ಬೆಂಗಳೂರು: ನಿವೇಶನ ಹಂಚಿಕೆ ಮಾಡುವುದಾಗಿ ಹಣ ಪಡೆದು ಸದಸ್ಯತ್ವ ನೀಡಿ ಹತ್ತಾರು ವರ್ಷಗಳಿಂದ ಸತಾಯಿಸುತ್ತಿರುವ ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ಧ ವಿಜಯವಾಣಿ ಪ್ರಕಟಿಸಿದ ಸರಣಿ ವರದಿ ಅಭಿಯಾನದಿಂದ ಎಚ್ಚೆತ್ತಿರುವ ರಾಜ್ಯ ಸರ್ಕಾರ ಸೊಸೈಟಿ ಸ್ಥಾಪನೆ ನಿಯಮಗಳನ್ನು ಬಿಗಿಗೊಳಿಸಿ ಮೂಗುದಾರ ಹಾಕಲು ತೀರ್ವನಿಸಿದೆ. ‘ಸೊಸೈಟಿ ಸೈಟ್ ಧೋಖಾ’ ಶೀರ್ಷಿಕೆಯಡಿ ಜ.7ರಿಂದ ಜ.24ರವರೆಗೆ ವಿಜಯವಾಣಿಯಲ್ಲಿ ಸರಣಿ ವರದಿ ಪ್ರಕಟವಾದ ಬೆನ್ನಲ್ಲೇ ಸರ್ಕಾರ ಇನ್ನುಮುಂದೆ ಬೇಕಾಬಿಟ್ಟಿ ಸೊಸೈಟಿಗಳನ್ನು ಸ್ಥಾಪಿಸಿ, ಮನೋಸೋಇಚ್ಛೆ ಸದಸ್ಯತ್ವ ನೀಡುವುದಕ್ಕೆ ಬ್ರೇಕ್ ಹಾಕಿದೆ. ವಿಜಯವಾಣಿ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಭರವಸೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಹೊಸದಾಗಿ ಗೃಹ ನಿರ್ಮಾಣ ಸಹಕಾರ ಸಂಘಗಳ ನೋಂದಣಿ ಮಾಡುವುದಕ್ಕೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪರಿಷ್ಕರಿಸುವ ಮೂಲಕ ಹಲವು ಕಠಿಣ ನಿಯಮಗಳನ್ನು ಸೇರ್ಪಡೆ ಮಾಡಿ ಸಹಕಾರ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇದರನ್ವಯ ಗೃಹ ನಿರ್ಮಾಣ ಸಹಕಾರ ಸಂಘಗಳ ನೋಂದಣಿ ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ. ಸೊಸೈಟಿ ಆರಂಭಿಸಬೇಕಾದಲ್ಲಿ, ಆ ಸ್ಥಳದಲ್ಲಿನ ಸ್ಥಳೀಯ ಸದಸ್ಯರನ್ನು ಹೊಂದುವುದು ಕಡ್ಡಾಯ ಮಾಡಿ ಸಂಖ್ಯೆಯನ್ನು ನಿಗದಿ ಮಾಡಿದೆ. ಹಳೇ ನಿಯಮದಲ್ಲಿ ಈ ಅಂಶ ಇರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಸೊಸೈಟಿ ಪ್ರಮುಖರು ಇಷ್ಟ ಬಂದವರನ್ನು ಸೇರಿಸಿಕೊಂಡು ಸೊಸೈಟಿ ಸ್ಥಾಪಿಸುತ್ತಿದ್ದರು. ಸಂಗ್ರಹಿಸಬೇಕಾದ ಕನಿಷ್ಠ ಸದಸ್ಯರ ಸಂಖ್ಯೆ, ಸಂಗ್ರಹಿಸಬೇಕಾದ ಕನಿಷ್ಠ ಷೇರು ಹಣ ಎಲ್ಲವನ್ನೂ ಈಗ ಹೆಚ್ಚಳ ಮಾಡಿದೆ.
