ನ್ಯೂಸ್

ದೆಹಲಿಯಲ್ಲಿ ಹೆಚ್ಚಿದ ವಾಯುಮಾಲಿನ್ಯ; ಡೀಸೆಲ್ ಎಲ್​ಎಂವಿ ಸಂಚಾರ , ಟ್ರಕ್ ಪ್ರವೇಶ ನಿರ್ಬಂಧ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದಕ್ಕೆ ಹೊಂದಿ ಕೊಂಡುವ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಗುರುವಾರ ತೀವ್ರ ಕಳಪೆ ಗುಣಮಟ್ಟಕ್ಕೆ ಇಳಿದು, ದಟ್ಟವಾದ ಹೊಗೆ ಆವರಿಸಿತ್ತು. ಪರಿಣಾಮ ಜನರು ಶುದ್ಧವಾಯುವಿಗೆ ಪರದಾಡುವಂತಾಯಿತು.

ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಬೆಳಗ್ಗೆ 7 ಗಂಟೆ ಹೊತ್ತಿಗೆ 408ರಷ್ಟಿತ್ತು ( ಅತ್ಯಂತ ಕಳಪೆ ವಿಭಾಗ). ಪ್ರತಿಕೂಲ ಹವಾಮಾನ ಪರಿಸ್ಥಿತಿ, ಕಡಿಮೆ ಗಾಳಿಯ ವೇಗ ಮತ್ತು ಕೃಷಿ ಕೂಳೆ ಸುಡುವಿಕೆ ಘಟನೆಗಳಿಂದ ದೆಹಲಿಯಲ್ಲಿ ವಾಯು ಗುಣಮಟ್ಟ ಹದಗೆಡುತ್ತಿದೆ. 401 ಮತ್ತು 500 ನಡುವಿನ ಎಕ್ಯೂಐ ಅನ್ನು ತೀವ್ರ ಎಂದು ವರ್ಗೀಕರಿಸಲಾಗಿದೆ. ದೆಹಲಿ ಎನ್​ಸಿಆರ್ ಭಾಗವಾಗಿರುವ ನೋಯ್ಡಾ ಅತ್ಯಂತ ಕಳಪೆ ವಿಭಾಗದಲ್ಲಿ 393ರ ಎಕ್ಯೂಐಗೆ ಜಾರಿದರೆ, ಗುರುಗ್ರಾಮದಲ್ಲಿ 318ರಷ್ಟಿದೆ.

ದೆಹಲಿಯಲ್ಲಿ ವಾಯುಮಾಲಿನ್ಯ ಹದಗೆಡುತ್ತಿದ್ದಂತೆ ಅಧಿಕಾರಿಗಳು ಎಲ್ಲ ನಿರ್ಮಾಣ ಚಟುವಟಿಕೆಗಳನ್ನು ಸ್ಥಗಿತ ಗೊಳಿಸಿದ್ದಾರೆ. ವಾಯು ಗುಣಮಟ್ಟ ಸುಧಾರಿಸುವವರೆಗೆ ಶಾಲೆಗಳನ್ನು ಮುಚ್ಚುವಂತೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ರಾಷ್ಟ್ರೀಯ ಆಯೋಗ (ಎನ್​ಸಿಪಿಸಿಆರ್) ದೆಹಲಿ ಸರ್ಕಾರವನ್ನು ಒತ್ತಾಯಿಸಿದೆ.

ಡೀಸೆಲ್ ಎಲ್​ಎಂವಿ ಸಂಚಾರ, ಟ್ರಕ್ ಪ್ರವೇಶ ನಿರ್ಬಂಧ: ವಾಯು ಗುಣಮಟ್ಟ ತೀವ್ರ ಪ್ಲಸ್ ವರ್ಗಕ್ಕೆ ಸೇರುವ ಸನಿಹದಲ್ಲಿರುವುದರಿಂದ ದೆಹಲಿ ಎನ್​ಸಿಆರ್ ಜಿಲ್ಲೆಗಳಲ್ಲಿ ನಾಲ್ಕು ಚಕ್ರಗಳ ಡೀಸೆಲ್ ಲಘು ಮೋಟಾರ್ ವಾಹನಗಳ ಸಂಚಾರ ಮತ್ತು ರಾಜಧಾನಿಗೆ ಎಲೆಕ್ಟ್ರಿಕ್ ಮತ್ತು ಸಿಎನ್​ಜಿ ಹೊರತುಪಡಿಸಿ ಡೀಸೆಲ್ ಚಾಲಿತ ಮಧ್ಯಮ ಮತ್ತು ಭಾರಿ ಸರಕು ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ತುರ್ತು ಸೇವೆಗಳಿಗೆ ಬಳಸುವ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರದ ವಾಯು ಗುಣಮಟ್ಟ ಆಯೋಗ ತಿಳಿಸಿದೆ. ತುರ್ತು ಅಲ್ಲದ ವಾಣಿಜ್ಯ ಚಟುವಟಿಕೆ ಸಂಸ್ಥೆಗಳನ್ನು ಮುಚ್ಚುವ ಹಾಗೂ ಬೆಸ-ಸಮ ನೋಂದಣಿ ಸಂಖ್ಯೆಯ ಆಧಾರದಲ್ಲಿ ವಾಹನಗಳ ಓಡಾಟ ಹಾಗೂ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಲಿವೆ ಎಂದು ಆದೇಶದಲ್ಲಿ ಹೇಳಲಾಗಿದೆ.