ನ್ಯೂಸ್

ಕಾವೇರಿ ಸಂಕಷ್ಟಕ್ಕೆ ಪರಿಹಾರಗಳೇನು?: ಅಗತ್ಯವಿದೆ ಶಾಶ್ವತ ಪರಿಹಾರ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು 
ರಾಜ್ಯಕ್ಕೆ ಎದುರಾಗಿರುವ ಕಾವೇರಿ ನದಿ ನೀರಿನ ಸಂಕಷ್ಟಕ್ಕೆ ಪರಿಹಾರಗಳೇನು? ಕೇಂದ್ರ ಸರ್ಕಾರದ ಮೇಲೆ ಹಾಕಬೇಕಾದ ಒತ್ತಡಗಳೇನು? ಸುಪ್ರೀಂ ಕೋರ್ಟ್​ಗೆ ಮಾಡಿಕೊಳ್ಳಬೇಕಾಗಿರುವ ಮನವಿ ಏನು? ರಾಜ್ಯ ಎದುರಿಸುತ್ತಿರುವ ಬರದ ನಡುವೆಯೂ ತಮಿಳುನಾಡಿಗೆ ನೀರು ಬಿಡಬೇಕೆಂಬ ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಕಾವೇರಿ ನದಿ ನೀರು ಪ್ರಾಧಿಕಾರಗಳ ಆದೇಶದಿಂದ ಆತಂಕಕ್ಕೆ ಒಳಗಾಗಿರುವ ರಾಜ್ಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆಗಳಿವು. ಇವುಗಳಿಗೆ ತಜ್ಞರು ಸರ್ಕಾರಕ್ಕೆ ಅನೇಕ ಸಲಹೆ ನೀಡುತ್ತಾರೆ. ಕಾವೇರಿ ನ್ಯಾಯಾಧೀಕರಣ ತೀರ್ಪು ನೀಡಿದ ನಂತರವೂ ಪದೇಪದೆ ತಮಿಳುನಾಡು ಸರ್ಕಾರ ಕ್ಯಾತೆ ತೆಗೆಯುತ್ತಿದ್ದು, ಶಾಶ್ವತ ಪರಿಹಾರ ಸರ್ಕಾರ ಕಂಡುಕೊಳ್ಳಲೇಬೇಕಾಗಿದೆ. ಉತ್ತಮ ಮಳೆಯಾದ ಸಂದರ್ಭದಲ್ಲಿ ಸಮಸ್ಯೆ ಇರುವುದಿಲ್ಲ, ಸಂಕಷ್ಟ ಬರುವುದು ಮೂರು ಅಥವಾ ನಾಲ್ಕ ವರ್ಷಕ್ಕೊಮ್ಮೆ ಬರುವ ಹವಾಮಾನ ವೈಪರಿತ್ಯದ ಸಂದರ್ಭದಲ್ಲಿ ಮಾತ್ರ.

ಎನ್​ಡಿಆರ್​ಎಫ್ ನಿಯಮ ತಿದ್ದುಪಡಿ: ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಪರಿಹಾರ ನೀಡಲು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್​ಡಿಆರ್​ಎಫ್) ಇದೆ. ಜಲ ಸಂಕಷ್ಟವನ್ನು ಸಹ ಆ ನಿಧಿಯ ವ್ಯಾಪ್ತಿಗೆ ತರಲು ಕಾನೂನು ತಿದ್ದುಪಡಿ ಮಾಡುವಂತೆ ಜಲ ವಿವಾದ ಎದುರಿಸುತ್ತಿರುವ ಎಲ್ಲ ರಾಜ್ಯಗಳು ಕೇಂದ್ರದ ಮೇಲೆ ಒತ್ತಡ ತರಬೇಕು ಎಂಬ ಸಲಹೆ ತಜ್ಞರಿಂದ ಬರುತ್ತಿದೆ. ಸಂಕಷ್ಟ ಎದುರಿಸುವ ರಾಜ್ಯಗಳಿಗೆ ಹಂಚಿಕೆಯಾದ ನೀರಿನ ಟಿಎಂಸಿ ಆಧಾರದಲ್ಲಿ ಈ ನಿಧಿಯಲ್ಲಿ ಹಣ ಹಂಚಿಕೆ ಮಾಡುವ ಮೂಲಕ ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂಬುದು ನೀರಾವರಿ ತಜ್ಞ ಕ್ಯಾಫ್ಟನ್ ರಾಜಾರಾವ್ ಅವರ ಅನಿಸಿಕೆ.