ಆರ್ಥಿಕ ಸದೃಢತೆ: ಸಹಕಾರ ಸಂಘಗಳು ಸಹಕಾರ ಇಲಾಖೆ ವಿಧಿಸುವ ನಿಯಮಾನುಸಾರ ಆರ್ಥಿಕ ಸದೃಢತೆಯಿಂದ ನಡೆಯುವ ಸಾಧ್ಯತೆಯಿದೆ ಎಂಬುದು ಹಾಗೂ ಈ ರೀತಿ ಮಾಡುವುದರಿಂದ ಹಾಲಿ ಇರುವ ಗೃಹ ನಿರ್ಮಾಣ ಸಹಕಾರ ಸಂಘಗಳ ಬೆಳವಣಿಗೆಗೆ ತೊಂದರೆ ಇಲ್ಲದಿರುವ ಬಗ್ಗೆ ಸಾಧ್ಯತಾ ವರದಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಮುಖ್ಯಸ್ಥರ ಮುಚ್ಚಳಿಕೆ ಕಡ್ಡಾಯ: ಇಲಾಖೆಗಳ ಹೆಸರಿನಲ್ಲಿ ಸೊಸೈಟಿ ತೆರೆದು, ಆ ಹೆಸರನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಇನ್ನು ಮುಂದೆ ಇಲಾಖೆಗಳ ಹೆಸರಿನಲ್ಲಿ ಸೊಸೈಟಿ ನೋಂದಾಯಿಸುವ ವೇಳೆ ಇಲಾಖೆ ಮುಖ್ಯಸ್ಥರಿಂದ ಕಡ್ಡಾಯವಾಗಿ ನಿರಾಕ್ಷೇಪಣಾ ಪತ್ರ ಪಡೆಯಬೇಕೆಂದು ನಿಯಮ ವಿಧಿಸಿದೆ. ವಿಜಯವಾಣಿ ಪ್ರಕಟಿಸಿದ ಸರಣಿ ವರದಿಯಲ್ಲಿ ಸರ್ಕಾರಿ ಇಲಾಖೆಗಳ ಹೆಸರಿನಲ್ಲಿ ಸೊಸೈಟಿ ತೆರೆದು ಜನರಿಗೆ ಯಾವ ರೀತಿಯಲ್ಲಿ ವಂಚನೆ ಮಾಡುತ್ತಾರೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಕಳೆದ 5 ರಿಂದ 10 ವರ್ಷಗಳಿಂದ ನಿವೇಶನ ಹಂಚಿಕೆ ಮಾಡದ 127 ಸೊಸೈಟಿಗಳ ಪೈಕಿ 56 ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳ ಹೆಸರಿನಲ್ಲಿವೆ ಎಂಬುದು ಗಮನಾರ್ಹ ಸಂಗತಿ. ಇದೀಗ ಸರ್ಕಾರಿ ಇಲಾಖೆ, ಉದ್ಯಮ, ಮಂಡಳಿ ನೌಕರರ ಹೆಸರಿನಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ಒಂದಕ್ಕಿಂತ ಹೆಚ್ಚಿನ ಇಲಾಖೆಗಳನ್ನು ಸೇರಿಸಿ ನಿರ್ಮಾಣ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ.
ಹೊಸ ನಿಯಮ ಏಕೆ?: ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳ ಕಾರ್ಯವೈಖರಿ ಬಗ್ಗೆ ದೂರುಗಳು ಸ್ವೀಕೃತವಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಅನುಕೂಲ ಮಾಡಿಕೊಡಲು ಈ ನಿಯಮ ರೂಪಿಸಿದೆ. ಒಟ್ಟಾರೆ 18 ಕ್ಕಿಂತ ಹೆಚ್ಚಿನ ನಿಯಮಗಳನ್ನು ಈ ಮಾರ್ಗಸೂಚಿಯಲ್ಲಿ ಸೇರ್ಪಡೆ ಮಾಡಿದೆ.
· ಗೃಹ ನಿರ್ಮಾಣ ಸಂಘದಲ್ಲಿ ಸದಸ್ಯರಾಗದೇ ಇರುವ ಬಗ್ಗೆ ಸಾರ್ವಜನಿಕರಿಂದ ಪ್ರಮಾಣ ಪತ್ರ ಪಡೆಯಬೇಕು
· ಪ್ರತಿ ಷೇರಿನ ಬೆಲೆ 2 ಸಾವಿರ ರೂ.ನಿಗದಿ ಪಡಿಸಬೇಕು
· ಒಂದಕ್ಕಿಂತ ಹೆಚ್ಚು ಇಲಾಖೆ ಉದ್ಯಮ, ಮಂಡಳಿಗಳನ್ನು ಒಟ್ಟಾಗಿ ಸೇರಿಸಿ ನಾಮಾಂಕಿತದಲ್ಲಿ ಗೃಹ ನಿರ್ಮಾಣ ಸಹಕಾರ ಸಂಘ ನೋಂದಣಿ ಮಾಡಬಾರದು.
