ನ್ಯೂಸ್

ಕ್ಷಯಮುಕ್ತ ಆಗುವತ್ತ ಕರ್ನಾಟಕ; ಇಂದು ವಿಶ್ವ ಕ್ಷಯರೋಗ (ಟಿಬಿ) ದಿನ

| ಪಂಕಜ ಕೆ.ಎಂ. ಬೆಂಗಳೂರು

ಕರ್ನಾಟಕವನ್ನು 2025ಕ್ಕೆ ಕ್ಷಯಮುಕ್ತಗೊಳಿಸುವ ಗುರಿಹೊಂದಿದ್ದು, 14 ಜಿಲ್ಲೆಗಳು ಕ್ಷಯ ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿವೆ. ಕ್ಷಯ ನಿಯಂತ್ರಣ ಕಾರ್ಯದಲ್ಲಿ ದಕ್ಷಿಣ ಭಾರತದಲ್ಲಿ ಅತ್ಯುತ್ತಮ ಸಾಧನೆಗೈದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

2015ಕ್ಕೆ ಹೋಲಿಸಿದರೆ ಬೆಂಗಳೂರು ನಗರ, ಬೆಳಗಾವಿ, ಉಡುಪಿ, ಉತ್ತರ ಕನ್ನಡ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಶೇ. 40 ಹಾಗೂ ಬೆಂಗಳೂರು ಗ್ರಾಮಾಂತರ, ಬಿಜಾಪುರ, ಚಾಮರಾಜನಗರ, ದಾವಣಗೆರೆ, ಧಾರವಾಡ, ಕೋಲಾರ, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಶೇ. 20 ಕ್ಷಯ ರೋಗ ಪ್ರಮಾಣ ಇಳಿಕೆಯಾಗಿದೆ. ಶೇ. 40 ಇಳಿಕೆಯಾಗಿರುವ ಐದು ಜಿಲ್ಲೆಗಳು ಬೆಳ್ಳಿ ಪದಕ ಹಾಗೂ ಶೇ. 20 ಇಳಿಕೆಯಾಗಿರುವ ಒಂಬತ್ತು ಜಿಲ್ಲೆಗಳು ಕೇಂದ್ರ ಸರ್ಕಾರದಿಂದ ಕಂಚಿನ ಪದಕಕ್ಕೆ ಭಾಜನವಾಗಿವೆ. ನವದೆಹಲಿಯಲ್ಲಿ ಇಂದು (ಮಾ. 24) ನಡೆಯಲಿರುವ ಕಾರ್ಯಕ್ರಮದಲ್ಲಿ ಪದಕ ಪ್ರದಾನ ಮಾಡಲಾಗುತ್ತಿದೆ.

ಕೋವಿಡ್​ನಿಂದ ಹಿನ್ನಡೆ: ಕೋವಿಡ್ ಹಾಗೂ ಲಾಕ್​ಡೌನ್ ನಿಂದಾಗಿ ಅನೇಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೆ ಹಿನ್ನಡೆಯಾಗಿದ್ದು, ಅದರಲ್ಲಿ ಪ್ರಮುಖವಾಗಿ ಟಿಬಿ ಪತ್ತೆ ಕಾರ್ಯಕ್ಕೆ ಹೊಡೆತ ಬಿದ್ದಿದೆ. ದೇಶವು 2025ರ ವೇಳೆಗೆ ಟಿಬಿಮುಕ್ತವಾಗುವ ಗುರಿ ಹೊಂದಿದೆ. 2019ರಲ್ಲಿ ರೋಗಿಗಳ ಪತ್ತೆ ಕಾರ್ಯದಲ್ಲಿ ಶೇ. 71 ಪ್ರಗತಿ ಸಾಧಿಸಿತ್ತು. ಆದರೆ ಕೋವಿಡ್​ನಿಂದಾಗಿ 2020 (ಶೇ. 49) ಮತ್ತು 2021 (ಶೇ. 54) ಮಾತ್ರ ಆಯಿತು. ಆದಾಗಿಯೂ 14 ಜಿಲ್ಲೆಗಳು ಉತ್ತಮ ಸಾಧನೆ ತೋರಿವೆ.

2025ಕ್ಕೆ ‘ಕ್ಷಯಮುಕ್ತ ಕರ್ನಾಟಕ’ ಗುರಿ ಹೊಂದಲಾಗಿದ್ದು, ರಾಜ್ಯದ 14 ಜಿಲ್ಲೆಗಳು ಕ್ಷಯ ನಿಮೂಲನೆಗೆ ಸನ್ನಿಹಿತವಾಗಿವೆ. ಕ್ಷಯ ಪತ್ತೆ ಕಾರ್ಯ, ಚಿಕಿತ್ಸೆ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಕ್ರಿಯಾ ಯೋಜನೆ ರೂಪಿಸಲಾಗಿದೆ. | ರಮೇಶ್ ರೆಡ್ಡಿ ಜಂಟಿ ನಿರ್ದೇಶಕ (ಟಿಬಿ ವಿಭಾಗ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಕೋವಿಡ್ ಸಂದರ್ಭದ ಸೇವೆಗಳು: ಕೋವಿಡ್ ಸಂದರ್ಭದಲ್ಲಿ ಇಲಾಖೆ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುವ ಮೂಲಕ ಕ್ಷಯ ರೋಗಿಗಳನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸುವ ಕಾರ್ಯ ನಿರ್ವಹಿಸಿದರು. ಲಾಕ್​ಡೌನ್ ಸಂದರ್ಭದಲ್ಲಿ ರೋಗಿಗಳ ಮನೆ ಬಾಗಿಲಿಗೆ ಔಷಧ ಪೂರೆಸಲಾಯಿತು. ಇದಲ್ಲದೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಶೀತ ಜ್ವರ (ಐಎಲ್​ಐ) ಹಾಗೂ ಉಸಿರಾಟದ ತೊಂದರೆ (ಸಾರಿ) ಹೊಂದಿದ ರೋಗಿಗಳಿಗೆ ಸಿಬಿನ್ಯಾಟ್ ಮೂಲಕ ಕ್ಷಯ ಪರೀಕ್ಷೆ ನಡೆಸಲಾಗಿದೆ. ಆಪ್ತಮಿತ್ರ ಸಹಾಯವಾಣಿಗೆ ಕರೆ ಮಾಡಿದವರನ್ನು ಸಂರ್ಪಸಿ ಸಂಭಾವ್ಯ ಕ್ಷಯರೋಗಿಗಳ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ಸಾಂಕ್ರಾಮಿಕ ಸಂದರ್ಭದಲ್ಲಿ ರಾಜ್ಯಾದ್ಯಂತ 324 ಸಿಟಿ ಸ್ಕಾ್ಯನ್ ಕೇಂದ್ರಗಳ ಮೂಲಕ 1,243 ಸಂಭಾವ್ಯ ಕ್ಷಯ ರೋಗಿಗಳನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 361 ಕ್ಷಯರೋಗಿಗಳನ್ನು ಗುರುತಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ.