೋಟ್​ ಚೋರಿ ಅಲ್ಲ ಪ್ರಜಾಪ್ರಭುತ್ವದ ಕಳ್ಳತನ ಎಂದು ಕಮಲ ಪಡೆ ಕಿಡಿ! | Sonia Gandhi

ಶಾಸಕ ಶೇಖ್ ಖುರ್ಷೀದ್ ಆರೋಪವೇನು..?

ತಜ್ಞರ ಪರಿಶೀಲನೆಗಾಗಿ ಜಮ್ಮು ಮತ್ತು ಕಾಶ್ಮೀರದ ಕಾಲೇಜುಗಳ ನಿರ್ದೇಶಕರಿಗೆ ಇನ್ನೂ 1,752 ಪುಸ್ತಕಗಳನ್ನು ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಲಂಗೇಟ್ ಕ್ಷೇತ್ರದ ಶಾಸಕ ಶೇಖ್ ಖುರ್ಷೀದ್, ಇದು ಜ್ಞಾನದ ಮೇಲೆಯೇ ನಡೆದಿರುವ ಕಾರ್ಯಾಚರಣೆ. ಅವರು ಕೇವಲ ನಮ್ಮ ನೆನಪುಗಳನ್ನು ಅಳಿಸಿಹಾಕುತ್ತಿಲ್ಲ, ಬದಲಾಗಿ ಈಗ ನಮ್ಮ ಪುಸ್ತಕಗಳನ್ನೇ ನಿಷೇಧಿಸುತ್ತಿದ್ದಾರೆ. ಕಾಶ್ಮೀರದ ಕುರಿತು ಬರೆಯಲಾದ ಪ್ರತಿಯೊಂದು ಇತಿಹಾಸವನ್ನು ಅಳಿಸಿಹಾಕಲು ಯತ್ನಿಸುತ್ತಿದ್ದಾರೆ. ದೇಶವಿರೋಧಿ ವಿಷಯ ವಸ್ತುವನ್ನು ತಡೆಯುವ ನೆಪದಲ್ಲಿ ಪುಸ್ತಕಗಳನ್ನು ನಿಷೇಧಿಸಿ, ಗ್ರಂಥಾಲಯ ಹಾಗೂ ಸಂಸ್ಥೆಗಳಿಂದ ಹಿಂಪಡೆಯುವ ಮೂಲಕ ಇತಿಹಾಸವನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ ಎಂದು ಶೇಖ್ ಆರೋಪಿಸಿದ್ದಾರೆ.

ಆದರೆ, ಆಕ್ಷೇಪಾರ್ಹ ಸಾಹಿತ್ಯವನ್ನು ಗುರುತಿಸಲು ಸ್ಪಷ್ಟ ಮತ್ತು ವಸ್ತುನಿಷ್ಠ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಸಂವಿಧಾನಾತ್ಮಕ ಮೌಲ್ಯಗಳು, ಶೈಕ್ಷಣಿಕ ಸ್ವಾತಂತ್ರ್ಯ, ವಿಮರ್ಶಾತ್ಮಕ ಆಲೋಚನೆ, ವೈಜ್ಞಾನಿಕ ಮನೋಭಾವ ಮತ್ತು ಜವಾಬ್ದಾರಿಯುತ ಪೌರತ್ವವನ್ನು ಆಧರಿಸಿದ ವಾತಾವರಣವನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಿರ್ಮಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.

2025ರ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶ್ರೀನಗರದ ಪುಸ್ತಕದ ಅಂಗಡಿಗಳ ಮೇಲೆ ದಾಳಿ ನಡೆಸಿ 668 ಪುಸ್ತಕಗಳನ್ನು ವಶಪಡಿಸಿಕೊಂಡಾಗ ಈ ಸಾಹಿತ್ಯ ವಿರೋಧಿ ಕಾರ್ಯಾಚರಣೆ ಆರಂಭವಾಗಿತ್ತು. ಈ ಪುಸ್ತಕಗಳನ್ನು ನಿಷೇಧಿತ ಜಮಾಅತ್-ಎ-ಇಸ್ಲಾಮಿ ಸಂಘಟನೆಯ ಸಿದ್ಧಾಂತವನ್ನು ಹರಡಲು ವಿತರಿಸಲಾಗುತ್ತಿತ್ತು ಎಂದು ಪೊಲೀಸರು ಆರೋಪಿಸಿದ್ದರು.

25 ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಂಡ ಗೃಹ ಇಲಾಖೆ!

