ನ್ಯೂಸ್

ಘೋಷಿತ ಅನುದಾನ ಕಡಿತ, ನೀರಾವರಿ ಯೋಜನೆಗೆ ಗ್ರಹಣ; ಎತ್ತಿನಹೊಳೆ, ಕಳಸ-ಬಂಡೂರಿ ಕಾಮಗಾರಿಗೆ ಸಂಕಷ್ಟ

ಶಿವಾನಂದ ತಗಡೂರು

ಬೆಂಗಳೂರು: ಕರೊನಾ ಕಾರಣಕ್ಕೆ ಜಲಸಂಪನ್ಮೂಲ ಇಲಾಖೆಗೆ ಬಜೆಟ್​ನಲ್ಲಿ ಘೋಷಣೆಯಾಗಿದ್ದ ಮೊತ್ತದಲ್ಲಿ 3,800 ಕೋಟಿ ರೂ. ಕಡಿತವಾಗಿದೆ.

ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸ ಬೇಕು ಎಂಬ ಮಹತ್ವಾಕಾಂಕ್ಷಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಲಸಂಪನ್ಮೂಲ ಇಲಾಖೆಗೆ 18,000 ಕೋಟಿ ರೂ. ಬಜೆಟ್ ನೆರವು ನೀಡಿದ್ದರು. ಎತ್ತಿನಹೊಳೆಗೆ 1,500 ಕೋಟಿ ರೂ., ಕಳಸ ಬಂಡೂರಿ ಯೋಜನೆಗೆ 500 ಕೋಟಿ ರೂ. ಘೋಷಿಸಿದ್ದರು. ಕರೊನಾ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳಿಗೂ ಬಜೆಟ್ ಅನುದಾನ ಕಡಿತಗೊಳಿಸಲಾಗಿದ್ದು, ಜಲಸಂಪನ್ಮೂಲ ಇಲಾಖೆಗೂ 3,800 ಕೋಟಿ ರೂ. ಬಜೆಟ್ ಕಡಿತ ಮಾಡಲು ನಿರ್ಧರಿಸಲಾಗಿದೆ.

ಹೊಸದಾಗಿ ಯಾವುದೇ ಕಾಮಗಾರಿ ಕೈಗೊಳ್ಳದಂತೆ, ಈಗಾಗಲೇ ಕೈಗೊಂಡಿರುವ ಕಾಮಗಾರಿಗಳನ್ನು ಮಾತ್ರವೇ ಮುಂದುವರಿಸಲು ನಿರ್ದೇಶನ ನೀಡಲಾಗಿದೆ. ಬಜೆಟ್ ನೆರವು ಕಡಿತದ ಕಾರಣ ಕಾಮಗಾರಿಗಳ ವೇಗಕ್ಕೂ ಬ್ರೇಕ್ ಬಿದ್ದಿದೆ. ಇಲಾಖೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಮುಗಿಸಬೇಕು ಎನ್ನುವ ನಿಟ್ಟಿನಲ್ಲಿ ನಡೆಯುತ್ತಿದ್ದ ಪ್ರಯತ್ನಗಳಿಗೆ ಎಳ್ಳು ನೀರು ಬಿಟ್ಟಂತಾಗಿದೆ.

ಎತ್ತಿನಹೊಳೆಗೂ ಬ್ರೇಕ್: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಅನುಷ್ಠಾನಗೊಳ್ಳುತ್ತಿರುವ ಎತ್ತಿನಹೊಳೆ ಯೋಜನೆಯನ್ನು ತ್ವರಿತಗತಿಯಲ್ಲಿ ಮುಗಿಸಬೇಕು ಎಂಬ ಸಂಕಲ್ಪದಿಂದ ಈ ಬಾರಿ ಹೆಚ್ಚಿನ ಬಜೆಟ್ ನೆರವು ನೀಡಲಾಗಿತ್ತು. ಬಜೆಟ್ ಕಡಿತವಾಗಿರುವ ಕಾರಣ ಈ ಯೋಜನೆಗೂ ಆದ್ಯತೆ ಕಡಿಮೆ ಆಗಲಿದೆ.

