ಬುಧವಾರ ರಾಜ್ಯಪಾಲರಿಗೆ ದೂರು ನೀಡಿದ ಕಾಂಗ್ರೆಸ್ ನಿಯೋಗ  
ನ್ಯೂಸ್

ಈಶ್ವರಪ್ಪ ಅಚಲ, ಬಿಜೆಪಿ ಚಂಚಲ; ರಾಜೀನಾಮೆ ವಿಚಾರದಲ್ಲಿ ರಾಜಿ?: ಸಚಿವರ ವಿರುದ್ಧ ಎಫ್​ಐಆರ್

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂಬ ಕೆ.ಎಸ್.ಈಶ್ವರಪ್ಪ ಅವರ ಅಚಲ ನಿಲುವು ಆಡಳಿತಾರೂಢ ಬಿಜೆಪಿ ನಾಯಕರನ್ನು ಚಂಚಲ ಮನಸ್ಥಿತಿಗೆ ದೂಡಿದೆ. ಬುಧವಾರ ಈಶ್ವರಪ್ಪ ರಾಜೀನಾಮೆ ನೀಡಬಹುದೆಂಬ ವಾತಾವರಣ ಇತ್ತಾದರೂ ಪ್ರಬಲ ನಾಯಕರೊಬ್ಬರ ಸೂಚನೆ ಬಳಿಕ ಅವರ ‘ಬಾಡಿ ಲಾಂಗ್ವೇಜ್ ’ಪೂರ್ಣವಾಗಿ ಬದಲಾಯಿತು. ಪಕ್ಷದೊಳಗೆ ರಾಜೀನಾಮೆ ಅಭಿಪ್ರಾಯದ ಬೆನ್ನಲ್ಲೇ ರಾಜಿ ಕೂಗು ಸಹ ಪ್ರತಿಧ್ವನಿಸಿತು. ಈ ನಡುವೆ, ಪ್ರತಿಪಕ್ಷಗಳ ಹೋರಾಟದಿಂದ ರಾಜ್ಯದ ಜನರಿಗೆ ತಪು್ಪ ಸಂದೇಶ ರವಾನೆಯಾಗುವುದನ್ನು ತಡೆಯಲು ಘಟನೆ ನಡೆದ 24 ತಾಸುಗಳ ಬಳಿಕ ಕಮಲಪಡೆ ಮೈಕೊಡವಿಕೊಂಡು ಮೇಲೆದ್ದಿದೆ. ಅತ್ತ ಕಾಂಗ್ರೆಸ್ ಟೂಲ್ ಕಿಟ್ ಎಂಬ ಹಳೆಯ ಅಸ್ತ್ರವನ್ನು ಮತ್ತೆ ಕೈಗೆತ್ತಿಕೊಂಡಿದೆ.

ಬೀದಿ ಹೋರಾಟ: ಶೇ.40ರ ಕಮಿಷನ್ ಬೇಡಿಕೆ ಗುತ್ತಿಗೆದಾರನನ್ನು ಬಲಿಪಡೆದಿದೆ ಎಂದು ಆರೋಪಿಸಿ, ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದು ಪ್ರತಿಪಕ್ಷಗಳಾದ ಕಾಂಗ್ರೆಸ್, ಆಮ್​ದಿ್ಮಾರ್ಟಿ ಬುಧವಾರ ಬೀದಿಗೆ ಇಳಿದವು. ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದರೆ, ಸಿಎಂ ಗೃಹ ಕಚೇರಿ ಬಳಿ ಯುವ ಕಾಂಗ್ರೆಸ್ ಕಪು್ಪ ಬಾವುಟ ಪ್ರದರ್ಶಿಸಿತು. ಆಪ್ ಮುಖಂಡರು ಮುತ್ತಿಗೆ ಹಾಕುವ ಯತ್ನ ನಡೆಸಿದರು.

