|ಶ್ವೇತಾ ನಾಯ್ಕ
ಭಾರತೀಯ ಉಡುಗೆಗಳಿಗೆ ನಮ್ಮಲ್ಲಿ ವಿಶೇಷ ಸ್ಥಾನಮಾನವಿದೆ. ಈಗ ನಾವು ತೊಡುವ ಬಟ್ಟೆಗಳು ನಾಳಿನ ಫ್ಯಾಷನ್ ಟ್ರೆಂಡ್. ರೆಟ್ರೋ ಶೈಲಿಯನ್ನು ನೆನಪಿಸುವ ಬಟ್ಟೆಗಳು ಈಗಿನ ಯುಗದಲ್ಲಿ ಭದ್ರ ಸ್ಥಾನ ಪಡೆದಿವೆ. ಮಳೆಗಾಲ, ಬೇಸಿಗೆ ಕಾಲ, ಚಳಿಗಾಲ... ಹೀಗೆ ಕಾಲ ಯಾವುದಾದರೇನು, ನಮ್ಮ ಅಸ್ತಿತ್ವ ಅಲ್ಲಿ ಇದ್ದೇ ಇರುತ್ತದೆ ಎನ್ನುವ ರೆಟ್ರೋ ಉಡುಗೆಗಳು ಈಗ ಮಹಿಳೆಯರ ಹಾಟ್ ಫೇವರಿಟ್ ಎಂದರೆ ತಪ್ಪಲ್ಲ. ಇವುಗಳ ಜತೆ ಜತೆಗೆ ಫ್ಯಾಷನ್ ಹೆಸರಲ್ಲಿ ಇಂಡೋ ವೆಸ್ಟರ್ನ್ ಉಡುಗೆಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಮಹಿಳೆಯರ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಋತುಗಳಿಗೆ ಹೊಂದಿಕೆಯಾಗುವಂತೆ ಜೀವನ ಬದಲಾವಣೆಯ ಜತೆ ಜತೆಗೆ ಉಡುಗೆಗಳಲ್ಲೂ ಸಾಕಷ್ಟು ಬದಲಾವಣೆ ಮಾಡಿಕೊಂಡು, ಓಡುತ್ತಿರುವ ಜಗತ್ತಿನೊಂದಿಗೆ ಹೆಜ್ಜೆ ಹಾಕುತ್ತಿರುವ ನಾವು ಈ ಚಳಿಗಾಲದಲ್ಲಿ ಒಂದಷ್ಟು ಹೊಸ ಟ್ರೆಂಡ್‌ಗಳನ್ನು ಪಟ್ಟಿಯಲ್ಲಿ ಸೇರಿಸಿಕೊಂಡು ತೊಟ್ಟು ಸಂಭ್ರಮಿಸುವ ಸಮಯ ಬಂದಿದೆ.
ಸ್ಟೆಟರ್ ಜಾಗಕ್ಕೆ ಬ್ಯಾಗಿ ಸ್ವೆಟರ್
ಎಲ್ಲರೂ ಸ್ಟೆಟರ್ ಹಾಕುತ್ತಾರೆ ಅದರಲ್ಲೇನು ವಿಶೇಷ ಎನ್ನುವ ಹೆಣ್ಣು ಮಕ್ಕಳು ಈಗ ಬ್ಯಾಗಿ ಸ್ವೆಟರ್‌ಗಳತ್ತ ಮುಖ ಮಾಡುತ್ತಿದ್ದಾರೆ. ಓವರ್ ಸೈಜ್‌ನಲ್ಲಿರುವ ಈ ಔಟ್‌ಫಿಟ್ ಅಂದದ ಲುಕ್ ಕೊಡುವ ಜತೆಗೆ ಚಳಿಯನ್ನು ನಿಯಂತ್ರಣದಲ್ಲಿಡುತ್ತದೆ. ಹೈವೇಸ್ಟ್ ಜೀನ್ಸ್, ಆ್ಯಂಕಲ್ ಲೆಂತ್ ಲೆಗ್ಗಿಂಗ್ಸ್ ಜತೆಗೆ ಇವುಗಳನ್ನು ಪೇರ್ ಮಾಡಬಹುದು. ಇನ್ನು ಕೆಲವರು ಹೆಚ್ಚು ಸ್ಟೈಲಿಶ್ ಆಗಿ ಕಾಣಲು ಸ್ಕರ್ಟ್ ಮೇಲೆ ಧರಿಸುತ್ತಾರೆ. ಇದು ಎಲ್ಲ ವರ್ಗದ ಮಹಿಳೆಯರಿಗೂ ಸೂಟ್ ಆಗುವ ಉಡುಗೆ.
