ಬಬಲೇಶ್ವರ ಪಟ್ಟಣದ ಹೊರವಲಯದಲ್ಲಿ ಇರಪಾನಗೋಳ ತೋಟದ ವಸ್ತಿ ಬಳಿ ಬಬಲೇಶ್ವರ-ಯಕ್ಕುಂಡಿ ನಿರ್ಮಿಸಲಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಿ.ಎಸ್. ಪಾಟೀಲ, ಚನಬಸು ಕೋಟ್ಯಾಳ, ಮಲ್ಲು ಕಬ್ಬಿನ್, ದಾನಮ್ಮ ಜರಳಿ, ಶಾಂತಯ್ಯ ಕರೆಗೋಳ, ಗುರುಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು. 
ನ್ಯೂಸ್

ಸಸಿ ನೆಟ್ಟು ಹಸರೀಕರಣಕ್ಕೆ ಒತ್ತು

ವಿಜಯಪುರ: ಜಿಲ್ಲೆಯಲ್ಲಿ ಹಳ್ಳ ತುಂಬುವ ಯೋಜನೆಗಳ ಜತೆಯಲ್ಲಿಯೇ ಹಳ್ಳಿಗಳ ಪಕ್ಕದಲ್ಲಿ ನಾಲ್ಕೈದು ಕೋಟಿ ಗಿಡ ನೆಡುವ ಯೋಜನೆ ರೂಪಿಸಲಾಗಿದೆ. ತನ್ಮೂಲಕ ಸಸಿ ನೆಟ್ಟು ಹಸರೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಬಬಲೇಶ್ವರ ಪಟ್ಟಣದ ಹೊರವಲಯದಲ್ಲಿ ಇರಪಾನಗೋಳ ತೋಟದ ವಸ್ತಿ ಬಳಿ ಬಬಲೇಶ್ವರ-ಯಕ್ಕುಂಡಿ ಹಳ್ಳಕ್ಕೆ ಅಂದಾಜು ರೂ. 97.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಂದಾಜು 160 ಹಳ್ಳಗಳಿಗೆ ಪ್ರತಿ 100 ಮೀಟರ್‌ಗೊಂದರಂತೆ ಚೆಕ್ ಡ್ಯಾಂ ನಿರ್ಮಿಸಿ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಈ ಹಳ್ಳಗಳ ಎರಡೂ ಬದಿಗಳಲ್ಲಿ ಸುಮಾರು ನಾಲ್ಕೈದು ಕೋಟಿ ಗಿಡ ನೆಡಲಾಗುವುದು. ಇದರಿಂದ ಅಂತರ್ಜಲ ವೃದ್ಧಿ ಮಾತ್ರವಲ್ಲ. ಜಿಲ್ಲೆಯಲ್ಲಿ ಅರಣ್ಯ ಪ್ರದೇಶವೂ ಹೆಚ್ಚಾಗಲಿದೆ ಎಂದರು.

ಕಾಮಗಾರಿಯ ಜತೆ ರಸ್ತೆಯನ್ನೂ ನಿರ್ಮಿಸಲಾಗುವುದು. ರೈತರ ಬೇಡಿಕೆಯಂತೆ ರಸ್ತೆ ಮತ್ತು ಹಳ್ಳದ ಪಾತ್ರ ಅತಿಕ್ರಮಣ ತೆರವಿಗೆ ಸಮೀಕ್ಷೆ ನಡೆಸಲಾಗುವುದು. ರೈತರು ಇದಕ್ಕೆ ಸಹಕರಿಸಬೇಕು.

ಅಲ್ಲದೇ, ಈ ಬಾಂದಾರ ಹಳ್ಳದ ಹೂಳು ತೆಗೆಯಲಾಗುವುದು. ಹಳ್ಳದ ಪಾತ್ರ ಸ್ವಚ್ಛಗೊಳಿಸಿದರೆ ಒಂದು ಕಿಮೀ ವರೆಗೆ ನೀರು ಸಂಗ್ರಹವಾಗಲಿದೆ. ಈ ಬ್ಯಾರೇಜಿನಲ್ಲಿ ಏಳು ಅಡಿ ಎತ್ತರದವರೆಗೆ ನೀರು ಸಂಗ್ರಹವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ. ಆದರೆ, ಗುರುಪಾದೇಶ್ವರ ಪುಣ್ಯ, ಶಾಂತವೀರ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಮತ್ತು ಬಿ.ಎಂ. ಪಾಟೀಲ ಪುಣ್ಯದಿಂದ ನಾನು 2013-18ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ನೀರಾವರಿ ಮಾಡಿದ್ದೇನೆ.

