| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಇಪ್ಪತೆôದು ವರ್ಷದ ಹಿಂದೆ ರಾಜ್ಯ ಸರ್ಕಾರವನ್ನು ಅಲುಗಾಡಿಸಿದ್ದ ತುಂಡು ಗುತ್ತಿಗೆ ಪದ್ಧತಿ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ, ಸುಮಾರು -ಠಿ;13.46 ಕೋಟಿ ಮೊತ್ತದ ಕಾಮಗಾರಿಯನ್ನು ಟೆಂಡರ್ ಕರೆಯದೇ ಗುತ್ತಿಗೆ ಹಂಚಿಕೆ ಮಾಡಿರುವ ಬಗ್ಗೆ ದಾಖಲೆ ಲಭ್ಯವಾಗಿದೆ. ನಿಯಮ ಗಾಳಿಗೆ ತೂರಿ ಈ ರೀತಿ ನೂರಾರು ಕೋಟಿ ಮೊತ್ತದ ಕಾಮಗಾರಿಗಳನ್ನು ಪ್ರಭಾವಿ ರಾಜಕೀಯ ನಾಯಕರ ಆಪ್ತರ ಶಿಫಾರಸಲ್ಲಿ ಹಂಚಿಕೆ ಮಾಡಿರುವ ಶಂಕೆ ಇದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬೆಂಗಳೂರು ಸೇರಿ ನೆರೆಯ ತಾಲೂಕುಗಳಲ್ಲಿ 415ಕ್ಕೂ ಕಾಮಗಾರಿ ಮಾಡಿಸಲಾಗಿದೆ. ಇಲಾಖೆ ಇಂಜಿನಿಯರ್ಗಳು ರಾಜಕೀಯ ಒತ್ತಡಕ್ಕೆ ಮಣಿದು ಕಾಮಗಾರಿ ವಿಭಜಿಸಿ ಗುತ್ತಿಗೆದಾರರಿಗೆ ಹಂಚಿಕೆ ಮಾಡಿರುವುದು ಕಂಡುಬಂದಿದೆ.
95-95ರಲ್ಲಿ ವಿವಾದ: 1995-96ರ ಸುಮಾರಿಗೆ ನೀರಾವರಿ ಯೋಜನೆ ಸಂಬಂಧ ಸರ್ಕಾರದಿಂದಲೇ ತುಂಡುಗುತ್ತಿಗೆಗೆ ಪ್ರೋತ್ಸಾಹ ನೀಡಿ ವಿವಾದಕ್ಕೆ ಸಿಲುಕಿತ್ತು. ತಮಗಿಚ್ಛೆ ಬಂದವರಿಗೆ ಗುತ್ತಿಗೆ ನೀಡಲು ಕಾಮಗಾರಿ ವಿಭಜಿಸಿ ಹಂಚಿಕೆ ಮಾಡಿದೆ ಎಂಬ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ಕೂಡ ನಡೆದಿತ್ತು. ಆಗಿಂದಾಗ್ಗೆ ವಿಧಾನಸಭೆ ಅಧಿವೇಶನದಲ್ಲೂ ವ್ಯಾಪಕ ಚರ್ಚೆ ನಡೆದು, 2018ರ ನವೆಂಬರ್ 19ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಕಾಮಗಾರಿಗಳಿಗೆ ಸೀಮಿತಗೊಳಿಸಿ ಕಾಮಗಾರಿಗಳನ್ನು ಅನಗತ್ಯವಾಗಿ ತುಂಡುಗುತ್ತಿಗೆಗೆ ವಹಿಸಿಕೊಡುವುದಕ್ಕೆ ತಡೆ ಹಾಕಲು ಷರತ್ತುಗಳನ್ನು ಹಾಕಲಾಗಿತ್ತು. 2018-19ನೇ ಸಾಲಿನ ಇಲಾಖೆಯ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ತರುವ ಕಾಮಗಾರಿಗಳನ್ನು ತುಂಡುಗುತ್ತಿಗೆ ವಹಿಸಿಕೊಡುವ ಉದ್ದೇಶದಿಂದಲೇ ಕಾಮಗಾರಿಗಳ ಮೊತ್ತದ ಮಿತಿಯನ್ನು 5 ಲಕ್ಷ ರೂ.ಮಿತಿಯೊಳಗೆ ಬರುವ ರೀತಿಯಲ್ಲಿ ವಿಭಜನೆ ಮಾಡುವಂತಿಲ್ಲ ಹಾಗೂ ಮುಂದಿನ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಅವಕಾಶ ಕಲ್ಪಿಸಿರುವ ರೀತಿಯಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಖಾಂತರವೇ ಇಲಾಖೆಯ ಕಾಮಗಾರಿ ಅನುಷ್ಠಾನಮಾಡಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ.