ಅಂದ ಹೆಚ್ಚಿಸುವ ಫುಲ್ ಸ್ಲೀವ್
ಕೆಲವರು ಡಿಸೈನರ್, ಬ್ರಾಂಡೆಡ್ ಬಟ್ಟೆ ತೊಡುವಷ್ಟು ಸ್ಥಿತಿವಂತರಾಗಿರುವುದಿಲ್ಲ. ಅಂಥವರು ತಮ್ಮಲ್ಲಿ ಇರುವ ಬಟ್ಟೆಯಲ್ಲೇ ಸಾಧ್ಯವಾದಷ್ಟು ಫುಲ್‌ಸ್ಲೀವ್ ಬಟ್ಟೆಗಳನ್ನು ಧರಿಸಬೇಕು. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ತಣ್ಣನೆಯ ಗಾಳಿ ನೇರವಾಗಿ ನಮ್ಮ ಕೈ, ಕಾಲುಗಳಿಗೆ ತಾಗದಂತೆ ನೋಡಿಕೊಳ್ಳಬೇಕು. ಹೈ ಬೂಟ್ಸ್ ತೆಗೆದುಕೊಳ್ಳಲು ಸಾಧ್ಯವಾಗದೇ ಇದ್ದವರು ಅರ್ಧ ಕಾಲು ಮುಚ್ಚುವ ಸಾಕ್ಸ್ ಧರಿಸಬಹುದು. ಆದಷ್ಟು ಉಣ್ಣೆ ಅಥವಾ ಸಿಲ್ಕ್ ಬಟ್ಟೆಗಳನ್ನೇ ಧರಿಸುವುದು ಉತ್ತಮ.
ಚಾಲ್ತಿಯಲ್ಲಿದೆ ನೆಟ್ಟೆಡ್ ಬಟ್ಟೆ
ಯುವ ಜನರು ಟ್ರೆಂಡ್‌ಗೆ ತಕ್ಕಂತೆ ಬದಲಾಗುವುದು ಸಹಜ. ಒಂದು ಕಾಲದಲ್ಲಿ ಇರುವ ಬಟ್ಟೆಗಳು ಇನ್ನೊಂದು ಕಾಲದಲ್ಲಿ ಇರುವುದಿಲ್ಲ. ಕಾಲಕ್ಕೆ ತಕ್ಕಂತೆ, ಜನರ ಅಭಿರುಚಿಗೆ ಅನುಗುಣವಾಗಿ ಫ್ಯಾಷನ್‌ನಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ. ರೆಟ್ರೋ ಶೈಲಿಯ ಬಟ್ಟೆಗಳ ಜತೆಗೆ ಯುವ ಜನರಿಗೆ ಹೊಂದಿಕೆಯಾಗುವಂತೆ ಈ ಸೀಸನ್‌ನಲ್ಲಿ ಹೆಚ್ಚು ಚಾಲ್ತಿಯಲ್ಲಿರುವುದು ನೆಟ್ಟೆಡ್ ಸ್ವೆಟರ್‌ಗಳು. ಪೋಲೋ ನೆಕ್ ಸ್ಟೆಟರ್ ತೊಟ್ಟರೆ ಪೂರ್ತಿ ದೇಹ ಕವರ್ ಆಗುವುದರಿಂದ ಚಳಿಯಿಂದ ರಕ್ಷಿಸಿಕೊಳ್ಳಬಹುದು.
