ನ್ಯೂಸ್

ತಪ್ಪಿದ ಪ್ರತಿಪಕ್ಷ ನಾಯಕ ಸ್ಥಾನ, ಕೈ ಬಿಡಲು ಇಬ್ರಾಹಿಂ ತೀರ್ಮಾನ: ಕಾಂಗ್ರೆಸ್ ನಂಟು ಮುಗಿದ ಅಧ್ಯಾಯ ಎಂದ ಹಿರಿಯ ನಾಯಕ

ಬೆಂಗಳೂರು: ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನ ಕರುಣಿಸದ ಕಾಂಗ್ರೆಸ್ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ತಿರುಗಿಬಿದ್ದಿದ್ದು, ಕಾಂಗ್ರೆಸ್ ಜತೆಗಿನ ನಂಟು ಮುಗಿದ ಅಧ್ಯಾಯ ಎಂದು ತಿಳಿಸಿದ್ದಾರೆ. ಗುರುವಾರ ಸುದ್ದಿಗಾರರ ಮುಂದೆ ಹಾಜರಾದ ಅವರು, ಎಐಸಿಸಿ ತೀರ್ವನವನ್ನು ನೋಡಿ ಬಹಳ ಸಂತೋಷ ಆಯಿತು. ನನ್ನ ಮೇಲಿದ್ದ ಭಾರವನ್ನು ಸೋನಿಯಾ ಗಾಂಧಿ ಹಗುರ ಮಾಡಿದ್ದಾರೆ. ತೀರ್ಮಾನ ತೆಗೆದುಕೊಳ್ಳಲು ನಾವು ಸ್ವಾತಂತ್ರರಾಗಿದ್ದೇವೆ ಎಂದು ಹೇಳಿದರು.

ಯಾರ ಹೆಸರಿಗಿರೋ ಜಮೀನಿನಲ್ಲಿ ಬೆಳೆ ಬೆಳೆದೆವು, ಬೆಳೆ ಬಂದ ಮೇಲೆೆ ಬೆಳೆ ಕೊಯ್ದುಕೊಂಡು ನಮ್ಮನ್ನು ಹೊರ ಹಾಕಿದರು. ಎಂಎಲ್​ಸಿ ಪದವಿಗೂ ರಾಜೀನಾಮೆ ಕೊಡಲು ತೀರ್ವನಿಸಿದ್ದೇನೆ. ಇವತ್ತು 27ರ ಗುರುವಾರ ದಿವಸ. ಉಪವಾಸ ಇದ್ದು ನೊಂದ ಮನಸ್ಸಿನಿಂದ ಹೇಳುತ್ತಿದ್ದೇನೆ, ಕಾದು ನೋಡಿ ಮುಂದೇನಾಗುತ್ತದೆ ಎಂದ ಅವರು, ನನ್ನ ಬಳಿ ಜಾತಿ ಬಲ ಇಲ್ಲ, ತೋಳುಬಲ ಇಲ್ಲ. ಸಾವಿರಾರು ಜನರಿಗೆ ಚಿತ್ರಾನ್ನ, ಹೋಳಿಗೆ ಕೊಟ್ಟು ಕರೆಸುವ ಶಕ್ತಿ ಇಲ್ಲ. ಆದರೆ, ಹಳ್ಳಿಹಳ್ಳಿಗೆ ಹೋದರೆ ಜನರಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಸಿಡಿಮಿಡಿ: ಕಾಂಗ್ರೆಸ್​ಗೆ ನಾನು ಹೋಗಿದ್ದೇ ಸಿದ್ದರಾಮಯ್ಯ ಕಡೆಯಿಂದ. ಕುರುಬನಾಯಕ ಸಿಎಂ ಆಗಬೇಕೆಂದು ಬಳ್ಳಾರಿ ಯಾತ್ರೆಯಲ್ಲಿ ಪಾಲ್ಗೊಂಡೆನು. ಸಿದ್ದರಾಮಯ್ಯ ಸಲುವಾಗಿಯೇ ದೇವೇಗೌಡರಂತಹ ನಾಯಕರನ್ನು ಬಿಟ್ಟೆವು, ಜೈಲಲ್ಲಿದ್ದು ಕಟ್ಟಿದ ಪಕ್ಷ ಬಿಟ್ಟೆವು. ಸಿದ್ದರಾಮಯ್ಯ ಮನೆಗೆ ಹೋಗಿ ಚಾಮುಂಡಿಯಲ್ಲಿ ಸೋಲುತ್ತೀರಿ, ನಿಮ್ಮ ಕಾಲಿಗೆ ಬೀಳುತ್ತೇನೆ ಬಾದಾಮಿಯಲ್ಲಿ ಕಣಕ್ಕಿಳಿಯಿರಿ ಎಂದು ಮನವೊಲಿಸಿದೆ. ತಿಮ್ಮಾಪುರ, ಎಸ್.ಆರ್.ಪಾಟೀಲ್ ಜೀವಂತ ಇದ್ದಾರೆ, ಅವರಿಗೆ ಒಪ್ಪಿಸಿ ಅವರಿಗೆ ಹೊಸ ರಾಜಕೀಯ ಜೀವನ ಕೊಟ್ಟೆವು, ಅದಕ್ಕೆ ಅವರು ಉಡುಗೊರೆ ಕೊಟ್ಟಿದ್ದಾರೆ. ಈ ಉಡುಗೊರೆಯನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಕಾಲಾಯ ತಸ್ಮೈನಮಃ ಎಂದು ಬೇಸರ ವ್ಯಕ್ತಪಡಿಸಿದರು.