2020ರ ಜನವರಿ 1ರಂದು ಇಲಾಖೆ ಹೊರಡಿಸಿದ ಆದೇಶದ ಪ್ರಕಾರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ಗಳು 5 ಲಕ್ಷ ರೂ.ಗೆ ಮೀರದ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬಹುದು. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿಗಳು ಕಿರು ನೀರು ಸರಬರಾಜು ಯೋಜನೆ ಹಾಗೂ ಶಾಲಾ ಕಟ್ಟಡ ಕಾಮಗಾರಿಗಳನ್ನು 2 ಲಕ್ಷಕ್ಕೆ ಮೀರದಂತೆ ಇಲಾಖೆಯ ಸಾಮಾನ್ಯ ಟೆಂಡರ್ ವಿಧಾನಗಳನ್ನು ಅನುಸರಿಸಿ ಕೈಗೊಳ್ಳಲು ಸೂಚಿಸಲಾಗಿದೆ.
ಯಾವುದೇ ಕಾರಣಕ್ಕೆ ಅಂದಾಜು ಮೊತ್ತವನ್ನು ಸುತ್ತೋಲೆಯಲ್ಲಿ ನಮೂದಿಸಿರುವ ಮಿತಿಯೊಳಗೆ ತರುವ ಒಂದೇ ಉದ್ದೇಶದಿಂದ ಕೃತಕವಾಗಿ ವಿಭಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆರ್ಥಿಕ ಇಲಾಖೆ ಸ್ಪಷ್ಟವಾಗಿ ಹೇಳಿತ್ತು. ಈಗ ಲಭ್ಯವಾಗಿರುವ ದಾಖಲೆ ಪ್ರಕಾರ ಒಂದೇ ಪ್ರದೇಶದ ಅಥವಾ ಒಂದು ಗ್ರಾಮದಲ್ಲಿನ ಕಾಮಗಾರಿಗಳನ್ನು ಉದ್ದೇಶಪೂರ್ವಕವಾಗಿ ವಿಭಜಿಸಿರುವುದು ಕಾಣಿಸಿದೆ.
ಹೊಂದಾಣಿಕೆ ವ್ಯವಹಾರ: ಗುತ್ತಿಗೆದಾರರಿಂದ ಲೆಟರ್ ಹೆಡ್ನಲ್ಲಿ ಕೊಟೇಷನ್ಗಳನ್ನು ಪಡೆದು, ಅವರವರ ನಡುವೆ ಹೊಂದಾಣಿಕೆ ಮಾಡಿಕೊಂಡು ಕಾಮಗಾರಿ ಹಂಚ ಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಲಾಖೆಯ ಇಂಜಿನಿಯರ್ಗಳು ಖುದ್ದು ಈ ವ್ಯವಹಾರ ನಡೆಸಿದ್ದು, ಪ್ರಮುಖ ರಾಜಕೀಯ ವ್ಯಕ್ತಿಗಳು ಇದರ ಹಿಂದಿದ್ದಾರೆ ಎಂಬ ಮಾತು ಕೇಳಿಬಂದಿದೆ.