ನೀರೆಗೆ ಸೀರೆಯೇ ಅಂದ
ಸೀರೆ ಸಾಂಪ್ರದಾಯಿಕ ಉಡುಗೆ. ಹಬ್ಬ, ಹರಿದಿನಗಳಲ್ಲದೆ ಈಗ ಸಣ್ಣ, ಪುಟ್ಟ ಸಭೆ, ಸಮಾರಂಭಗಳಲ್ಲೂ ಮಹಿಳೆ ಸೀರೆ ಉಟ್ಟು ಸಂಭ್ರಮಿಸುತ್ತಾಳೆ. ಸೀರೆ ಯಾವುದಾದರೇನು, ನಾವು ತೊಡುವ ರವಿಕೆ ಅದಕ್ಕೆ ಹೊಂದಿಕೆಯಾಗಬೇಕು ಎನ್ನುತ್ತಾರೆ ಮಹಿಳಾಮಣಿಯರು. ಅಂತೆಯೇ ಆಯಾ ಕಾಲಕ್ಕೆ ಹೊಂದಿಕೆಯಾಗುವಂತೆ ಸೀರೆಯ ಅಂದ ಹೆಚ್ಚಿಸುವ ರವಿಕೆಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಚಳಿಗಾಲಕ್ಕೆ ಹೈ ನೆಕ್ ಸ್ಲೀವ್ ಬ್ಲೌಸ್ ಮತ್ತು ಕಾಲರ್ ನೆಕ್ ಬ್ಲೌಸ್‌ಗಳು ಉತ್ತಮ ಎನ್ನುತ್ತಾರೆ ಫ್ಯಾಷನ್ ಡಿಸೈನರ್‌ಗಳು. ಇವುಗಳನ್ನು ಧರಿಸುವುದರಿಂದ ಸೀರೆಯ ಅಂದವೂ ಹೆಚ್ಚುವುದು ಮಾತ್ರವಲ್ಲದೆ ಸ್ಟೈಲಿಶ್ ಲುಕ್ ನೀಡುತ್ತದೆ. ಇದಲ್ಲದೆ ಶರ್ಟ್ ಮೇಲೆ ಸೀರೆ ತೊಡುವುದು ಸಹ ಚಳಿಗಾಲದ ಒಂದು ಫ್ಯಾಷನ್.
ಎಲ್ಲ ಕಾಲಕ್ಕೂ ಸಲ್ಲುವ ಸಲ್ವಾರ್
ಸೀರೆ, ಜೀನ್ಸ್, ಸ್ವೆಟರ್ ಏನೇ ಇದ್ದರೂ ಸಲ್ವಾರ್ ಚಳಿಗಾಲಕ್ಕೆ ಹೇಳಿ ಮಾಡಿಸಿದ ಉಡುಗೆ. ಪೂರ್ತಿ ದೇಹ ಕವರ್ ಆಗುವುದರಿಂದ ಬೆಚ್ಚಗಿನ ಅನುಭವ ಕೊಡುತ್ತದೆ. ಎಲ್ಲರಿಗೂ ಕಡಿಮೆ ಬೆಲೆಯಲ್ಲಿ ಸಿಗುವ ಉಡುಗೆ. ಚಳಿಗಾಲಕ್ಕೆ ಇದು ಸೂಕ್ತ. ಆದಷ್ಟು ಸಿಲ್ಕ್ ಬಟ್ಟೆಗಳನ್ನೇ ತೊಡುವುದು ಉತ್ತಮ. ಸೀರೆಯನ್ನು ಸಹ ಇಂಡೋ ವೆಸ್ಟರ್ನ್ ರೀತಿಯಲ್ಲೇ ಸ್ಟೈಲ್ ಮಾಡಿದರೆ ್ಯಾಷನಬಲ್ ಆಗಿರುವ ಜತೆಗೆ ದೇಹವನ್ನೂ ಬೆಚ್ಚಗಿಡಬಹುದು. ಶರ್ಟ್ ಜೊತೆಗೆ ಲಾಂಗ್ ಸ್ಕರ್ಟ್ ತೊಡಬಹುದು.
