‘ರಾಜಾ ಕಾಲಸ್ಯ ಕರ್ಣಂ’- ಮಹಾಭಾರತದ ಶಾಂತಿಪರ್ವದಲ್ಲಿ ಭೀಷ್ಮ ಪಿತಾಮಹ ಯುಧಿಷ್ಠಿರನಿಗೆ ಹೇಳಿದ ಈ ಕಾಲಾತೀತವಾದ ವಿವೇಕದ ನುಡಿ ಎಲ್ಲರಿಗೂ ಅರ್ಥವಾಗದ ನಿಗೂಢವೆಂಬಂತೆ ಕಾಣಬಹುದು. ಆದರೆ, ಅದರಲ್ಲಿ ಎಲ್ಲ ಭಾರತೀಯರಿಗೆ ಒಂದು ಸಂದೇಶವಿದೆ. ರಾಜನು ಸಮಯ ಸಂದರ್ಭಗಳ ಗುಲಾಮನಲ್ಲ. ಬದಲಿಗೆ ತನ್ನ ಕೆಲಸಗಳ ಮೂಲಕ ಅಂಥ ಸಂದರ್ಭಗಳನ್ನು ಸೃಷ್ಟಿಸಬಲ್ಲವ ಎಂಬುದು ಅದರ ಅರ್ಥ. ಹೌದು. ಭಾರತದ ಸಮಕಾಲೀನ ರಾಜಕೀಯ ಪರಿಸ್ಥಿತಿಗಳು ಹಾಗೂ ಈಗಿರುವ ಸನ್ನಿವೇಶಗಳು ಆಳುವವನಿಂದಲೇ ನಿರ್ಧಾರವಾಗುತ್ತಿವೆ. ಇದೀಗ ಭಾರತ ಜಗತ್ತಿನ ‘ದೀಪಧಾರಿ’ಯಾಗಿ ಹೊರಹೊಮ್ಮಿದೆ. ಪ್ರಧಾನಿ ನರೇಂದ್ರ ಮೋದಿ ಕೇವಲ ಆರು ವರ್ಷ ಅವಧಿಯಲ್ಲಿ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ‘ಏಕ ಭಾರತ-ಶ್ರೇಷ್ಠ ಭಾರತ’ದ ಸಮರ್ಥ ಶಿಲ್ಪಿಯಾಗಿದ್ದಾರೆ.
ಸಬ್ಕಾ ಸಾಥ್ ಸಬ್ಕಾ ವಿಶ್ವಾಸ್: ಪ್ರಧಾನಿ ತಮ್ಮ ಅಮೋಘ ಕೆಲಸಗಳ ಮೂಲಕ ಗ್ರಾಮಗಳು, ಬಡವರು, ಯುವಜನರು, ರೈತರು ಮತ್ತು ಮಹಿಳೆಯರನ್ನು ಒಂದೇ ಘಟಕವಾಗಿ ಒಗ್ಗೂಡಿಸುವಲ್ಲಿ ಸಫಲರಾಗಿ ‘ಸಬ್ಕಾ ಸಾಥ್-ಸಬ್ಕಾ ವಿಶ್ವಾಸ್’ ಖಾತರಿಪಡಿಸಿದ್ದಾರೆ. ಬೇಟಿ ಬಚಾವೋ-ಬೇಟಿ ಪಢಾವೋ ಆಂದೋಲನವೇ ಇರಲಿ, ಉಜ್ವಲ ಯೋಜನೆಯೇ ಇರಲಿ, ಸಮಾಜದ ಕಟ್ಟಕಡೆಯ ಮನುಷ್ಯರಿಗೆ ಕಲ್ಯಾಣ ಯೋಜನೆಗಳ ಫಲವನ್ನು ತಲುಪಿಸುವುದೇ ಅವೆಲ್ಲದರ ಉದ್ದೇಶ. ಕಳೆದ ಆರು ವರ್ಷಗಳಲ್ಲಿ ಹಲವಾರು ಜನಕಲ್ಯಾಣ ಯೋಜನೆಗಳು ಜಾರಿಯಾಗಿವೆ. ಸಾಮಾಜಿಕ-ಆರ್ಥಿಕ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ಕಲ್ಯಾಣದ ಹೊಸ ಯುಗವೇ ಆರಂಭವಾಗಿದೆ.
