ನವದೆಹಲಿ: ಮಾರಕ ಕರೊನಾ ವೈರಸ್ ಹರಡುವುದನ್ನು ತಡೆಯಲು ಹೇರಿರುವ ಲಾಕ್ಡೌನ್ ನಿಯಮಗಳನ್ನು ಮತ್ತಷ್ಟು ಸಡಿಲಿಸಲಾಗುತ್ತಿದ್ದು ಕೇಂದ್ರ ಗೃಹ ಸಚಿವಾಲಯ ಅನ್ಲಾಕ್ 2.0 ಮಾರ್ಗಸೂಚಿಗಳನ್ನು ಸೋಮವಾರ ಬಿಡುಗಡೆ ಮಾಡಿದೆ.
ಕಂಟೇನ್ಮೆಂಟ್ ವಲಯದ ಹೊರಗೆ ಧಾರ್ವಿುಕ ಸ್ಥಳಗಳು ಮತ್ತು ಇತರ ಸಾರ್ವಜನಿಕ ಪ್ರಾರ್ಥನಾ ಸ್ಥಳಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ಗಳು, ಶಾಪಿಂಗ್ ಮಾಲ್ಗಳ ಚಟುವಟಿಕೆಗೆ ನೀಡಿದ ಅನುಮತಿಯನ್ನು ಜುಲೈ 1ರಿಂದ ಜಾರಿಗೆ ಬರುವ ಅನ್ಲಾಕ್ 2.0 ದಲ್ಲಿ ವಿಸ್ತರಿಸಲಾಗಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿಯಮಾವಳಿಗಳನ್ನು ದುರ್ಬಲಗೊಳಿಸದಂತೆ ಗೃಹ ಸಚಿವಾಲಯ ಕಾರ್ಯದರ್ಶಿ ಅಜಯ್ ಭಲ್ಲಾ ಎಚ್ಚರಿಸಿದ್ದಾರೆ.
- ಜುಲೈ 31ರ ವರೆಗೆ ಕಂಟೇನ್ಮೆಂಟ್ ವಲಯಗಳಲ್ಲಿ ಲಾಕ್ಡೌನ್ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತವೆ.
- ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಫೀಡ್ಬ್ಯಾಕ್ ಹಾಗೂ ಸಂಬಂಧಿತ ಕೇಂದ್ರ ಸಚಿವರು ಹಾಗೂ ಇಲಾಖೆಗಳ ಸಮಾಲೋಚನೆಯ ಮೇರೆಗೆ ಅನ್ಲಾಕ್ 2 ಮಾರ್ಗಸೂಚಿ ರೂಪಿಸಲಾಗಿದೆ.
- ಶಾಲಾ-ಕಾಲೇಜ್ಗಳು, ತರಬೇತಿ ಸಂಸ್ಥೆಗಳು, ಕೋಚಿಂಗ್ ಕೇಂದ್ರಗಳು ಜುಲೈ 31ರ ವರೆಗೆ ಮುಚ್ಚಿರುತ್ತವೆ. ಸರ್ಕಾರಿ ತರಬೇತಿ ಸಂಸ್ಥೆಗಳನ್ನು ಜುಲೈ 15ರಿಂದ ತೆರೆಯಬಹುದು.
- ರಾತ್ರಿ ಕರ್ಫ್ಯೂ ನಿರ್ಬಂಧಗಳೊಂದಿಗೆ ಮುಂದುವರಿಯುತ್ತದೆ.
- ಅಂಗಡಿಗಳಲ್ಲಿ ಗರಿಷ್ಠ ಐದು ಜನರೊಂದಿಗೆ ಚಟುವಟಿಕೆ ನಡೆಸಬಹುದಾಗಿದೆ. ಗ್ರಾಹಕರು ದೈಹಿಕ ಅಂತರ ಕಾಯ್ದುಕೊಳ್ಳಬೇಕು.
- ಈಗ ಮಿತ ಸಂಖ್ಯೆಯಲ್ಲಿ ಸಂಚರಿಸುತ್ತಿರುವ ದೇಶೀಯ ವಿಮಾನ ಹಾರಾಟ ಮತ್ತು ಪ್ರಯಾಣಿಕ ರೈಲುಗಳ ಸಂಚಾರ ಇನ್ನಷ್ಟು ವಿಸ್ತರಣೆ. ಅದರ ವಿವರಗಳನ್ನು ಮುಂದೆ ಪ್ರಕಟಿಸಲಾಗುವುದು.
- ಎಲ್ಲ ಪ್ಯಾಸೆಂಜರ್ ರೈಲು, ಅಂತಾರಾಷ್ಟ್ರೀಯ ವಿಮಾನ ಸೇವೆ, ಮೆಟ್ರೊ ರೈಲು, ಸಿನಿಮಾ ಮಂದಿರ, ಈಜುಕೊಳ, ಸಭಾಂಗಣ, ಜಿಮ್ ಅಮ್ಯೂಸ್ವೆುಂಟ್ ಪಾರ್ಕ್ಗಳಿಗೆ ಇರುವ ನಿರ್ಬಂಧ ಮುಂದಿನ ಸೂಚನೆವರೆಗೆ ಮುಂದುವರಿಯಲಿದೆ.