ಸಂಕಷ್ಟ ಸೂತ್ರ: ನ್ಯಾಯಮಂಡಳಿ ತೀರ್ಪು ನೀಡಿದೆ. ಆದರೆ ಸಂಕಷ್ಟ ಸೂತ್ರವೇ ಇಲ್ಲ. ಸರ್ಕಾರ ಸಂಕಷ್ಟ ಸೂತ್ರಕ್ಕೆ ಈಗ ಸುಪ್ರೀಂಕೋರ್ಟ್​ಗೆ ಒತ್ತಡ ಹಾಕಬೇಕಾಗಿದೆ. ಸಂಕಷ್ಟ ಸೂತ್ರ ಬರದಿದ್ದರೆ ಪದೇಪದೆ ಇದೇ ಪರಿಸ್ಥಿತಿ ಇರುತ್ತದೆ. ನ್ಯಾಯಮಂಡಳಿ ತನ್ನ ಸಂವಿಧಾನಾತ್ಮಕ ಕರ್ತವ್ಯವನ್ನೇ ಪಾಲಿಸಲಿಲ್ಲ, ರಾಜ್ಯದ ಪರ ವಕೀಲರು ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಿಲ್ಲವೆಂಬ ಆಕ್ರೋಶ ಜನರಲ್ಲಿದೆ.

ಸಂಪೂರ್ಣ ನೀರಿನ ಬಳಕೆ: ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ ನೀರಿನ ಪ್ರಮಾಣ 740 ಟಿಎಂಸಿ. ಅದರಲ್ಲಿ ಕರ್ನಾಟಕ 4 ಜಲಾಶಯಗಳಿಂದ 127 ಟಿಎಂಸಿ, ತಮಿಳುನಾಡು 2 ಜಲಾಶಯಗಳಿಂದ 130 ಟಿಎಂಸಿ ಹಾಗೂ ಕೆರೆ ಮತ್ತು ಇತರೆ ಮೂಲಗಳಿಂದ 100 ಟಿಎಂಸಿ ನೀರನ್ನು ಸಂಗ್ರಹ ಮಾಡಲು ಸಾಧ್ಯವಿದೆ. ಉಳಿದ ನೀರು ಸಮುದ್ರ ಸೇರುತ್ತಿದೆ. ಸಮುದ್ರ ಸೇರುವ ನೀರನ್ನು ಸಂಗ್ರಹ ಮಾಡಲು 2 ರಾಜ್ಯಗಳು ತಲಾ ಎರಡು ಜಲಾಶಯಗಳನ್ನು ನಿರ್ಮಾಣ ಮಾಡಿಕೊಳ್ಳಲು ನ್ಯಾಯಮಂಡಳಿ ಅಂತಿಮ ಆದೇಶದಲ್ಲಿ ಹೇಳಿದೆ. ಅದರ ಭಾಗವಾಗಿಯೇ ಮೇಕೆ ದಾಟು ಯೋಜನೆ ರೂಪಿತವಾಗಿದೆ. ಈ ಯೋಜನೆಗೆ ತಮಿಳುನಾಡಿನ ವಿರೋಧ ಅರ್ಥಹೀನ ಎಂಬುದನ್ನು ಸುಪ್ರೀಂಕೋರ್ಟ್​ಗೆ ಮನವರಿಕೆ ಮಾಡುವ ಕೆಲಸವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾಡಬೇಕಾಗಿದೆ. ಏಕೆಂದರೆ ಹಿಂಗಾರಿನಲ್ಲಿ 237 ಟಿಎಂಸಿ ನೀರು ಬರುವ ಅಂದಾಜಿದೆ. ಆದರೆ ಅದು ಸಂಗ್ರಹ ಆಗುವುದಿಲ್ಲ. ಕೇಂದ್ರ ಸರ್ಕಾರ ಮೇಕೆದಾಟಿಗೆ ಪರಿಸರ ಅನುಮತಿಯನ್ನು ತಕ್ಷಣ ಕೊಡಬೇಕು ಎಂದು ತಜ್ಞರು ಹೇಳುತ್ತಾರೆ.

