ಕೊಹಿಮಾ: ಅಸ್ಸಾಂನ ಗಡಿ ಭಾಗಕ್ಕೆ ಸಮೀಪ ನಾಗಾಲ್ಯಾಂಡ್ನ ಮೊನ್ ಜಿಲ್ಲೆಯ ಒಟಿಂಗ್ನಲ್ಲಿ ತಪು್ಪತಿಳಿವಳಿಕೆ ಮತ್ತು ಆತ್ಮರಕ್ಷಣೆ ಹೆಸರಲ್ಲಿ ನಡೆದ 14 ನಾಗರಿಕರ ಹತ್ಯೆ ಪ್ರಕರಣವನ್ನು ಪೊಲೀಸರು ಕೊಲೆ ಪ್ರಕರಣ ಎಂದು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿದ್ದಾರೆ. ಈ ಸಂಬಂಧ ಸೇನೆಯ 21 ಪ್ಯಾರಾ ಸ್ಪೆಷಲ್ ಫೋರ್ಸ್ ಘಟಕವನ್ನು ಆರೋಪಿಯನ್ನಾಗಿ ನಮೂದಿಸಲಾಗಿದೆ. ಭದ್ರತಾ ಪಡೆ ಯೋಧರು ಉದ್ದೇಶಪೂರ್ವಕವಾಗಿಯೇ ನಾಗರಿಕರ ಹತ್ಯೆ ಮಾಡಿದ್ದಲ್ಲದೆ, ಉಳಿದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅರೆಸೇನಾ ಪಡೆ ಯೋಧರ ಜತೆಗೆ ಸ್ಥಳೀಯ ಪೊಲೀಸ್ ಮಾರ್ಗದರ್ಶಿ ಇರಲಿಲ್ಲ. ಈ ಕಾರ್ಯಾಚರಣೆಗೆ ಮುನ್ನ ಅರೆಸೇನಾ ಪಡೆ ಸ್ಥಳೀಯ ಪೊಲೀಸ್ ಠಾಣೆಗೆ ಈ ಕುರಿತು ಮನವಿಯನ್ನೂ ಸಲ್ಲಿಸಿಲ್ಲ, ಸಹಕಾರವನ್ನೂ ಕೋರಿಲ್ಲ ಎಂಬ ಅಂಶ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
ಎಫ್ಐಆರ್ನಲ್ಲಿರುವ ಘಟನೆ ವಿವರ: ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಒಟಿಂಗ್ ಗ್ರಾಮದ ಕಲ್ಲಿದ್ದಲು ಗಣಿ ಕಾರ್ವಿುಕರು ಬೊಲೆರೊ ಪಿಕ್ ಅಪ್ನಲ್ಲಿ ತಿರುವಿನಿಂದ ಸ್ವಗ್ರಾಮ ಒಟಿಂಗ್ಗೆ ಹೋಗುತ್ತಿದ್ದರು. ಅಪ್ಪರ್ ತಿರು ಮತ್ತು ಒಟಿಂಗ್ ಗ್ರಾಮದ ನಡುವೆ ಲಾಂಗ್ಖಾವೊ ಸಮೀಪ ಈ ಪಿಕ್ ಅಪ್ ತಲುಪಿದ ವೇಳೆ ಭದ್ರತಾ ಪಡೆ ಏಕಾಏಕಿಯಾಗಿ ವಾಹನದ ಮೇಲೆ ದಾಳಿ ನಡೆಸಿದೆ. ಯಾವುದೇ ಪ್ರಚೋದನೆ ಇಲ್ಲದೆ ನಡೆಸಿದ ದಾಳಿ ಇದಾಗಿತ್ತು. ಗುಂಡಿನ ದಾಳಿಯ ಸದ್ದು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಹೋದ ವೇಳೆ ಭದ್ರತಾ ಪಡೆ ಯೋಧರು ಶವಗಳನ್ನು ಟರ್ಪಾಲಿನ್ ಶೀಟ್ನಲ್ಲಿ ಮುಚ್ಚಿ ಇನ್ನೊಂದು ಪಿಕ್ಅಪ್ನಲ್ಲಿ ಸಾಗಿಸಲು ಪ್ರಯತ್ನಿಸಿದ್ದರು. ಇದರಿಂದ ಗ್ರಾಮಸ್ಥರು ಉದ್ರಿಕ್ತರಾಗಿದ್ದು, ಹಿಂಸಾಚಾರಕ್ಕೆ ಇಳಿದರು.