ಸಮಸ್ಯೆ ಬಲ್ಲ ಪ್ರಧಾನಿ: ಈ ದೇಶದ ಜನರ ಮೂಲಭೂತ ಸಮಸ್ಯೆಗಳೇನು ಎಂಬುದನ್ನು ನಮ್ಮ ಪ್ರಧಾನಿ ಅರ್ಥ ಮಾಡಿಕೊಂಡಿದ್ದಾರೆ. ಅವುಗಳ ನಿವಾರಣೆಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅವುಗಳಲ್ಲೊಂದು. ಬಡ ಜನರಿಗೆ ಸಬ್ಸಿಡಿ ದರದಲ್ಲಿ ಮನೆಗಳನ್ನು ಒದಗಿಸುವುದು ಇದರ ಉದ್ದೇಶ. ಈ ಯೋಜನೆಯಡಿ ದೇಶದಾದ್ಯಂತ 3 ಕೋಟಿ ಮನೆಗಳನ್ನು ನಿರ್ವಿುಸಲಾಗಿದೆ. 2014ರ ನಂತರ ಆರಂಭಿಸಲಾದ ‘ಹರ್ ಘರ್ ಬಿಜ್ಲಿ’ ಯೋಜನೆ ದೇಶದಾದ್ಯಂತ 4 ಕೋಟಿ ಕುಟುಂಬಗಳ ಮನೆಯೊಳಗಿನ ಕತ್ತಲನ್ನು ಹೋಗಲಾಡಿಸಿದೆ. ಪಿಎಂ ಉಜ್ವಲಾ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ 8 ಕೋಟಿ ಅಡುಗೆಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ. ಪ್ರಧಾನಿಯಾದವರಲ್ಲಿ ಮಹಿಳೆಯರ ಕುರಿತು ಈ ರೀತಿ ಆಲೋಚಿಸಿದ್ದು ಬಹುಶಃ ಇವರೇ ಮೊದಲಿಗರು. ಈ ಮೂಲಕ ಇಂಗಾಲದಿಂದ (ಹೊಗೆ) ಉಂಟಾಗುವ ಹಲವು ರೋಗರುಜಿನಗಳಿಂದ ಮಹಿಳೆಯರನ್ನು ರಕ್ಷಿಸಿದ್ದೇ ಅಲ್ಲದೆ ಅವರಲ್ಲಿ ಸ್ವಾಭಿಮಾನ ಮೂಡುವಂತೆ ಮಾಡಿದ್ದಾರೆ. ಇದನ್ನೂ ಓದಿ: ‘ಮೊಘಲ್ ಮ್ಯೂಸಿಯಂ’ ಹೆಸರನ್ನು ‘ಛತ್ರಪತಿ ಶಿವಾಜಿ ಮ್ಯೂಸಿಯಂ’ ಎಂದು ಬದಲಿಸಿದ ಯೋಗಿ ಆದಿತ್ಯನಾಥ್
12 ಕೋಟಿ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆದಿದ್ದಾರೆ. 23 ಕೋಟಿಗೂ ಅಧಿಕ ಜನರು ಮುದ್ರಾ ಸಾಲ ಯೋಜನೆಗೆ ಒಳಪಟ್ಟಿದ್ದಾರೆ. 50 ಕೋಟಿ ಜನರು, ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸುವ ಆಯುಷ್ಮಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇವುಗಳೊಂದಿಗೆ ‘ಹರ್ ಘರ್ ನಳ್’ (ಪ್ರತಿ ಮನೆಗೂ ನಲ್ಲಿ ನೀರು), ಸೌಭಾಗ್ಯ ಯೋಜನಾ, ‘ಒಂದು-ದೇಶ, ಒಂದು ಕಾರ್ಡ್’ ಮೊದಲಾದವು ಬಡವರು ಮತ್ತು ಗ್ರಾಮೀಣ ಭಾರತದ ಜನರ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿವೆ.
ಪಿಎಂ ಬೆಳೆ ಯೋಜನೆ, ಪಿಎಂ ಕೃಷಿ ನೀರಾವರಿ ಯೋಜನೆ, ಕನಿಷ್ಠ ಬೆಂಬಲ ಬೆಲೆ, ಕಿಸಾನ್ ಸಮ್ಮಾನ್ ನಿಧಿ ಇವೇ ಮೊದಲಾದವು ರೈತ ಸಮುದಾಯದ ಸಂಕಟಗಳಿಗೆ ಪರಿಹಾರವೊದಗಿಸುವ ಯೋಜನೆಗಳಾಗಿವೆ. ದೀರ್ಘ ಕಾಲದಿಂದ ಅವುಗಳನ್ನು ಅಲಕ್ಷಿಸಲಾಗಿತ್ತು.