ಹಿಂಗಾರಿಗೆ ಸಂಗ್ರಹ: ನ್ಯಾಯಮಂಡಳಿಯ ಪ್ರಕಾರವೇ ಹಾರಂಗಿ ಮತ್ತು ಹೇಮಾವತಿಯಲ್ಲಿ ಸಂಗ್ರಹವಾಗುವ ನೀರು ಹಿಂಗಾರಿಗೆ ಇಟ್ಟುಕೊಳ್ಳಬೇಕಾಗಿದೆ. ಅಲ್ಲಿಂದ ಬಿಡುವುದಾದರೆ ಮತ್ತೆ ಆದೇಶದ ಉಲ್ಲಂಘನೆ ಮಾಡಿದಂತಾಗುತ್ತದೆ.

ಕಾವೇರಿ ಕುಟುಂಬವೊಂದೇ ಪರಿಹಾರ: ರಾಜಕಾರಣಿಗಳು, ನ್ಯಾಯಾಲಯಗಳಿಂದ ಪರಿಹಾರ ಸಿಗಲಿದೆ ಎಂಬ ವಿಶ್ವಾಸ ಈಗ ಜನರಲ್ಲಿ ಉಳಿದಿಲ್ಲ. ರೈತರು, ಸಮುದಾಯ ಸೇರಿ ಎಲ್ಲ ವಾರಸುದಾರರನ್ನು ಒಳಗೊಂಡ ಪ್ರಾಧಿಕಾರವೊಂದು ರಚನೆಯಾಗಬೇಕು. ಅದು ಸರ್ಕಾರಿ ಪ್ರಾಧಿಕಾರವಾಗಿರಬಾರದು. ಅದರ ಮೂಲಕ ಕಾಲಕಾಲಕ್ಕೆ ಪರಿಹಾರ ಕಂಡುಕೊಳ್ಳುತ್ತ ಹೋಗಬೇಕು ಎಂದು ಹೇಳುತ್ತಾರೆ ಕೃಷಿ ತಜ್ಞ ಡಾ. ಪ್ರಕಾಶ್ ಕಮ್ಮರಡಿ

ಅಂತರ್ಜಲ ಬಳಕೆ ಮಾಡಲಿ: ತಮಿಳುನಾಡು 10 ಟಿಎಂಸಿ ತನಕ ಅಂತರ್ಜಲ ಬಳಕೆ ಮಾಡಲು ನ್ಯಾಯಮಂಡಳಿ ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ ಇಲ್ಲದ ನೀರಿಗೆ ಒತ್ತಡ ತರುವುದಕ್ಕಿಂತ ಅಲ್ಲಿ ಲಭ್ಯವಿರುವ ಅಂತರ್ಜಲ ಬಳಕೆ ಮಾಡಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆ ನಿಟ್ಟಿನಲ್ಲಿ ಸುಪ್ರೀಂಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟು ಪರಿಹಾರ ಕಂಡುಕೊಳ್ಳಬೇಕಾಗಿದೆ.