ಪುಟಿದೆದ್ದ ಕೈಪಡೆ: ಹಿಜಾಬ್, ಭಗವದ್ಗೀತೆ, ಆಜಾನ್ ವಿಚಾರದಲ್ಲಿ ಹಿನ್ನಡೆ ಅನುಭವಿಸಿ ಮಂಕಾಗಿದ್ದ ಕೈ ಪಾಳಯ ಇದೀಗ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ ಬಳಸಿಕೊಂಡು ಪುಟಿದೆದ್ದಿದೆ. ಬಿಜೆಪಿಯನ್ನು ಕಳಂಕಿತ ಸ್ಥಾನದಲ್ಲಿ ನಿಲ್ಲಿಸುವ ಕಾರ್ಯತಂತ್ರ ಹೆಣೆದಿದೆ. ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲ ಸಮಕ್ಷಮದಲ್ಲಿ ಕ್ಷಿಪ್ರ ಕಾರ್ಯಾಚರಣೆ ನೀಲಿನಕ್ಷೆ ಸಿದ್ಧಪಡಿಸಿದೆ.

ಇದರ ಭಾಗವಾಗಿ ಬೆಳಗಾವಿಗೆ ದಿಢೀರ್ ತೆರಳಿ ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಗುರುವಾರದಿಂದ ಐದು ದಿನಗಳ ಕಾಲ ಎಲ್ಲ ಜಿಲ್ಲೆಗಳಲ್ಲಿ ಚಳವಳಿಗೆ ತೀರ್ವನಿಸಿದ್ದು, ರಾಜ್ಯ ನಾಯಕರ ನೇತೃತ್ವದಲ್ಲಿ ರಚಿತ ತಂಡಗಳು ಅಖಾಡಕ್ಕೆ ಧುಮುಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹವಣಿಸಿವೆ.

ಟಾರ್ಗೆಟ್ ಅಜೆಂಡಾ: ಸಂಘಟನೆ ಬಲವರ್ಧನೆ, ಕಾರ್ಯಕರ್ತರಲ್ಲಿ ಹುರುಪು ತುಂಬಲೆಂದು ರಾಜ್ಯ ಪ್ರವಾಸ ಕೈಗೊಂಡ ವೇಳೆಯೇ ಧುತ್ತೆಂದು ಎದುರಾದ ಘಟನೆಯಿಂದ ಬಿಜೆಪಿ ನಾಯಕರು ವಿಚಲಿತರಾಗಿದ್ದರು. ನಂತರ ವಸ್ತುಸ್ಥಿತಿ ಮಾಹಿತಿ ತರಿಸಿ ವರಿಷ್ಠರಿಗೆ ರವಾನಿಸಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಿರಿತಲೆಗಳಿಗೆ ಮತ್ತೊಂದು ಸುತ್ತಿನ ವರದಿ ಸಲ್ಲಿಸಿ, ‘ಟಾರ್ಗೆಟ್ ಅಜೆಂಡಾ’ ಇರುವಂತಿದೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ‘ಕಮಿಷನ್’ ದೂರಿಗೆ ಸಚಿವರ ತಲೆದಂಡವಾದರೆ ಪ್ರತಿಪಕ್ಷಗಳ ಆರೋಪ ಒಪ್ಪಿದಂತಾಗಲಿದ್ದು, ರಾಜೀನಾಮೆ ಸರಣಿ ಮುಂದುವರಿಯಲಿದೆ ಎಂಬ ರಾಜ್ಯ ನಾಯಕರ ಆತಂಕವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿಎಂಗೆ ಡಿಜಿಪಿ ವರದಿ: ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಬುಧವಾರ ಸಂಜೆ ಭೇಟಿ ಮಾಡಿ ಅರ್ಧ ತಾಸಿಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ರಾಜಕೀಯವಾಗಿ ಮಹತ್ವ, ಸರ್ಕಾರಕ್ಕೆ ಸವಾಲಾಗಿರುವ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ, ತನಿಖೆ ಸಿದ್ಧತೆ, ಸಂಗ್ರಹಿಸಿದ ಮಾಹಿತಿ ಕುರಿತು ಈ ಚರ್ಚೆಯ ಹೆಚ್ಚಿನಂಶ ಕೇಂದ್ರೀಕೃತವಾಗಿತ್ತು ಎನ್ನಲಾಗಿದೆ.

ಗವರ್ನರ್​ಗೆ ಕೈ ದೂರು: ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ ಕೂಡಲೇ ಬಂಧಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕಾಂಗ್ರೆಸ್ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಬುಧವಾರ ರಾಜಭವನಕ್ಕೆ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಪ್ರಮುಖ ನಾಯಕರಿದ್ದರು.

ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ. ಈ ಬಗ್ಗೆ ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ. ಯಾರೋ ಒಬ್ಬರ ಆರೋಪಕ್ಕೆ ನಾನು ರಾಜೀನಾಮೆ ನೀಡಲ್ಲ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಬೊಮ್ಮಾಯಿ ಅವರನ್ನು ಗುರುವಾರ ಅಥವಾ ಶುಕ್ರವಾರ ಭೇಟಿ ಆಗುತ್ತೇನೆ. | ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ ಏ.15ರಿಂದ 5 ದಿನಗಳ ಕಾಲ ನಿತ್ಯ 5-6 ಜಿಲ್ಲೆಗಳಲ್ಲಿ ನಮ್ಮ ನಾಯಕರ ತಂಡಗಳು ಪ್ರವಾಸ ಮಾಡಿ ಹೋರಾಟ ಮಾಡಲಿವೆ. ಈಶ್ವರಪ್ಪ ಬಂಧನ ಆಗುವವರೆಗೂ ಹೋರಾಟ ಮುಂದುವರಿಸುತ್ತೇವೆ. ಬೊಮ್ಮಾಯಿ ಸರ್ಕಾರದ ಭ್ರಷ್ಟಾಚಾರವನ್ನು ತೊಳೆದು ಹಾಕುವವರೆಗೂ ನಾವು ವಿರಮಿಸುವುದಿಲ್ಲ. | ರಣದೀಪ್ ಸಿಂಗ್ ಸುರ್ಜೆವಾಲ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಹಿಂಡಲಗಾದಲ್ಲಿ ಗ್ರಾಮದೇವಿ ಜಾತ್ರೆ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಬೇಗ ಮುಗಿಸಲು ನನ್ನ ಲೆಟರ್ ಹೆಡ್ ಮೇಲೆ ಮನವಿ ಸಲ್ಲಿಸಲಾಗಿತ್ತು. ಆಗ ಕೆ.ಎಸ್. ಈಶ್ವರಪ್ಪ ಅವರು ಕಾಮಗಾರಿ ಶುರು ಮಾಡಲು ಹೇಳಿದ್ದರು. ನಾನು ಹಾಗೂ ಸಂತೋಷ್ ಸೇರಿಯೇ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದೆವು. ಸರ್ಕಾರ ಸಂತೋಷ್ ಕುಟುಂಬಕ್ಕೆ ಸಹಾಯಹಸ್ತ ಚಾಚಬೇಕು. | ನಾಗೇಶ ಮನ್ನೋಲ್ಕರ್ ಹಿಂಡಲಗಾ ಗ್ರಾಪಂ ಅಧ್ಯಕ್ಷ

ಸಾಧ್ಯಾಸಾಧ್ಯತೆ

  • ಬಿಜೆಪಿ ತನಿಖೆಯ ಜಾಡು ಹಿಡಿದು, ಅಗತ್ಯ ದಾಖಲೆ ಸಂಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧವೇ ಪ್ರಯೋಗಿಸಬಹುದು
  • ಶವದ ಮರಣೋತ್ತರ ಪರೀಕ್ಷೆ ರೀತಿ ಅಂತ್ಯಸಂಸ್ಕಾರಕ್ಕೂ ಕುಟುಂಬ ಸದಸ್ಯರು ಒಪ್ಪಿದರೆ ಸಂಕಷ್ಟಕ್ಕೆ ತಾತ್ಕಾಲಿಕ ಉಪಶಮನ
  • ಒತ್ತಡಗಳಿಗೆ ಮಣಿಯದೆ ವಿವಾದ ತಣ್ಣಗಾಗುವ ತನಕ ಕಾದು ನೋಡುವ ತಂತ್ರಗಾರಿಕೆಗೆ ಮೊರೆ
  • ಸಂಭಾವ್ಯ ಸಚಿವ ಸಂಪುಟ ಪುನಾರಚನೆ ವೇಳೆ ಈಶ್ವರಪ್ಪ ಅವರನ್ನು ಕೈಬಿಟ್ಟು ಅಪವಾದದಿಂದ ಮುಕ್ತವಾಗುವುದು

ಈಶ್ವರಪ್ಪಗೆ ಪ್ರಭಾವಿ ಅಭಯ?