ಮತ್ತೆ ಬಂದ ರೆಟ್ರೋ
ಹೊಸತಾಗುತ್ತಿದ್ದೇವೆ, ಹೊಸತನ ಮೈಗೂಡಿಸಿಕೊಳ್ಳುತ್ತಿದ್ದೇವೆ ಎಂದು ಎಷ್ಟೇ ಅಂದುಕೊಂಡರೂ ಅದರಲ್ಲಿ ಹಳೇ ಕಾಲದ ಒಂದು ಟಚ್ ಇದ್ದೇ ಇರುತ್ತದೆ. ಇದನ್ನೇ ನಾವು ರೆಟ್ರೋ ಶೈಲಿ ಎನ್ನುವುದು. ಬಟ್ಟೆ, ಆಭರಣ ಏನೇ ಇದ್ದರೂ ರೆಟ್ರೋ ಶೈಲಿಯನ್ನೇ ನೆನಪಿಸುವ ಬಟ್ಟೆಗಳು ಈಗಲೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿವೆ. ಹಳೆಯತನಕ್ಕೆ ಹೊಸ ಮೆರುಗು ಎನ್ನುವಂತೆ ಶಾಲ್, ಸ್ಟೋಲ್, ಪೋಲೋ ನೆಕ್, ಬ್ಯಾಗಿ ಪ್ಯಾಂಟ್, ಶ್ರಗ್ ಇವೆಲ್ಲವೂ ರೆಟ್ರೋ ಶೈಲಿಯ ಬಟ್ಟೆಗಳು. ಇದನ್ನೇ ಈಗ ಮಾರ್ಪಾಡು ಮಾಡಿ ಮಾಡರ್ನ್ ಟಚ್ ನೀಡಲಾಗಿದೆ. ಇಂಗ್ಲಿಷ್ ಫ್ಯಾಷನ್ ಅನ್ನು ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಳ್ಳಲಾಗುತ್ತಿದೆ. ಇಂಟರ್‌ನ್ಯಾಷನಲ್ ಬ್ರಾಂಡೆಡ್ ಕಂಪನಿಗಳು ಇಂತಹ ಬಟ್ಟೆಗಳನ್ನು ಚಳಿಗಾಲಕ್ಕಾಗಿಯೇ ಪರಿಚಯಿಸುತ್ತಿವೆ.
ಇದಿಷ್ಟು ಗೊತ್ತಿರಲಿ
ಜೀನ್ಸ್, ಹೂಡಿ ತೊಟ್ಟು, ಆ್ಯಂಕಲ್ ಲೆಂತ್ ಶೂ ಹಾಕಿದರೆ ಫ್ಯಾಷನ್‌ಬಲ್ ಆಗಿ ಕಾಣುವ ಜತೆಗೆ ಬೆಚ್ಚಗೂ ಇರಬಹುದು. ಇನ್ನೂ ಸ್ಟೈಲಿಶ್ ಆಗಿ ಕಾಣಿಸಬೇಕು ಅಂದುಕೊಳ್ಳುವವರು ಹೈ ವೇಸ್ಟ್ ಸ್ಟಾಕಿಂಗ್ ಜತೆಗೆ ಬೂಟ್ಸ್ ಪೇರ್ ಮಾಡಬಹುದು. ಬ್ಯಾಗಿ ಪ್ಯಾಂಟ್ ಜತೆಗೆ ಸ್ವೆಟ್ ಶರ್ಟ್ ಡಿರೆಂಟ್ ಲುಕ್ ಕೊಡುತ್ತದೆ. ಕಾರ್ಡ್‌ಸೆಟ್ ಡ್ರೆಸ್‌ಗಳು ಈಗ ಚಾಲ್ತಿಯಲ್ಲಿವೆ. ಜಿಮ್ ಡ್ರೆಸ್‌ನಂತೆಯೇ ಇದ್ದು, ಪ್ಯಾಂಟ್ ಮತ್ತು ಶರ್ಟ್ ಒಂದೇ ರೀತಿಯಾಗಿರುತ್ತದೆ. ಆದಷ್ಟು ಚರ್ಮಕ್ಕಂಟುವ ಬಟ್ಟೆಗಳನ್ನು ತೊಟ್ಟರೆ ಆರಾಮಾಗಿರುವ ಜತೆಗೆ ಚಳಿಯಿಂದಲೂ ರಕ್ಷಣೆ ಪಡೆಯಬಹುದು. ಆದಷ್ಟು ಶಾಂತವಾಗಿರುವ ಬಣ್ಣಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಚಳಿಗಾಲದ ಬಟ್ಟೆಗಳನ್ನು ಒಂದೇ ರೀತಿ ಹಾಕಿ ಬೋರ್ ಆಗಿದೆ ಎಂದುಕೊಳ್ಳುವವರು ಅವರದೇ ರೀತಿಯಲ್ಲಿ ಸ್ಟೈಲ್ ಮಾಡಬಹುದು. ಈಗ ನಾವೇನೇ ಮಾಡಿದರೂ ಅದು ನಾಳೆ ಟ್ರೆಂಡ್ ಆಗಿ ಬದಲಾಗುತ್ತದೆ.