ಸ್ಥಳ ಪರಿಶೀಲನೆಗೆ ಕರೆ ತನ್ನಿ: ನ್ಯಾಯಮಂಡಳಿ 1991 ರಲ್ಲಿ ಮಳೆ ಇಲ್ಲದ ಸಂದರ್ಭದಲ್ಲಿ ಏನು ಮಾಡಬೇಕೆಂಬ ಬಗ್ಗೆ ಹೇಳಿರುವುದನ್ನು ಪ್ರಾಧಿಕಾರಕ್ಕೆ ನೆನಪಿಸಬೇಕು. ಸ್ಥಳ ಪರಿಶೀಲನೆ ಮಾಡುವಂತೆ ಒತ್ತಡ ತರಬೇಕು ಎಂಬುದು ಕಾನೂನು ತಜ್ಞ ಕಾಂತರಾಜ್ ಅವರ ಅಭಿಪ್ರಾಯವಾಗಿದೆ.

ಬಹಿರಂಗ ಮಾಡಬೇಕು: ತಮಿಳುನಾಡಿನಲ್ಲಿ ಮುಂಗಾರಿ ಗಿಂತ ಹಿಂಗಾರು ಉತ್ತಮ ಮಳೆ ಯಾಗುತ್ತದೆ. 2 ಜಲಾಶಯಗಳಲ್ಲಿ 106 ಟಿಎಂಸಿ ನೀರಿತ್ತು. ಆದರೆ ಅದು ಪೋಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿದೆ ಎಂಬುದನ್ನು ಬಹಿರಂಗ ಮಾಡಬೇಕು ಎಂಬ ಅಭಿಪ್ರಾಯವೂ ತಜ್ಞರಿಂದ ಕೇಳಿ ಬರುತ್ತದೆ.

ಸುಪ್ರೀಂ ಆದೇಶ ಉಲ್ಲಂಘನೆಯಾಗಲ್ಲವೇ?: ಬೆಂಗಳೂರಿಗೆ ಕುಡಿಯುವ ನೀರಿಗೆ 4.75 ಟಿಎಂಸಿ ನೀರು ಬೇಕೆಂಬ ಬಗ್ಗೆ ಸುಪ್ರೀಂಕೋರ್ಟ್ ಆದೇಶವೊಂದರಲ್ಲಿ ಹೇಳಿದೆ. ಜಲಾಶಯದಲ್ಲಿರುವ ನೀರಿನಲ್ಲಿ ಮುಂದಿನ ಬೇಸಿಗೆಯ ತನಕ ಸುಮಾರು 8 ಟಿಎಂಸಿ ಆವಿಯಾಗಬಹುದು ಎಂಬ ಅಂದಾಜಿದೆ. ಅದರ ಜತೆಗೆ ಡೆಡ್ ಸ್ಟೋರೇಜ್ ಸೇರಿ 35 ಟಿಎಂಸಿ ಇದ್ದಾಗ ಮಾತ್ರ ಬೆಂಗಳೂರಿಗೆ ಸುಪ್ರೀಂಕೋರ್ಟ್ ಹೇಳಿದಂತೆ 4.75 ಟಿಎಂಸಿ ನೀರು ಸರಬರಾಜು ಮಾಡಬಹುದು. ಇಲ್ಲದಿದ್ದರೆ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ. ಆ ಎಚ್ಚರಿಕೆ ಸರ್ಕಾರಕ್ಕೆ ಇರಬೇಕಾಗುತ್ತದೆ.