9ಸ್ಥಾವರ ಮತ್ತು 1000 ಕಿಮೀ. ಮುಖ್ಯ ಕಾಲುವೆ ಮಾಡಿದ್ದೇನೆ. ಇದರಿಂದಾಗಿ ಈ ಭೀಕರ ಬರದಲ್ಲಿಯೂ ಈ ಭಾಗದಲ್ಲಿ ನೀರಿನ ಸಮಸ್ಯೆ ಇಲ್ಲವಾಗಿದೆ. ನೀರಾವರಿಯಿಂದ ಭೂಮಿಯ ಬೆಲೆ ಹೆಚ್ಚಾಗಿದೆ. ಯಾರೂ ಭೂಮಿ ಮಾರಾಟ ಮಾಡಬೇಡಿ. ಮುಂದೆ ಭೂಮಿ ಸಿಗಲ್ಲ.

ರೈತರು ಕೃಷಿ ಉತ್ಪನ್ನಗಳಿಂದ ಉತ್ತಮ ಲಾಭವಾಗುತ್ತಿದೆ ಎಂದು ವ್ಯಸನಗಳಿಗೆ ದಾಸರಾಗಬೇಡಿ ಎಂದರು.

ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಶೇ. 0.17ಮಾತ್ರ ಇತ್ತು. ಕೋಟಿ ವೃಕ್ಷ ಅಭಿಯಾನದ ಬಳಿಕ ಅರಣ್ಯ ಪ್ರಮಾಣ ಹೆಚ್ಚಿದೆ. ನೀವೂ ಕೂಡ ಗಿಡ ಹಚ್ಚಿ ಮಳೆ ಬರಲು ನೆರವಾಗಿ. ಗ್ರಾಮೀಣ ಜನ ಮತ್ತು ರೈತರು ಸುಖವಾಗಿದ್ದರೆ ಎಲ್ಲವೂ ಸಮೃದ್ಧವಾಗಿರುತ್ತದೆ. ನೀರಿನ ಸದುಪಯೋಗ ಪಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ತಿಳಿಸಿದರು.

ವಿಶ್ವನಾಥ ಪೀರಶೆಟ್ಟಿ ಮಾತನಾಡಿ, ಈ ಬ್ಯಾರೇಜು ನಿರ್ಮಾಣದಿಂದ 100 ಎಕರೆ ಜಮೀನಿಗೆ ನೇರವಾಗಿ ನೀರಾವರಿ ಸೌಲಭ್ಯ ಸಿಗಲಿದ್ದು, ಸಾವಿರಾರು ಕೊಳವೆಬಾವಿಗಳಿಗೆ ಅಂತರ್ಜಲಮಟ್ಟ ಹೆಚ್ಚಾಗಲಿದೆ. ಅಷ್ಟೇ ಅಲ್ಲ, 500ಕ್ಕೂ ಹೆಚ್ಚು ತೋಟದ ವಸ್ತಿಗಳ ಜನರಿಗೆ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಜಿಪಂ ಮಾಜಿ ಅಧ್ಯಕ್ಷ ವಿ.ಎಸ್. ಪಾಟೀಲ, ಮುಖಂಡರಾದ ಬಿ.ಜಿ. ಬಿರಾದಾರ, ಶ್ರೀಶೈಲಗೌಡ ಪಾಟೀಲ ನಿಡೋಣಿ, ಶೇಖಪ್ಪ ಕೊಪ್ಪದ, ಧರ್ಮಣ್ಣ ಬಿಳೂರ, ಮಹೇಶ ಮಲ್ಲಣ್ಣವರ, ಈರಪ್ಪ ಭದ್ರಪ್ಪನವರ, ಕೆ.ಎಚ್. ಮುಂಬಾರೆಡ್ಡಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಗಂಗಾಬಾಯಿ ಕೋಟ್ಯಾಳ, ಸುಜಾತಾ ಜಂಗಮಶೆಟ್ಟಿ, ಮಹೇಶ ಮಾಳಿ, ನಿಂಗನಗೌಡ ಬಿರಾದಾರ, ಎಸ್.ಬಿ. ಶಿರೋಳ, ಸಿ.ಆರ್. ಕೋಟ್ಯಾಳ ಉಪಸ್ಥಿತರಿದ್ದರು. ಆನಂದ ಬೂದಿಹಾಳ ವಂದಿಸಿದರು.