ಪುರುಷರಿಗೂ ಹೊರತಾಗಿಲ್ಲ
ಫ್ಯಾಷನ್ ಅಂದರೆ ಅದು ಮಹಿಳೆಗಷ್ಟೇ ಸೀಮಿತವಲ್ಲ. ಈಗ ಪುರುಷರೂ ಫ್ಯಾಷನ್‌ನತ್ತ ಮುಖ ಮಾಡುತ್ತಿದ್ದಾರೆ. ಅದಕ್ಕೆ ಪೂರಕವೆಂಬಂತೆ ಮಾರುಕಟ್ಟೆಯಲ್ಲಿ ತರಹೇವಾರಿ ಉಡುಗೆಗಳು ಪರಿಚಯವಾಗುತ್ತಿವೆ. ಆದರೆ ಅವುಗಳನ್ನು ಹೇಗೆ ಬಳಸಬೇಕು, ಹೇಗೆ ಸ್ಟೈಲ್ ಮಾಡಬೇಕು ಎನ್ನುವ ಕನಿಷ್ಠ ಜ್ಞಾನ ಇದ್ದರೆ ಎಂತಹ ಸೀಸನ್ ಬಂದರೂ ಚಾರ್ಮ್ ಕಳೆದುಕೊಳ್ಳದೆ ಮಿಂಚಬಹುದು.
ಎಲ್ಲ ಕಾಲಕ್ಕೂ ಸಲ್ಲುವಂತದ್ದು ಹಳೇ ಟ್ರೆಂಡ್‌ಗಳು. ಅದನ್ನೇ ಈಗಿನ ಕಾಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿ, ಸರಳೀಕರಿಸಿ ಬಳಸಲಾಗುತ್ತಿದೆ. ಉದಾಹರಣೆಗೆ ಆಗ ಇದ್ದ ಸ್ವೆಟರ್‌ಗಳು ಇಂದಿಗೂ ಇವೆ. ಆದರೆ ಅದನ್ನು ಯುವ ಜನರು ಬಳಸುವ ರೀತಿ ಬೇರೆಯಾಗಿದೆ. ಸ್ವೆಟರ್‌ಗಳಲ್ಲೇ ಕಾರ್ಡಿಗಾನ್, ಪುಲ್‌ಓವರ್, ಪೋಲೋ ನೆಕ್ ಸ್ವೆಟರ್ ಹೀಗೆ ್ಯಾಷನಬಲ್ ಆಗಿ ಮಾರುಕಟ್ಟೆಗೆ ಬಂದಿವೆ. ಇದಲ್ಲದೆ ವಿಂಡ್ ಬ್ರೇಕರ್ಸ್, ಕಾರ್ಟ್‌ಟ್ರೇಡ್ ಟ್ರಾಕ್ ಸೂಟ್ಸ್, ಡೆನಿಮ್ ಜಾಕೆಟ್ಸ್, ಹುಡೀಸ್, ಕಾರ್ಗೋ ಪ್ಯಾಂಟ್, ಬ್ಯಾಗಿ ಪ್ಯಾಂಟ್, ಉಲನ್ ಕೋಟ್ಸ್ ಹೀಗೆ ವಿಂಟರ್ ವೇರ್‌ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ.
ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ಫ್ಯಾಷನ್ ಡಿಸೈನರ್ ಭವ್ಯಾ ಗೌಡ, ‘‘ಯಾವ ಕಾಲಕ್ಕೆ ಯಾವ ಬಟ್ಟೆ ಸೂಕ್ತ ಎನ್ನುವ ಕನಿಷ್ಠ ಜ್ಞಾನ ನಮ್ಮಲ್ಲಿರಬೇಕು. ಬೇಸಿಗೆಯಲ್ಲಿ ಹೆವಿ ಬಟ್ಟೆಗಳನ್ನು ತೊಡಲು ಸಾಧ್ಯವಿಲ್ಲ. ಹಾಗೆಯೇ ಚಳಿಗಾಲದಲ್ಲಿ ಮಿನಿ ಸ್ಕರ್ಟ್ ಅಷ್ಟು ಸೂಕ್ತವಲ್ಲ. ಇಂತಹ ಸಣ್ಣ ಪುಟ್ಟ ಫ್ಯಾಷನ್ ಅರಿವು ನಮಗಿದ್ದರೆ ಎಲ್ಲರ ಮಧ್ಯೆ ಫ್ಯಾಷನಬಲ್ ಆಗಿ ಕಾಣಿಸಬಹುದು’’ ಎನ್ನುತ್ತಾರೆ.
ಸೆಲೆಬ್ರಿಟಿ ಸ್ಟೈಲಿಸ್ಟ್ ಅಂಜಲಿ ರಾಜ್ ಪ್ರಕಾರ, ‘‘ಸೀಸನ್‌ಗಳಿಗೆ ಕಾದು ಕುಳಿತು ತಯಾರಾಗುವ ಅಗತ್ಯವಿಲ್ಲ. ಚಳಿಗಾಲದಲ್ಲಿ ಹಾಕಿದ ಬ್ಲೌಸ್‌ಗಳನ್ನು ಬೇರೆ ವಿಧದಲ್ಲಿ ಬೇಸಿಗೆಯಲ್ಲಿ ಸೀರೆಗೆ ಮ್ಯಾಚ್ ಮಾಡಿದರಾಯಿತು. ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡುವ ಐಡಿಯಾ ಇದ್ದರೆ ಸೀಸನ್‌ಗೆ ತಕ್ಕಂತೆ ನಾವೇ ಸ್ವಲ್ಪ ಬದಲಾವಣೆ ಮಾಡಿಕೊಂಡು ಸ್ಟೈಲಿಶ್ ಆಗಿ ಕಾಣಬಹುದು. ಆದರೆ ನಮ್ಮ ಬಾಡಿ ಟೈಪ್‌ಗೆ ಯಾವ ರೀತಿಯ ಬಟ್ಟೆಗಳು ಹೊಂದಿಕೆಯಾಗುತ್ತವೆ, ಯಾವ ಕಲರ್ ಸೂಕ್ತ ಎಂಬುದನ್ನು ಅರಿತಿರಬೇಕು.’’
ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ ಹೇಳುವುದು ಹೀಗೆ... ‘‘ಚಳಿಗಾಲದಲ್ಲಿ ಎಲ್ಲೆಡೆ ಹಸಿರು ವಾತಾವರಣ ಇರುವುದರಿಂದ ಪುರುಷರು ಆದಷ್ಟು ಗಾಢ ಬಣ್ಣದ ಬಟ್ಟೆಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಲೇಯರ್ ಹೆಚ್ಚಿರುವ ಜಾಕೆಟ್‌ಗಳನ್ನು ದಪ್ಪ ಇರುವವರು ಧರಿಸದೇ ಇರುವುದು ಉತ್ತಮ. ನಾವು ಧರಿಸುವ ಬಟ್ಟೆಗಳಿಂದಲೇ ನಮ್ಮನ್ನು ಅಳೆಯುವ ಕಾಲ ಬಂದಿದೆ. ಈಗ ಎಲ್ಲವನ್ನೂ ಡಿಸೈನರ್‌ಗಳೇ ಹೇಳಬೇಕು ಅಂತೇನಿಲ್ಲ. ಸೋಶಿಯಲ್ ಮೀಡಿಯಾದಲ್ಲೇ ಸಾಕಷ್ಟು ಮಾಹಿತಿ ಸಿಗುತ್ತದೆ. ಅದನ್ನು ನೋಡಿಕೊಂಡು ಕನಿಷ್ಠ ಫ್ಯಾಷನ್ ಜ್ಞಾನ ಪಡೆದರೆ ಎಲ್ಲರ ಮಧ್ಯೆ ನೀವೂ ಸ್ಟೈಲಿಶ್ ಆಗಿ ಕಾಣಬಹುದು’’ ಎಂಬುದು ರಾಜೇಶ್ ಶೆಟ್ಟಿ ಅವರ ಅಭಿಪ್ರಾಯ.