ನ್ಯೂಸ್

ಉತ್ತರ ಕರ್ನಾಟಕದ ಜೋಳಕ್ಕೆ ಕೇಂದ್ರದ ಪ್ರಾಧಾನ್ಯತೆ ನಿರೀಕ್ಷೆ; ರಾಜ್ಯ ಸರ್ಕಾರದ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ..

| ಮೃತ್ಯುಂಜಯ ಕಪಗಲ್ ಬೆಂಗಳೂರು

ಕಲ್ಯಾಣ ಕರ್ನಾಟಕ ಜಿಲ್ಲೆಗಳು ಒಳಗೊಂಡು ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾದ ಬಿಳಿಜೋಳಕ್ಕೆ ಪ್ರಾಧಾನ್ಯತೆ ಸಿಗುವ ಆಶಾಭಾವನೆ ಗರಿಗೆದರಿದೆ. ಬೇಡಿಕೆಗೆ ತಕ್ಕಷ್ಟು ಜೋಳ ಉತ್ಪಾದನೆಗೆ ಪ್ರೋತ್ಸಾಹಿಸಬೇಕೆಂಬ ರಾಜ್ಯದ ಬೇಡಿಕೆಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ, ಮುಂದಿನ ಹಂತದ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟಿದೆ.

ಸ್ಥಳೀಯ ಆಹಾರ ಪದ್ಧತಿಗೆ ಪೋಷಣೆ, ಅಪೌಷ್ಟಿಕತೆ ನಿವಾರಣೆ ಜತೆಗೆ ಜೋಳ ಬೆಳೆಯುವ ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಪ್ರಸ್ತಾವನೆ ಸಲ್ಲಿಸಿತ್ತು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬಿಳಿ ಜೋಳವನ್ನು ಮುಂಗಾರು ಹಂಗಾಮಿಗೆ ಸೇರಿಸಿ, ಪ್ರತಿ ಕ್ವಿಂಟಾಲ್​ಗೆ 4,000 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎನ್ನುವುದು ಪ್ರಸ್ತಾವನೆಯ ತಿರುಳು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ರ್ಚಚಿಸಿ ಒಪ್ಪಿಗೆ ಪಡೆದು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ ಕತ್ತಿ ನೇತೃತ್ವದ ನಿಯೋಗ ದೆಹಲಿಗೆ ತೆರಳಿ ಮನವಿ ಸಲ್ಲಿಸಿತ್ತು.

ಆಯೋಗ ಅಧ್ಯಯನ: ನಿಯೋಗದ ಜತೆಗೆ ರಾಜ್ಯದವರೇ ಆದ ಕೇಂದ್ರ ಕೃಷಿ, ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಮಾತುಕತೆ ನಡೆಸಿ, ನೀಡಿದ ಸೂಚನೆಯಂತೆ ಕೇಂದ್ರ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ಅಧ್ಯಯನ ನಡೆಸಿದೆ. ಆಯೋಗ ಸಲ್ಲಿಸುವ ಶಿಫಾರಸು ಸಹಿತ ವರದಿಯನ್ನು ಆರ್ಥಿಕ ವ್ಯವಹಾರಗಳ ಕೇಂದ್ರ ಸಚಿವ ಸಂಪುಟ ಸಮಿತಿ ಹಾಗೂ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿ, ಅಧಿಕೃತ ಆದೇಶ ಹೊರಡಿಸುತ್ತದೆ. ಹೀಗಾಗಿ ಆಯೋಗದ ಅಧ್ಯಯನ ಪ್ರಮುಖ ಘಟ್ಟವೆಂದು ಮೂಲಗಳು ತಿಳಿಸಿವೆ.

