ನ್ಯೂಸ್

ಕಗ್ಗದ ಬೆಳಕು: ಅರಿವಿನ ಬೆಳಕಿನಲ್ಲಿ ಜೀವನಯಾನ

ಒಂದಿಹುದುಪಾಯವೋರೊರ್ವರೆಗಣ್ಣುಗಳು |

ಮೊಂದೊಂದು ಸತ್ಯಾಂಶಗಳ ಪಿಡಿದು ||

ಒಂದುಗೂಡಿದೊಡವರ್ಗಳರಿವನೆಲ್ಲವನಾಗ |

ಮುಂದು ಸಾಗುವೆವಿನಿತು - ಮಂಕುತಿಮ್ಮ ||

‘ಒಂದು ಉಪಾಯವಿದೆ. ಒಬ್ಬೊಬ್ಬರ ಅರೆಗಣ್ಣುಗಳು ಒಂದೊಂದು ಸತ್ಯಾಂಶಗಳನ್ನು ಹಿಡಿದು ಒಂದುಗೂಡಿದರೆ, ಅವರೊಳಗಿನ ಆ ಅರಿವಿನಿಂದಾಗಿ, ಒಂದಿಷ್ಟು ಮುಂದುವರಿಯಲು ಸಾಧ್ಯವಾಗುತ್ತದೆ’ ಎನ್ನುತ್ತದೆ ಈ ಕಗ್ಗ.

ಪ್ರತಿಯೊಂದು ಜೀವದ ಉದ್ದೇಶವೂ ಪರಿಪೂರ್ಣತೆಯನ್ನು ಪಡೆಯುವುದೇ ಆಗಿದೆ. ಪ್ರತಿ ಮಳೆ ಹನಿಗೂ ಅನಂತ ಸಾಗರವನ್ನು ಸೇರುವ ತವಕವಿರುವಂತೆಯೇ, ಜೀವಾತ್ಮಗಳೆಲ್ಲಕ್ಕೂ ಪರಮಾತ್ಮನಲ್ಲಿ ಲೀನವಾಗುವ ತುಡಿತವಿದೆ. ಅದಕ್ಕಾಗಿಯೇ ಜೀವವು ಇಹದ ಬದುಕಿಗೆ ಯಾತ್ರಿಕನಂತೆ ಬಂದುಹೋಗುತ್ತದೆ. ಹೀಗೆ ಬಂದುಹೋಗುವ ಪ್ರಕ್ರಿಯೆಯಲ್ಲಿ ಸಾರ್ಥಕತೆ ಪಡೆಯಲು ಸದಾ ಹಂಬಲಿಸುತ್ತ ಪ್ರಯತ್ನಿಸುತ್ತದೆ.

ಜೀವನದ ಸಾಫಲ್ಯವು ಸುಲಭಗ್ರಾಹ್ಯವಲ್ಲ. ಅದಕ್ಕಾಗಿ ಕೆಲವು ವಿಚಾರಗಳನ್ನು ಮನನ ಮಾಡಿಕೊಂಡು ಆಚರಿಸಬೇಕಾಗುತ್ತದೆ. ಮೊದಲನೆಯದಾಗಿ ಜೀವನಕ್ಕೊಂದು ಉತ್ತಮ ಉದ್ದೇಶವನ್ನು ಕಂಡುಕೊಳ್ಳಬೇಕು. ಬಾಳಿಗೊಂದು ಅರ್ಥವಿದೆ. ಅದು ಹಾಗೆ ಬಂದು, ಹೇಗೋ ಇದ್ದು, ಹೀಗೆ ಎದ್ದು ಹೋಗುವದಕ್ಕಷ್ಟೇ ಸೀಮಿತವಲ್ಲ. ಈ ತಿಳಿವು ಸ್ಪಷ್ಟವಾಗಿ ಮನವರಿಕೆಯಾಗಬೇಕು. ಒಂದು ಸಲ ಬದುಕಿನ ಗುರಿ ಗೊತ್ತಾದರೆ ಮನಸ್ಸು ಹದವಾಗುತ್ತದೆ. ಯಥಾರ್ಥದರಿವನ್ನು ಪಡೆಯಲು ಸಿದ್ಧವಾಗುತ್ತದೆ. ಆದರೆ ಅವ್ಯಕ್ತವಾಗಿರುವ ಜಗನ್ನಿಯಾಮಕ ಶಕ್ತಿಯನ್ನು ಸಂಪೂರ್ಣವಾಗಿ ಅರಿಯುವ ಶಕ್ತಿ-ಸಾಮರ್ಥ್ಯಗಳು ಯಾರೊಬ್ಬರಿಗೂ ಇಲ್ಲ. ನಿತ್ಯ ಸತ್ಯವನ್ನು ಕಾಣುವುದಕ್ಕೆ ಪ್ರಬಲ ಒಳಗಣ್ಣು ಬೇಕು. ಅಂತರಂಗದ ದೃಷ್ಟಿ ಕುಂದಿದೆ, ಅರೆಗಣ್ಣು ನಮ್ಮದು, ಅರೆ ತಿಳಿವು ಎಂದು ಕೊರಗುತ್ತ ಕುಳಿತಿರುವುದಲ್ಲ. ಅರೆಗಣ್ಣಿನ ಬೆಳಕಿನಲ್ಲಿ ಎಟುಕಿದಷ್ಟನ್ನು ಗ್ರಹಿಸುತ್ತ, ಏಳುಬೀಳುಗಳನ್ನು ಕಾಣುತ್ತ ಮುನ್ನಡೆದರಷ್ಟೇ ಬದುಕು ನಂದನವಾದೀತು.