ನನಗೆ ಸ್ಥಾನ ತಪ್ಪಿಸಿದ್ದು ಯಾರೆಂದು ಸಿದ್ದರಾಮಯ್ಯ ಉತ್ತರ ಕೊಡಲಿ. ನನಗೂ ಡಿಕೆಶಿಗೂ ಯಾವುದೇ ಕಾರಣಕ್ಕೂ ಹೊಂದಾಣಿಕೆ ಆಗಲ್ಲ. ಅವರ ವಿಚಾರ ಧಾರೆ ಬೇರೆ. ಸಿದ್ದರಾಮಯ್ಯ ತಬ್ಬಲಿಯಾದರು. ಧೈರ್ಯವಾಗಿ ಹೇಳುವ ಶಕ್ತಿ ಕಳೆದುಕೊಂಡರು. ಚುನಾವಣೆಯಲ್ಲಿ ಎದುರು ಬದರು ಆಗಲಿ, ಜನರಿಗೆ ನೋಡಲು ಆನಂದ ಇರುತ್ತದೆ. | ಸಿ.ಎಂ.ಇಬ್ರಾಹಿಂ ವಿಧಾನಪರಿಷತ್ ಸದಸ್ಯ
ಯಾವ ಪಕ್ಷಕ್ಕೆ ಸೇರುತ್ತೀರಿ?

ಟಿಎಂಸಿ, ಎಸ್ಪಿ, ಆರ್​ಜೆಡಿ ಕೂಡ ಇದೆ. ಎಚ್.ಡಿ.ಕುಮಾರಸ್ವಾಮಿ ಬೆಳಗ್ಗೆ ಕರೆ ಮಾಡಿದ್ದರು.

ಬಿಜೆಪಿಗೆ ಸೇರುವುದಿಲ್ಲವೇ?

ಅವರದ್ದು ಕೇಶವ ಕೃಪಾ, ನಮ್ಮದು ಬಸವಕೃಪಾ. ಸಿದ್ಧಾಂತ ಬೇರೆಬೇರೆ. ಅಲ್ಲೂ ಒಳ್ಳೆಯವರಿದ್ದಾರೆ, ಆದರೂ ನನಗೆ ಒಗ್ಗಲ್ಲ.

ಕಾಂಗ್ರೆಸ್​ನಿಂದ ಮನವೊಲಿಕೆ ಆಗಲಿಲ್ಲವೇ?

ಡಿಕೆಶಿ, ಸಿದ್ದರಾಮಯ್ಯ ಬಹಳ ದೊಡ್ಡವರು ನನ್ನ ಬಳಿ ಏಕೆ ಮಾತನಾಡುತ್ತಾರೆ. ಅವರು ಮಾತನಾಡಬೇಕೆಂದು ನಿರೀಕ್ಷೆ ಮಾಡಲ್ಲ.

ಕಾಂಗ್ರೆಸ್ ವಿರುದ್ಧ ನಿಮ್ಮ ಮುಂದಿನ ಹೋರಾಟ?