ಸರ್ಕಾರಕ್ಕೆ ಭಯ: ಹಿಂದೆ 1991ರಲ್ಲಿ ಬಂಗಾರಪ್ಪ, 1995ರಲ್ಲಿ ದೇವೇಗೌಡ, 2001ರಲ್ಲಿ ಎಸ್.ಎಂ. ಕೃಷ್ಣ ಎದುರಿಸಿದ್ದ ಪರಿಸ್ಥಿತಿಗಿಂತ ಈಗ ಸಾಕಷ್ಟು ಭಿನ್ನವಾದ ಪರಿಸ್ಥಿತಿ ಸರ್ಕಾರದ ಮುಂದಿದೆ. ಕಳೆದ 32 ವರ್ಷಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ ಮಳೆ ಈ ವರ್ಷ ಆಗಿದೆ. ಜಲಾಶಯದಲ್ಲಿರುವ ನೀರು ಕುಡಿಯುವುದಕ್ಕೂ ಸರಬರಾಜು ಮಾಡಲಾಗದ ಸ್ಥಿತಿ ಇದೆ.

ಹಿಂದೆ ಎರಡೂ ರಾಜ್ಯಗಳ ರೈತರು ಸೇರಿ ಕಾವೇರಿ ಕುಟುಂಬವೆಂಬ ಒಕ್ಕೂಟ ರಚನೆ ಮಾಡಿಕೊಂಡು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಅದೇ ನಿಟ್ಟಿನಲ್ಲಿ ಈಗ ರಾಷ್ಟ್ರ ಮಟ್ಟದ ಪ್ರಾಧಿಕಾರವೊಂದನ್ನು ರಚನೆ ಮಾಡಬೇಕು. ಅದು ಸರ್ಕಾರಿ ವ್ಯವಸ್ಥೆಯಿಂದ ಹೊರತಾಗಿರಬೇಕು. | ಡಾ. ಪ್ರಕಾಶ್ ಕಮ್ಮರಡಿ, ಕೃಷಿ ತಜ್ಞ ಕೂಡಲೇ ಕಾವೇರಿ ನದಿ ಪ್ರಾಧಿಕಾರದ ತಜ್ಞರ ತಂಡವನ್ನು ರಾಜ್ಯಕ್ಕೆ ಕರೆ ತಂದು ಸ್ಥಳ ಪರಿಶೀಲನೆ ಮಾಡಿಸಬೇಕು. ಸಂಕಷ್ಟ ಇದೆ ಎಂಬುದನ್ನು ತಂಡಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬೇಕು.ಟ್ರಿಬ್ಯುನಲ್ ಕೊಟ್ಟಿರುವ ಆದೇಶ ಜಾರಿಗೆ ಒತ್ತಾಯಿಸಬೇಕು. | ಕಾಂತರಾಜ್, ಕಾನೂನು ತಜ್ಞ ಕಾವೇರಿ ನಾವು ಮಾಡಿಕೊಂಡ ಸಮಸ್ಯೆ. ಟ್ರಿಬ್ಯುನಲ್ ಆದೇಶವನ್ನೇ ಇವರ್ಯಾರೂ ಗಂಭೀರವಾಗಿ ಅಧ್ಯಯನ ಮಾಡಿಲ್ಲ. ಕುಡಿಯುವ ನೀರು ಆದ್ಯತೆಯಾಗಬೇಕು. ಹೆಚ್ಚುವರಿ ಉಳಿಯುವ 47 ಟಿಎಂಸಿಯಲ್ಲಿ 24 ಟಿಎಂಸಿಯನ್ನು ಚೆನ್ನೈನ ಕುಡಿಯುವ ನೀರಿಗೆ ಕೊಡುತ್ತಿರುವ ಬಗ್ಗೆ ಏಕೆ ಗಟ್ಟಿಯಾಗಿ ಹೇಳುತ್ತಿಲ್ಲ. | ಪ್ರೊ.ನರಸಿಂಹಪ್ಪ, ನೀರಾವರಿ ತಜ್ಞ ಕೇಂದ್ರ ಹಾಗೂ ಸುಪ್ರೀಂಕೋರ್ಟ್ ಮುಂದೆ ನಮ್ಮವರು ಸರಿಯಾಗಿ ವಾದಿಸದಿದ್ದರೆ, ನಮ್ಮವರೇ ಅನ್ಯಾಯ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ. ನ್ಯಾಯಮಂಡಳಿಯ ತೀರ್ಪಿನಲ್ಲಿ ಅನೇಕ ಅಂಶಗಳನ್ನು ಹೇಳುವ ಮೂಲಕ ರಾಜ್ಯಕ್ಕೆ ನ್ಯಾಯ ಪಡೆಯಬೇಕು. | ಕ್ಯಾಪ್ಟನ್ ರಾಜಾರಾವ್, ನೀರಾವರಿ ತಜ್ಞ

