ನ್ಯೂಸ್

ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಾಮೂಹಿಕ ನಾಯಕತ್ವ ಪಾಠ; ರಾಜ್ಯಕ್ಕೆ ಆಗಮಿಸಲಿದ್ದಾರೆ ರಾಹುಲ್...

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಪಕ್ಷದ ರಾಜ್ಯ ಮುಖಂಡರ ಜತೆಗೆ ಮಹತ್ವದ ಸಮಾಲೋಚನೆ ನಡೆಸಿದ್ದು, ಹೋರಾಟ, ಒಗ್ಗಟ್ಟು ಮತ್ತು ‘ಸಾಮೂಹಿಕ ನಾಯಕತ್ವ’ದ ಪಾಠ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಪ್ರತ್ಯೇಕ ಸಭೆ ನಡೆಸಿದ ವರಿಷ್ಠ ರಾಹುಲ್ ಗಾಂಧಿ ಬಳಿಕ ರಾಜ್ಯದಿಂದ ತೆರಳಿದ್ದ ಎಲ್ಲ ಪ್ರಮುಖರನ್ನು ಒಟ್ಟಿಗೆ ಕೂರಿಸಿಕೊಂಡು ಚರ್ಚೆ ನಡೆಸಿದರು.

ರಾಹುಲ್ ಗಾಂಧಿ ನಿವಾಸದಲ್ಲಿ ಸುಮಾರು ಎರಡು ತಾಸು ಸಭೆ ನಡೆಯಿತು. ಈ ವೇಳೆ ರಾಜ್ಯದ ಹಲವು ವಿಚಾರಗಳು ಚರ್ಚೆಗೆ ಬಂದವು. ಮೇಕೆದಾಟು ಪಾದಯಾತ್ರೆ, ಸದನದೊಳಗೆ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧದ ಹೋರಾಟ, ಸದಸ್ಯತ್ವ ಅಭಿಯಾನ ಸೇರಿ ವಿವಿಧ ಸಂಗತಿಯನ್ನು ರಾಜ್ಯ ನಾಯಕರು ರಾಹುಲ್ ಗಮನಕ್ಕೆ ತಂದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷದ ಸಂಘಟನೆ ಕೆಲಸ ಚೆನ್ನಾಗಿ ನಡೆಯುತ್ತಿದೆ. ಪಕ್ಷದ ಬೆಳವಣಿಗೆಯನ್ನು ಗಮನಿಸಿ ಕೆಲ ಸಂಘಟನೆಗಳು ಕೋಮು ಧ್ರುವೀಕರಣ ಮಾಡುತ್ತಿವೆ, ಈ ಬಗ್ಗೆ ಎಚ್ಚರಿಕೆಯಿಂದಿರಿ ಎಂದು ರಾಹುಲ್ ಸಲಹೆ ನೀಡಿದರು. ಸಭೆ ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಪಕ್ಷದಲ್ಲಿ ಯಾವುದೇ ಒಳ ಜಗಳ ಇಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದ್ದೇವೆ, 2023ರ ಚುನಾವಣೆ ಕಾರ್ಯತಂತ್ರ ಬಗ್ಗೆ ಸಮಾಲೋಚನೆ ಮಾಡಲಾಗಿದೆ ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಮಾತನಾಡಿ, 2023ರಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಬೊಮ್ಮಾಯಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಬಿಟ್ ಕಾಯಿನ್ ಹಗರಣ ಬೊಮ್ಮಾಯಿ ಮನೆಬಾಗಿಲಿಗೆ ಬಂದು ನಿಂತಿದೆ ಎಂದರು. ಈ ಎಲ್ಲ ವಿಚಾರವನ್ನು ರಾಜ್ಯದ ಜನರ ಗಮನಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ. ಒಗ್ಗಟ್ಟಿನಿಂದ ಬಿಜೆಪಿ ವಿರುದ್ದ ಹೋರಾಟ ಮಾಡುವ ಬಗ್ಗೆ ಸಭೆಯಲ್ಲಿ ರ್ಚಚಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಧ್ರುವ ನಾರಾಯಣ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ, ಗೋವಾ ರಾಜ್ಯ ಉಸ್ತುವಾರಿ ದಿನೇಶ್ ಗುಂಡೂರಾವ್, ಮಾಜಿ ಕೇಂದ್ರ ಸಚಿವರಾದ ಕೆ.ಎಚ್ ಮುನಿಯಪ್ಪ, ಎಂ.ವೀರಪ್ಪ ಮೊಯ್ಲಿ, ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ ಪಾಟೀಲ್, ಮಾಜಿ ಸಚಿವ ಕೆ.ಜೆ ಜಾರ್ಜ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಯು.ಟಿ ಖಾದರ್ ಮತ್ತಿತರರು ಭಾಗವಹಿಸಿದ್ದರು.