ಸಾವಿನ ಸಂಖ್ಯೆ 17?: ಒಟಿಂಗಾದಲ್ಲಿ ಶನಿವಾರ ನಡೆದ ಘಟನೆಯಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಸರ್ಕಾರದ ಪ್ರಕಾರ 14.
ನಾಗಾಲ್ಯಾಂಡ್ ಬಂದ್: ನಾಗಾ ಸ್ಟೂಡೆಂಟ್ಸ್ ಫೆಡರೇಶನ್ (ಎನ್ಎಸ್ಎಫ್) ಸೋಮವಾರ ಬೆಳಗ್ಗೆ ಆರುಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ರಾಜ್ಯ ಬಂದ್ಗೆ ಕರೆ ನೀಡಿತ್ತು. ಇನ್ನೊಂದೆಡೆ, ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್’ಸ್ ಆರ್ಗನೈಸೇಷನ್ (ಇಎನ್ಪಿಒ) ಬೆಳಗ್ಗೆಯಿಂದ ರಾತ್ರಿ ತನಕ ರಾಜ್ಯ ಬಂದ್ಗೆ ಕರೆ ನೀಡಿತ್ತು. ನಾಗಾ ರಾಜಕೀಯ ವಿಚಾರವಾಗಿ ಕೇಂದ್ರ ಸರ್ಕಾರದ ಜತೆಗೆ ಶಾಂತಿಮಾತುಕತೆ ನಡೆಸುತ್ತಿರುವ ಎನ್ಎಸ್ಸಿಎನ್(ಐಎಂ) ಸಂಘಟನೆ ನಾಗರಿಕರ ಹತ್ಯೆ ನಡೆದ ದಿನವನ್ನು ಕರಾಳದಿನ ಎಂದು ಘೋಷಿಸಿದೆ.
ಟ್ರ್ಯಾಪ್ ಆಗಿದ್ದಿರಬಹುದು: ಮೊನ್ ಜಿಲ್ಲೆ ಎನ್ಎಸ್ಸಿಎನ್ ಚಟುವಟಿಕೆಗೆ ಕುಪ್ರಸಿದ್ಧಿ ಪಡೆದ ಪ್ರದೇಶ. ಅದು 1981ರಿಂದ ಸಕ್ರಿಯವಾಗಿದೆ. ಇದೊಂದು ಟ್ರಾ್ಯಪ್ ಆಗಿರಬಹುದು ಅಥವಾ ಉದ್ದೇಶಪೂರ್ವಕ ಸೇನೆಗೆ ತಪು್ಪ ಮಾಹಿತಿ ರವಾನಿಸಿದ್ದೂ ಆಗಿರಬಹುದು. ಸ್ಥಳೀಯ ಒತ್ತಡಕ್ಕೆ ಸಿಲುಕಿ ಪೊಲೀಸರು ದಾರಿ ತಪ್ಪಿಸಿರುವ ಸಾಧ್ಯತೆ ಇದೆ. ಇಂತಹ ಸನ್ನಿವೇಶಗಳು ಉಗ್ರ ನಿಗ್ರಹ ಕಾರ್ಯಾಚರಣೆ ಸಂದರ್ಭದಲ್ಲಿ ಸಾಮಾನ್ಯ ಎಂದು ನಿವೃತ್ತ ಕರ್ನಲ್ ರಾಜಿಂದರ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.
ಸೇನೆಯ ವಿಶೇಷಾಧಿಕಾರ ರದ್ದಿಗೆ ಆಗ್ರಹ: ನಾಗಾಲ್ಯಾಂಡ್ ಘಟನೆಯ ಬಳಿಕ ಸೇನೆಯ ವಿಶೇಷಾಧಿಕಾರ ಕಾಯ್ದೆ 1958 ಅನ್ನು ರದ್ದು ಗೊಳಿಸುವಂತೆ ಬೇಡಿಕೆ ಹೆಚ್ಚಾಗಿದೆ. ಮೇಘಾಲಯ ಮುಖ್ಯಮಂತ್ರಿ ಕೊನ್ರಾಡ್ ಕೆ ಸಂಗ್ಮಾ ಸೇನೆಯ ವಿಶೇಷಾಧಿಕಾರ ರದ್ದುಗೊಳಿಸುವಂತೆ ಕೋರಿದ್ದಾರೆ. ಈ ಬೇಡಿಕೆಯನ್ನು ನಾಗಾಲ್ಯಾಂಡ್ ಸಿಎಂ ನೆಫಿಯೂ ರಿಯೋ ಕೂಡ ಬೆಂಬಲಿಸಿದ್ದು, ಸೇನೆಯ ವಿಶೇಷಾಧಿಕಾರ ರದ್ದುಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.