4 ನಿರ್ಣಯ ಅಂಗೀಕಾರ

ಕಾವೇರಿ ನದಿ ನೀರಿನ ವಿಚಾರಕ್ಕೆ ಸಂಬಂಧಿಸಿ ವಿಧಾನಮಂಡಲದಲ್ಲಿ ಇದುವರೆಗೂ ನಾಲ್ಕು ನಿರ್ಣಯ ಅಂಗೀಕರಿಸಲಾಗಿದೆ.
  • ್ಞ1991ರ ಡಿಸೆಂಬರ್ 2 ಮತ್ತು 3ರಲ್ಲಿ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪು ಬಂದಾಗ ಕಾವೇರಿ ಕೊಳ್ಳದ ರಕ್ಷಣೆ ಕುರಿತ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಅನುಮೋದನೆ ನೀಡಲಾಗಿತ್ತು. ಆದರೆ ಆದರೆ ಸುಗ್ರೀವಾಜ್ಞೆ ಹೈಕೋರ್ಟ್​ನಲ್ಲಿ ಬಿದ್ದು ಹೋಯಿತು. 
  • 1995ರ ಡಿಸೆಂಬರ್ 28ರಂದು ಕಾವೇರಿ ಮಧ್ಯಂತರ ಆದೇಶದ ಪ್ರಕಾರ ನೀರಿ ಹಂಚಿಕೆ ಕುರಿತಂತೆ ಅಧಿವೇಶನ ನಡೆದು ನ್ಯಾಯಾಲಯದ ತೀರ್ಪು ಕಷ್ಟವೆಂಬ ನಿರ್ಣಯ ಕೈಗೊಳ್ಳಲಾಗಿತ್ತು. 
  • ಕಾವೇರಿ ಅಂತಿಮ ತೀರ್ಪು ಹೊರ ಬಂದ ನಂತರ 2007ರ ಏಪ್ರಿಲ್ 13ರಂದು ನಡೆದ ಅಧಿವೇಶನದಲ್ಲಿ ತೀರ್ಪು ರಾಜ್ಯಕ್ಕೆ ಅನ್ಯಾಯ ಮಾಡಿದೆ, ಕೇಂದ್ರ ಸರ್ಕಾರ ರಾಜ್ಯದ ಪರವಾಗಿ ಬಲವಾಗಿ ವಾದಿಸುವ ಮೂಲಕ ನ್ಯಾಯ ಒದಗಿಸಬೇಕು ಎಂಬ ನಿರ್ಣಯ ವನ್ನು ಕೈಗೊಳ್ಳಲಾಗಿತ್ತು. 2002ರ ಸೆಪ್ಟಂಬರ್ 24ರಂದು ಅಧಿವೇಶನ ನಡೆಸಿ ಕಾವೇರಿ ವಿಚಾರ ಚರ್ಚೆ ನಡೆಸಲಾಗಿತ್ತು. ಆದರೆ ನಿರ್ಣಯ ಕೈಗೊಂಡಿರಲಿಲ್ಲ. 
  • 2016ರ ಸೆಪ್ಟಂಬರ್​ನಲ್ಲಿ ಸದನದಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲವೆಂಬ ನಿರ್ಣಯ ಕೈಗೊಂಡರೂ ಸುಪ್ರೀಂಕೋರ್ಟ್ ಅದನ್ನು ಒಪ್ಪಲಿಲ್ಲ.