ಪಡಿತರಕ್ಕೆ ಕೊರತೆ: ಪ್ರತಿ ಬಿಪಿಎಲ್ ಕಾರ್ಡ್​ಗೆ ತಲಾ ಎರಡು ಕೆ.ಜಿ. ಅಕ್ಕಿ, ಮೂರು ಕೆಜಿ ರಾಗಿ ಅಥವಾ ಜೋಳದ ವಿತರಣೆ ವ್ಯವಸ್ಥೆಯಾಗಿದ್ದರೂ ಬೇಡಿಕೆಯಷ್ಟು ಜೋಳ ಸಿಕ್ಕಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಐದು ಲಕ್ಷ ಕ್ವಿಂಟಾಲ್ ರಾಗಿ, 80,000 ಕ್ವಿಂಟಾಲ್ ಜೋಳ ಖರೀದಿ ಮಾಡಲಾಗಿತ್ತು. ರಾಗಿ ವಿತರಣೆ ಮುಂದುವರಿದಿದ್ದು, ಜೋಳ ಖಾಲಿಯಾಗಿದ್ದರಿಂದ ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ. ಮುಕ್ತ ಮಾರುಕಟ್ಟೆ ದರಕ್ಕೆ ಹೋಲಿಸಿದರೆ, ಕ್ವಿಂಟಾಲ್ ಹೈಬ್ರಿಡ್ ಜೋಳಕ್ಕೆ 2,738 ರೂ., ಬಿಳಿಜೋಳಕ್ಕೆ 2,758 ರೂ. ನಿಗದಿತ ಬೆಂಬಲ ಬೆಲೆ ಕಡಿಮೆ ಎಂದು ರೈತರು ಹಿಂಜರಿದಿದ್ದು, ಉತ್ಪಾದನೆ ಪ್ರದೇಶ ಕುಸಿತವೂ ಕೊರತೆಗೆ ಕಾರಣ.

ಆಹಾರದಲ್ಲಿ ಹಾಸುಹೊಕ್ಕು: ಬೆಳಗಾವಿಯಿಂದ ಬೀದರ್​ವರೆಗೆ ಜೋಳ ಮುಖ್ಯ ಬೆಳೆಯಾಗಿದೆ. ಜತೆಗೆ ಮಧ್ಯ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಆಂಶಿಕವಾಗಿ ಬೆಳೆಯುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಹವಾಮಾನ ವೈಪರೀತ್ಯ, ಬೆಳೆ ಏರಿಳಿತದಿಂದ ಬಿತ್ತನೆ ಪ್ರದೇಶ ಇಳಿಮುಖದ ಹಾದಿ ಹಿಡಿದಿದ್ದು, ಕಬ್ಬು, ಹತ್ತಿ ಇನ್ನಿತರ ವಾಣಿಜ್ಯ ಬೆಳೆಗಳತ್ತ ರೈತರು ವಾಲಿರುವುದು ಮತ್ತೊಂದು ಕಾರಣ. ಜೋಳದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ನಾರು, ಪಿಷ್ಟ ಪೋಷಕಾಂಶಗಳ ಜತೆಗೆ ಬಿ ಜೀವಸತ್ವ ಪೂರೈಸುವ ರೈಬೋಪ್ಲೋವಿನ್ ಪಿನೋಲಿಕ್ ಆಸಿಡ್, ಟ್ಯಾನಿನ್ಸ್ ಮುಂತಾದ ಅಂಶಗಳಿವೆ. ಜೋಳ ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಬೇಕಾಗಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ.

ಏನೆಲ್ಲ ಲಾಭ ?: ಮುಂಗಾರು ಹಿಂಗಾಮಿನಲ್ಲಿ 80,000 ಹೆಕ್ಟೇರ್ ಪ್ರದೇಶದಲ್ಲಿ ಹೈಬ್ರಿಡ್ ಮತ್ತು ಬಿಳಿಜೋಳ ಬೆಳೆದರೆ, ಹಿಂಗಾರು ಹಂಗಾಮಿನಲ್ಲಿ 9 ಲಕ್ಷ ಹೆಕ್ಟೇರ್​ನಲ್ಲಿ ಬೆಳೆಯ ಲಾಗುತ್ತಿದೆ. ಕೇಂದ್ರ ಗ್ರೀನ್ ಸಿಗ್ನಲ್ ನೀಡಿದರೆ, ಹೆಚ್ಚಿನ ಪ್ರಮಾಣದಲ್ಲಿ ಪಡಿತರಕ್ಕೆ ಲಭ್ಯವಾಗಲಿದ್ದು, ರೈತರಿಗೂ ನೆರವಾಗಲಿದೆ ಎಂದು ಇಲಾಖೆ ಮೂಲಗಳು ವಿಶ್ಲೇಷಿಸಿವೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿಗೆ ಜೋಳ ಸೇರ್ಪಡೆ, ಬೆಲೆ ಏರಿಕೆ ಕುರಿತ ರಾಜ್ಯದ ಪ್ರಸ್ತಾವನೆಯು ಕೇಂದ್ರ ಕೃಷಿ ವೆಚ್ಚಗಳು ಮತ್ತು ಬೆಲೆಗಳು ಆಯೋಗದ ಮುಂದಿದ್ದು, ಅಧ್ಯಯನ ನಡೆಸಿದ ನಂತರ ವರದಿ ಸಲ್ಲಿಸಲಿದೆ.

| ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