ಪಕ್ಷದ ರಾಜ್ಯಾಧ್ಯಕ್ಷರಿಗೆ ಈಶ್ವರಪ್ಪ ಪ್ರಕರಣದ ಪೂರ್ಣ ಮಾಹಿತಿ ನೀಡಿದ್ದರು. ನಂತರ ಪಕ್ಷಕ್ಕೆ ಮುಜುಗರ ತರಲಾರೆ, ಸಿಎಂ ಬಯಸಿದರೆ ರಾಜೀನಾಮೆ ನೀಡುವೆ ಎಂದಿದ್ದ ಈಶ್ವರಪ್ಪ, ಬಹುತೇಕ ಅದೇ ಮನಸ್ಥಿತಿಯಲ್ಲಿದ್ದರು. ಸಿಎಂ ಭೇಟಿ ಮಾಡಿ ಅಂತಿಮ ನಿರ್ಧಾರ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದ ಅವರು ಮೈಸೂರಿನಿಂದ ಶಿವಮೊಗ್ಗಕ್ಕೆ ತೆರಳಿದ ನಂತರ ರಾಗ ಬದಲಿಸಿದರು. ಮುಂದಿನ ನಡೆ ಕುರಿತು ವರಿಷ್ಠರ ಆಲೋಚನೆ ಜಾಡು ಹಿಡಿದ ಪ್ರಭಾವಿಯೊಬ್ಬರು ನೀಡಿದ ಅಭಯವೇ ಈಶ್ವರಪ್ಪ ಅವರಿಗೆ ಧೈರ್ಯ ತುಂಬಿದೆ. ಶಿವಮೊಗ್ಗದಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಾಗ ಅವರ ಧ್ವನಿಯಲ್ಲಿ ಆತ್ಮವಿಶ್ವಾಸ ಎದ್ದುಕಾಣಿಸಿತ್ತಲ್ಲದೆ, ಏನೇ ಬಂದರೂ ಎದುರಿಸುವೆ ಎಂಬ ತಾಕತ್ತು, ಅವರ ಆಂಗಿಕ ಹಾವಭಾವದಲ್ಲಿ ಬಿಂಬಿತವಾಯಿತು.

ಈ ಪ್ರಕರಣದಲ್ಲಿ ಸಿಕ್ಕಿದ್ದು ಡೆತ್​ನೋಟ್ ಅಲ್ಲ, ಷಡ್ಯಂತ್ರ ನಡೆದಿದೆ. ಸಮಗ್ರ ತನಿಖೆಯಾಗಲಿ ಎಂಬ ಹೇಳಿಕೆಯನ್ನು ಅವರು ಪುನರುಚ್ಚರಿಸಿದರು. ಎರಡು ದಿನಗಳ ನಂತರ ಮುಖ್ಯಮಂತ್ರಿಯನ್ನು ಭೇಟಿಯಾಗಿ ರ್ಚಚಿಸುವೆ ಎಂದು ಹೇಳುವ ಮೂಲಕ ಕೇಂದ್ರ ನಾಯಕರ ಮುಂದಿನ ಸೂಚನೆ ಕಾಯುತ್ತಿರುವೆ ಎಂಬ ಸುಳಿವು ನೀಡಿದ್ದಾರೆ. ಈಶ್ವರಪ್ಪ ಅವರನ್ನು ಬೆಂಗಳೂರಿಗೆ ಕರೆಯಿಸಿ ರ್ಚಚಿಸುವೆ ಎಂದು ಸಿಎಂ ಬೊಮ್ಮಾಯಿ ನೀಡಿದ್ದ ಹೇಳಿಕೆ ‘ತಲೆದಂಡ’ದ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ಕಾಂಗ್ರೆಸ್ ನೀಡಿದ ಮನವಿಯನ್ನು ಸ್ವೀಕರಿಸಿದ ರಾಜ್ಯಪಾಲರು ಪ್ರಕರಣದ ಕುರಿತು ವರದಿ ಕೇಳುವ ‘ಶಾಸ್ತ್ರ’ ಮುಗಿಸಿದ್ದು, ಸರ್ಕಾರದ ಮುಂದಿನ ನಡೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.