ಕಂತುಕಂತಾಗಿ ಪಟ್ಟಿ ಬಿಡುಗಡೆ ಮಾಡುತ್ತೇನೆ. ಕಾಂಗ್ರೆಸ್ ಕೊಟ್ಟಿದ್ದನ್ನು ತಿರುಗಿಸಿ ಕೊಡಬೇಕಲ್ಲ.

ರಾಜಕೀಯವಾಗಿ ನೀವು ಈಗಲೂ ಶಕ್ತರೇ?

ಹುಣಸೇ ಮರಕ್ಕೆ ಎಷ್ಟೇ ವಯಸ್ಸಾದರೂ ಹುಳಿ ಮುಪ್ಪಲ್ಲ. ಈಗಲೇ ರಸ್ತೆಯಲ್ಲಿ ಬಂಬಡಾ ಬಡಿದರೆ ಹತ್ತು ಸಾವಿರ ಜನ ಸೇರುತ್ತಾರೆ. ನಾನು ಚೀಲ ಹಿಡಿದುಕೊಂಡು ಓಡುವ ಸಾಬಣ್ಣ ಅಲ್ಲ.

ಕಾಂಗ್ರೆಸ್ ಭವಿಷ್ಯದ ಬಗ್ಗೆ ನಿಮ್ಮ ಅನಿಸಿಕೆ?

ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ, ಕಾಂಗ್ರೆಸ್​ಗೆ ಕರೊನಾ ಬಡಿದಿದೆ.

ಇಬ್ರಾಹಿಂ ನನ್ನ ಸ್ನೇಹಿತ, ಕರೆದು ಮಾತನಾಡುತ್ತೇನೆ. ಮಾಧ್ಯಮದವರು ಬರುವುದು ಕಾಂಟ್ರವರ್ಸಿ ಮಾಡಲು. | ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಇಬ್ರಾಹಿಂ ಚುನಾವಣೆಯಲ್ಲಿ ಸೋತ ನಂತರವೂ ಅವರಿಗೆ ಸೂಕ್ತ ಸ್ಥಾನಮಾನ ನೀಡಿದ್ದೇವೆ. ಎರಡು ಬಾರಿ ಪರಿಷತ್​ಗೆ ಆಯ್ಕೆ ಮಾಡಲಾಗಿತ್ತು. ಅವರು ನೋವಿನಿಂದ ಮಾತನಾಡಿದ್ದಾರೆ, ಅದನ್ನು ಗಂಭೀರವಾಗಿ ತೆಗೆದು ಕೊಳ್ಳಬಾರದು. ಕಾಂಗ್ರೆಸ್​ನಲ್ಲಿ ಯಾರೂ ತಬ್ಬಲಿಯಾಗಿಲ್ಲ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸಿಎಂ ಇಬ್ರಾಹಿಂ ಜೆಡಿಎಸ್​ಗೆ ಬಂದರೆ ಸ್ವಾಗತ. ಇಬ್ರಾಹಿಂ ಅವರು ಹಿರಿಯರು, ನಮ್ಮ ಪಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಏಳು ಬೀಳುವಿನಲ್ಲಿಯೂ ಜತೆಯಾದವರು. ಅವರು ನಮ್ಮ ಪಕ್ಷಕ್ಕೆ ಬಂದರೆ ಸೂಕ್ತ ಸ್ಥಾನಮಾನ ಕೊಡುತ್ತೇವೆ. |ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಬಿಜೆಪಿಗೆ ಸಿಎಂ ಇಬ್ರಾಹಿಂ ಬರುತ್ತಾರೆಂದರೆ ನಮ್ಮ ನಾಯಕರ ಜತೆ ಮಾತನಾಡುವೆ. ಇಬ್ರಾಹಿಂ ಹಿರಿಯ ನಾಯಕರು, ಅಂಥವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಂಡಿಲ್ಲ. ಹೀಗಾಗಿ ಅವರು ಬಿಜೆಪಿಗೆ ಬರಬಹುದು. ಅವರು ಬರುತ್ತಾರೆಂದರೆ ನಮ್ಮಲ್ಲಿ ವಿರೋಧ ಏರ್ಪಡುವುದಿಲ್ಲ. | ಬಿ. ಶ್ರೀರಾಮುಲು ಸಾರಿಗೆ ಸಚಿವ