ಯಾವುದೇ ಉನ್ನತ ಉದ್ದೇಶವುಳ್ಳ ಕಾರ್ಯವು ಯಶಸ್ವಿಯಾಗಬೇಕಿದ್ದರೆ ಅದರಲ್ಲಿ ಹಲವರ ಶ್ರಮವಿದೆ. ಒಬ್ಬನಿಂದಲೇ ಮಾಡಲು ಸಾಧ್ಯವಿಲ್ಲ. ಮನೆಯನ್ನೋ, ಮಹಲನ್ನೋ, ದೇಗುಲವನ್ನೋ ಕಟ್ಟುವಾಗ ಅವೆಷ್ಟೋ ಜನ ಒಂದುಗೂಡಿರುತ್ತಾರೆ. ಕಾರ್ಯವು ಪೂರ್ಣವಾದಾಗ ಧನ್ಯತೆಯನ್ನು ಅನುಭವಿಸುತ್ತಾರೆ. ದೇವರ ರಥವನ್ನು ರಥಬೀದಿಯಲ್ಲಿ ಸುಗಮವಾಗಿ ಎಳೆಯಲು ಹಲವು ಕೈಗಳ ಹಿಡಿತ, ತೋಳಿನ ಬಲ ಬೇಕಾಗುತ್ತದೆ, ಈ ಒಗ್ಗೂಡುವಿಕೆಯಿಂದ ಮಾತ್ರ ರಥವು ಮುಂದೆ ಚಲಿಸಲು ಸಾಧ್ಯ. ಹಾಗೆಯೇ ಪ್ರತಿಯೊಬ್ಬರೂ ತಮ್ಮದೇ ನೆಲೆಯಲ್ಲಿ ಕೈಗೆಟುಕಿದ ಸತ್ಯಾಂಶದ ಕಿರಣಗಳನ್ನು ಹಿಡಿದು ಮುನ್ನಡೆಯಬೇಕು. ತಮ್ಮ ಪ್ರಜ್ಞೆಗೆ ನಿಲುಕಿದ ಜ್ಞಾನದ ಪುಟ್ಟ ಅಂಶವನ್ನು ಇನ್ನೊಬ್ಬರ ಜತೆ ಹಂಚಿಕೊಳ್ಳಲು ಉದ್ಯುಕ್ತರಾಗಬೇಕು. ತಮಗರಿವಿಲ್ಲದುದನ್ನು ತಿಳಿಯಲು ಕಾತರಿಸಬೇಕು. ಹೀಗೆ ಪ್ರತಿಯೊಬ್ಬರ ಅರಿವಿನ ಬೆಳಕನ್ನು ಒಗ್ಗೂಡಿಸಿದರೆ ನಿತ್ಯಸತ್ಯದ ದರ್ಶನ ಸುಲಭಸಾಧ್ಯ. ಸಂಘಟಿತರಾಗುವುದರಿಂದ ದಿವ್ಯತೆ ಪ್ರಕಾಶಗೊಳ್ಳುತ್ತದೆ.

ಸಮಾಜದಲ್ಲಿ ಒಂದು ತೆರನಾದ ಧೋರಣೆ ಇದೆ. ತಾವು ತಿಳಿದದ್ದು ಮಾತ್ರವೇ ಸತ್ಯ, ಇತರರಿಗೆ ಅರ್ಥವಾದದ್ದು ಮಿಥ್ಯೆ. ಅದನ್ನು ನಿರಾಕರಿಸುವುದರ ಜತೆಗೆ ಆ ಅರಿವಿನ ಧ್ವನಿಯನ್ನು ನಿಗ್ರಹಿಸುವುದೇ ಬದುಕಿನ ನೀತಿ ಎಂದು ಪರಿಗಣಿಸಿರುತ್ತಾರೆ. ನಿಜವಾದ ಅರಿವು ಇರುವಲ್ಲಿ ಅಹಂಕಾರವಿರುವುದಿಲ್ಲ. ಎಲ್ಲ ವಿಚಾರಧಾರೆಗಳನ್ನು ಗೌರವಿಸುವ, ಒಳಿತನ್ನು ಸ್ವೀಕರಿಸುವ ವಿಶಾಲ ಮನಸ್ಸು ಇರುತ್ತದೆ. ನಿರ್ಧಾರಗಳಲ್ಲಿ ಸ್ಪಷ್ಟತೆ ಇರುತ್ತದೆ.

ಜೀವನವು ಸುಖೋಪಭೋಗಗಳನ್ನು ಅನುಭವಿಸುತ್ತ, ಮನರಂಜನೆಯಲ್ಲಿ ಮುಳುಗೇಳುತ್ತ ಕಳೆದುಹೋಗುವುದಿಲ್ಲ. ಜೀವನದ ಯಥಾರ್ಥವು ಹೊಳೆದಾಗ ಉದ್ಧಾರದ ದಾರಿ ತೆರೆದುಕೊಳ್ಳುತ್ತದೆ. ಇರುಳಲ್ಲಿ ನಡೆಯುವವರೆಲ್ಲ ಪುಟ್ಟ ಕಂದೀಲನ್ನು ಹಿಡಿದುಕೊಂಡಿದ್ದರೆ ಕತ್ತಲೂ ಬೆಳಕಾಗುವುದಿಲ್ಲವೇ? ಅಂತೆಯೇ ಪ್ರತಿಯೊಬ್ಬರೂ ಜ್ಞಾನದ ಪುಟ್ಟ ಪ್ರಣತಿಯಾದರೆ ಲೋಕಕ್ಕೆ ಕವಿದ ಅಜ್ಞಾನದ ಕತ್ತಲು ಮರೆಯಾಗುತ್ತದೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: kaviadoor@gmail.com)