ಐದು ಹೈ ಸಂದೇಶಗಳು

  1. ಪಕ್ಷದ ಚಟುವಟಿಕೆ ಚೆನ್ನಾಗಿದೆ, ಹಾಳುಗೆಡುವ ಕೆಲಸಕ್ಕೆ ಅವಕಾಶ ಕೊಡದಿರಿ
  2. ಕೆಪಿಸಿಸಿ ಪದಾಧಿಕಾರಿ ಪಟ್ಟಿ ಶೀಘ್ರವೇ ಅಂತಿಮಗೊಳಿಸಿ ಕಳಿಸಲಾಗುತ್ತದೆ
  3. ಸರ್ಕಾರ ವಿರುದ್ಧ ಒಟ್ಟಾಗಿ ಹೋರಾಡಿ
  4. ಸರ್ಕಾರದ ವಿಫಲತೆಯನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು
  5. ಸದಸ್ಯತ್ವ ಅಭಿಯಾನ ಚುರುಕುಗೊಳಿಸಿ, ವ್ಯಾಪಕವಾಗಿಸಬೇಕು

ಪದಾಧಿಕಾರಿ ಪಟ್ಟಿ ಏಕಿಲ್ಲ?: ಕೆಪಿಸಿಸಿಗೆ ಕಳೆದ ಮೂರು ವರ್ಷದಿಂದಲೂ ಪದಾಧಿಕಾರಿಗಳಿಲ್ಲ. ಪದಾಧಿಕಾರಿ ಪಟ್ಟಿ ಏಕೆ ಅಂತಿಮಗೊಳಿಸಿಲ್ಲ? ಅದನ್ನು ಅಂತಿಮಗೊಳಿಸಲು ಸಮಸ್ಯೆಯಾದರೂ ಏನು? ಪದಾಧಿಕಾರಿ ಜವಾಬ್ದಾರಿ ನೀಡದಿದ್ದರೆ ಕ್ರಿಯಾಶೀಲವಾಗಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಸಭೆಯಲ್ಲಿ ಪಕ್ಷದ ರಾಜ್ಯದ ಹಿರಿಯ ನಾಯಕರೊಬ್ಬರು ರಾಹುಲ್​ಗಾಂಧಿಯವರನ್ನು ಪ್ರಶ್ನಿಸಿದ ಪ್ರಸಂಗ ನಡೆದಿದೆ. ಅನಿರೀಕ್ಷಿತವಾಗಿ ಬಂದ ಈ ಪ್ರಶ್ನೆಗೆ ತಮ್ಮಲ್ಲಿ ಉತ್ತರ ಇಲ್ಲದ ಕಾರಣ ರಾಹುಲ್, ಸುರ್ಜೆವಾಲಾ ಕಡೆ ಮುಖ ತಿರುಗಿಸಿದ್ದಾರೆ. ಏಕೆ ಪಟ್ಟಿ ತಡೆಹಿಡಿಯಲಾಗಿದೆ? ಕೂಡಲೇ, ಒಪ್ಪಿಗೆ ನೀಡಿ ಕಳಿಸಬಹುದಲ್ಲವೇ ಎಂದು ಪ್ರಶ್ನಿಸಿ, ಸೂಚನೆ ನೀಡಿದರೆನ್ನಲಾಗಿದೆ.