ಕಳಸ ಬಂಡೂರಿಗೆ ಗ್ರಹಣ: ನ್ಯಾಯಾಧಿಕರಣ ತೀರ್ಪು ಬಂದ ಹಿನ್ನೆಲೆಯಲ್ಲಿ ಕಳಸ ಬಂಡೂರಿ ಯೋಜನೆಯನ್ನು ರಾಜಕೀಯ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಬಿಜೆಪಿ ಸರ್ಕಾರ, ಬಜೆಟ್​ನಲ್ಲಿ 500 ಕೋಟಿ ರೂ. ನೆರವು ಘೋಷಣೆ ಮೂಲಕ ಮಹತ್ವದ ಹೆಜ್ಜೆ ಇಟ್ಟಿತ್ತು. ಈಗ ಈ ಯೋಜನೆ ವೇಗಕ್ಕೂ ಕಡಿವಾಣ ಹಾಕಲಾಗಿದೆ.

ಇದನ್ನೂ ಓದಿ; ‘ಸೇಲ್ಸ್​ಮನ್​’ ಆಗಲಿಲ್ಲ ಶಿಕ್ಷಕ; ವಜಾಗೊಳಿಸಿದ ಸಂಸ್ಥೆ; ಬಾಳೆಹಣ್ಣು ಮಾರಾಟಕ್ಕಿಳಿದವನ ಕೈಹಿಡಿದ ವಿದ್ಯಾರ್ಥಿಗಳು

ಯುಕೆಪಿಗೂ ಕುತ್ತು: ಅಲಮಟ್ಟಿ ಜಲಾಶಯದ ಎತ್ತರವನ್ನು 519 ಮೀಟರ್​ನಿಂದ 524 ಮೀಟರ್​ಗೆ ಏರಿಕೆ ಮಾಡಿದರೆ 18 ಹಳ್ಳಿಗಳ ಸಹಿತ 75 ಸಾವಿರ ಎಕರೆ ಹಿನ್ನೀರಿನಲ್ಲಿ ಮುಳುಗಡೆ ಆಗಲಿದೆ. ಅದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು 30 ಸಾವಿರ ಕೋಟಿ ರೂ. ನೆರವು ಅಗತ್ಯವಿದೆ. ಈ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸಲು 5 ಸಾವಿರ ಕೋಟಿ ರೂ. ನೀಡಲು ಉದ್ದೇಶಿಸಲಾಗಿತ್ತು. ಬಜೆಟ್​ಗೆ ಕಡಿವಾಣ ಹಾಕಿರುವ ಕಾರಣ, ಈಗ ನಾಲಾ ಕಾಮಗಾರಿಗಳನ್ನು ಮಾತ್ರ ಮುಗಿಸಲು ಉದ್ದೇಶಿಸಲಾಗಿದೆ. ನ್ಯಾಯಾಧೀಕರಣ ತೀರ್ಪು ಬಂದು ವಿವಾದ ಬಗೆಹರಿಸಿದ್ದು, ಗೆಜೆಟ್ ನೋಟಿಫಿಕೇಶನ್ ಮಾತ್ರ ಬಾಕಿ ಇದೆ. ಕಾಲಮಿತಿಯಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಕರೊನಾ ಗ್ರಹಣ ಕಾಡುತ್ತಿದೆ.

ನೀರಾವರಿ ಯೋಜನೆಗಳಿಗೆ ಬಜೆಟ್​ನಲ್ಲಿ 18 ಸಾವಿರ ಕೋಟಿ ರೂ. ನೀಡಲಾಗಿತ್ತು. ಕರೊನಾ ಕಾರಣದಿಂದ ಸುಮಾರು 3 ಸಾವಿರ ಕೋಟಿ ರೂ. ಕಡಿತವಾಗಲಿದೆ ಎಂಬ ಮಾಹಿತಿ ಬಂದಿದೆ. ಇರುವ ಹಣಕಾಸು ನೆರವಿನ ಇತಿಮಿತಿಯಲ್ಲಿ ಕೆಲಸ ಮಾಡಲು ನಿರ್ಧರಿಸಲಾಗಿದೆ. | ರಾಕೇಶ್ ಸಿಂಗ್ ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ https://www.vijayavani.net/complete-lockdown-will-be-implemented-in-india-starting-june-15-is-fake-news/