· ಇಲಾಖೆ ಹೆಸರಿನಲ್ಲಿ ಸೊಸೈಟಿ ಮಾಡುವಾಗ ಇಲಾಖಾ ಮುಖ್ಯಸ್ಥರಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು
· ಕೃಷಿ ಭೂಮಿಯ ನೇರ ಖರೀದಿ ಮೂಲಕ ಅಥವಾ ಸಂಘದ ಹೆಸರಿನಲ್ಲೇ ಭೂಮಿ ಸ್ವಾಧೀನಪಡಿಸಿಕೊಳ್ಳುವ ಅಥವಾ ಭೂ ಪರಿವರ್ತನೆಯಾದ ಜಮೀನನ್ನು ಖರೀದಿಸಬೇಕು
· ಭೂ ಮಾಲೀಕರಿಗೆ ಹಾಗೂ ಏಜೆನ್ಸಿಗಳಿಗೆ ಹಣ ನೀಡುವ ವೇಳೆ ಆಡಳಿತ ಮಂಡಳಿ ಜತೆಗೆ ರ್ಚಚಿಸಿ ಆನಂತರ ಚೆಕ್ ಮೂಲಕ ಹಣ ನೀಡಬೇಕು
· ನಿವೇಶನ ಮುಂಗಡ ಪಾವತಿಸಲು ಕೋರುವ ಸೂಚನಾ ಪತ್ರಗಳನ್ನು ಕಡ್ಡಾಯವಾಗಿ ಸದಸ್ಯರಿಗೆ ರವಾನಿಸಬೇಕು
· ಹೊಸ ಬಡಾವಣೆ ನಿರ್ಮಾಣ ಮಾಡುವ ಮೊದಲು ಸದಸ್ಯರಿಂದ ಒಪ್ಪಿಗೆ ಪಡೆದುಕೊಳ್ಳಬೇಕು
· ಗುತ್ತಿಗೆದಾರರಿಗೆ ಪಾವತಿಸಿದ ಹಣಕ್ಕೆ ಸೂಕ್ತ ಭದ್ರತೆಯನ್ನು ಪಡೆಯಬೇಕು
· ಬಡಾವಣೆ ಅಭಿವೃದ್ಧಿ ಹೊಂದುತ್ತಿದ್ದಂತೆಯೇ ಹಂತ ಹಂತವಾಗಿ ಹಣ ಬಿಡುಗಡೆ ಮಾಡಬೇಕು
· ಕಾಮಗಾರಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಿ ಮಾಹೆ ನಡೆಯುವ ಸಂಘದ ಆಡಳಿತ ಮಂಡಳಿಗಳ ಸಭೆಗಳಿಗೆ ವಿಷಯವನ್ನು ಕಡ್ಡಾಯವಾಗಿ ತಂದು ಪ್ರಗತಿಯ ಬಗ್ಗೆ ರ್ಚಚಿಸಬೇಕು
· ಗುತ್ತಿಗೆದಾರರಿಗೆ ಹೆಚ್ಚಳವಾದ ದರವನ್ನು ನೀಡುವಾಗ ಮಹಾಸಭೆಯ ಅನುಮೋದನೆ ಪಡೆದು ಬಡಾವಣೆಯಲ್ಲಿ ಬಾಕಿ ಉಳಿದಂತಹ ಕೆಲಸಗಳಿಗೆ ಮಾತ್ರ ಲೆಕ್ಕಾಚಾರ ಮಾಡಿ ಹಣ ನಿಗದಿ ಪಡಿಸುವುದು.
· ಸಂಘ ನಿರ್ಮಾಣ ಮಾಡುವ ಬಡಾವಣೆಯ ಅಭಿವೃದ್ಧಿ ಬಗ್ಗೆ ವಸ್ತುನಿಷ್ಠವಾದ ಪ್ರಗತಿಯ ಚಿತ್ರಣವನ್ನು ಪ್ರತಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಕಡ್ಡಾಯವಾಗಿ ಮಂಡಿಸಬೇಕು.
· ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಸಹಕಾರ ಸಂಘಗಳನ್ನು ಶಿಸ್ತುಕ್ರಮಕ್ಕೆ ಒಳಪಡಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.