ಅದಾಗಿ ಕೆಲ ತಿಂಗಳುಗಳ ನಂತರ, ಅಂದರೆ 2025ರ ಆಗಸ್ಟ್‌ನಲ್ಲಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಗೃಹ ಇಲಾಖೆಯು 25 ಪುಸ್ತಕಗಳನ್ನು ಮುಟ್ಟುಗೋಲು ಹಾಕಿಕೊಂಡು, ಅವುಗಳ ಪ್ರಕಟಣೆ, ಪರಿಚಲನೆ ಮತ್ತು ಮಾರಾಟವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪೂರ್ಣವಾಗಿ ನಿಷೇಧಿಸಿತು. ಈ ಪುಸ್ತಕಗಳು ಪ್ರತ್ಯೇಕತಾವಾದವನ್ನು ಪ್ರಚೋದಿಸುತ್ತಿವೆ ಎಂದು ಸರ್ಕಾರ ಆರೋಪಿಸಿತ್ತು. ನಿಷೇಧಿತ ಪುಸ್ತಕಗಳಲ್ಲಿ ಎ ಜಿ ನೂರಾನಿ, ಅರುಂಧತಿ ರಾಯ್, ಕ್ರಿಸ್ಟೋಫರ್ ಸ್ನೆಡನ್ ಮತ್ತು ಸುಮಾತ್ರ ಬೋಸ್ ಅವರು ಬರೆದ ಪುಸ್ತಕಗಳೂ ಸೇರಿದ್ದವು.

ಇತ್ತೀಚೆಗೆ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಸರಬರಾಜು ಮಾಡಲಾದ ಎರಡು ಪುಸ್ತಕಗಳ ವಿಷಯದಲ್ಲಿ ಉಂಟಾದ ತೀವ್ರ ವಿವಾದವೇ ಇಡೀ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಮಟ್ಟದ ಬೃಹತ್ ಪುಸ್ತಕ ಪರಿಶೀಲನಾ ಕಾರ್ಯಾಚರಣೆಗೆ ಪ್ರಮುಖ ಕಾರಣವಾಯಿತು. ಪರ್ಸನಾಲಿಟೀಸ್ ಅಂಡ್ ಲೆಜೆಂಡ್ಸ್ ಆಫ್ ಜಮ್ಮು ಅಂಡ್ ಕಾಶ್ಮೀರ ಮತ್ತು ಗ್ರೇಟ್ ಪರ್ಸನಾಲಿಟೀಸ್ ಆಫ್ ಜಮ್ಮು ಅಂಡ್ ಕಾಶ್ಮೀರ ಎಂಬ ಶೀರ್ಷಿಕೆಯ ಎರಡು ಪುಸ್ತಕಗಳಲ್ಲಿ ಸೈಯದ್ ಅಲಿ ಶಾ ಗೀಲಾನಿ, ಮಕ್ಬೂಲ್ ಭಟ್ ಮತ್ತು ಮಸ್ರತ್ ಆಲಂ ಅವರಂತಹ ಪ್ರತ್ಯೇಕತಾವಾದಿ ನಾಯಕರ ಬಗ್ಗೆ ಉಲ್ಲೇಖಿಸಿರುವುದಕ್ಕೆ ಆಡಳಿತ ಮಂಡಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಆದೇಶಿಸಿ, ಶಿಕ್ಷಣ ಇಲಾಖೆಯ ಎಂಟು ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.

ಅಂತಿಮವಾಗಿ, ಉನ್ನತ ಶಿಕ್ಷಣ ಇಲಾಖೆಯು ಕಾಲೇಜುಗಳು ಮತ್ತು ಸಾರ್ವಜನಿಕ ಅನುದಾನಿತ ಗ್ರಂಥಾಲಯಗಳಲ್ಲಿರುವ ಎಲ್ಲಾ ಪುಸ್ತಕಗಳು ಹಾಗೂ ಸಾಹಿತ್ಯದ ಸಮಗ್ರ ಪರಿಶೋಧನೆಗೆ ಆದೇಶಿಸಿದ ನಂತರ, ಪ್ರದೇಶದಾದ್ಯಂತ ಪುಸ್ತಕಗಳ ಬೃಹತ್ ತಪಾಸಣೆ ಮತ್ತು ಪರಿಶೀಲನೆ ಕಾರ್ಯಾಚರಣೆ ವ್ಯಾಪಕವಾಗಿ ಮುಂದುವರಿದಿದೆ(ಏಜೆನ್ಸೀಸ್​).