ಯುವಜನತೆಗೆ ಸ್ಪೂರ್ತಿ: ಯುವಜನತೆ ಉತ್ಸಾಹದ ಬುಗ್ಗೆಯಾಗಿ ಕಾರ್ಯ ನಿರ್ವಹಿಸಲೂ ಪ್ರಧಾನಿ ಮೋದಿ ಕ್ರಮಗಳನ್ನು ಕೈಗೊಂಡಿದ್ದಾರೆ. ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಮುದ್ರಾ ಯೋಜನೆಗಳು ಯುವಜನತೆಯ ಸ್ವಾವಲಂಬನೆಗೆ ನೆರವಾಗುವಂಥವುಗಳಾಗಿವೆ. ಅದು ದೇಶದ ಆರ್ಥಿಕತೆಗೂ ಉತ್ತೇಜನ ನೀಡಿದೆ. ಇದನ್ನೂ ಓದಿ: ಗೋಹತ್ಯೆ ನಿಷೇಧಕ್ಕೆ ಪ್ರಬಲ ಕಾನೂನು ಬೇಗ ಜಾರಿಯಾಗಲಿ: ಸಿಎಂಗೆ ಪೇಜಾವರ ಶ್ರೀ ಪತ್ರ
ದೇಶದ ಪೌರಾಣಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳನ್ನು ಇಡೀ ಜಗತ್ತಿನಲ್ಲಿ ಪಸರಿಸಲು ಮೋದಿಯವರ ಬಲಿಷ್ಠವಾದ ಭಾರತ-ಕೇಂದ್ರಿತ ಕುಶಲ ನಾಯಕತ್ವ ನೆರವಾಗಿದೆ. ನಮಾಮಿ ಗಂಗೆ, ವಿಶ್ವ ಯೋಗ ದಿನ, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ, ಕಾಶಿ ವಿಶ್ವನಾಥ ಮಂದಿರ, 2019ರ ಪ್ರಯಾಗ ಕುಂಭ ಮೊದಲಾದವು ಅದಕ್ಕೆ ದೃಷ್ಟಾಂತಗಳು. ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರಕ್ಕೆ ಬಂದರೆ, ಪ್ರಧಾನಿ ‘ಗೆಳೆಯ’ರೊಂದಿಗೆ ‘ಗೆಳೆತನ’ವನ್ನು ಹೊಸ ಎತ್ತರಕ್ಕೆ ಒಯ್ದಿದ್ದಾರೆ. ಶತ್ರುಗಳಿಗೆ ಪ್ರಬಲ ಸಂದೇಶ ರವಾನಿಸಿದ್ದಾರೆ.
ದೇಶದ ಸಾರ್ವಭೌಮತ್ವ ಮತ್ತು ಭದ್ರತೆಗೆ ಒತ್ತು ನೀಡುವ ಸಂದರ್ಭದಲ್ಲೇ ವಿದೇಶಾಂಗ ನೀತಿಯಲ್ಲಿ ಮಾತುಕತೆ, ಸಹಕಾರ, ಕರುಣೆ, ಚಟುವಟಿಕೆ ಮತ್ತು ಸಹಭಾಗಿತ್ವಕ್ಕೆ ಮೋದಿ ಮಹತ್ವ ನೀಡಿದ್ದಾರೆ. ಭಾರತವನ್ನು ವ್ಯೂಹಾತ್ಮಕ ಪಾಲುದಾರ ಎಂದು ಸೂಪರ್ ಪವರ್ ಅಮೆರಿಕ ಪರಿಗಣಿಸಿದೆ. ಬಾಬಾ ವಿಶ್ವನಾಥನ ಅತಿ ಪುರಾತನ ನಗರ ಮತ್ತು ಮತ್ತು ಪ್ರಧಾನಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರ ಉತ್ತರ ಪ್ರದೇಶದಲ್ಲಿರುವುದು ನಮ್ಮ ಸೌಭಾಗ್ಯ.
ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಪವಿತ್ರವಾದುದು ಎಂಬ ತತ್ತ್ವವನ್ನು ನರೇಂದ್ರ ಮೋದಿಯವರು ಜೀವನದಲ್ಲಿ ಅಕ್ಷರಶಃ ಅಳವಡಿಸಿಕೊಂಡು ಅನುಷ್ಠಾನ ಗೊಳಿಸುತ್ತಿದ್ದಾರೆ. ಪರಿಶುದ್ಧತೆ ಹಾಗೂ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದಾರೆ.
(ಲೇಖಕರು ಉತ್ತರ ಪ್ರದೇಶ ಮುಖ್ಯಮಂತ್ರಿ)