ಕೃಷಿಕ್ಷೇತ್ರ ಹಲವು ಗಂಭೀರ ಸಮಸ್ಯೆಗಳನ್ನು ಹೊಂದಿರುವುದು ಹೌದಾದರೂ, ಹೊಸ ಬೆಳವಣಿಗೆ ಮತ್ತು ತಂತ್ರಜ್ಞಾನದ ಆವಿಷ್ಕಾರಗಳಿಗೆ ತೆರೆದುಕೊಳ್ಳುತ್ತಿದೆ. ಮುಖ್ಯವಾಗಿ, ಯುವಸಮುದಾಯ ಕೃಷಿಯ ಪ್ರಾಮುಖ್ಯವನ್ನು, ಕೃಷಿಸಂಸ್ಕೃತಿ ರಕ್ಷಿಸುವ ಅನಿವಾರ್ಯತೆಯನ್ನು ಮನಗಾಣುತ್ತಿದ್ದು, ಈ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬಿದೆ. ಅನೇಕ ಸಮಸ್ಯೆಗಳ ನಡುವೆಯೂ ಸಕಾರಾತ್ಮಕ ಪರಿವರ್ತನೆಯೆಡೆ ಮುಖ ಮಾಡಿರುವುದರಿಂದ ನಾಳೆಗಳ ಕುರಿತಂತೆ ಹೊಸ ಆಶಾವಾದ ಮೂಡಿದೆ. ರೈತರ ಸ್ಥಿತಿ, ಮನೋಧರ್ಮವೂ ಬದಲಾಗುತ್ತಿರುವುದು, ಕೃಷಿಯ ವಿಸ್ತರಣೆಗೆ ಪೂರಕವಾಗಿ ಪರಿಣಮಿಸಿದೆ. ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ, ಬಹುವಿಧ ಬೆಳೆ ಪದ್ಧತಿ ಅಳವಡಿಸಿಕೊಳ್ಳುವ, ಸಾಂಪ್ರದಾಯಿಕ ಬೆಳೆಗಳ ಜತೆಗೆ ವಾಣಿಜ್ಯ ಬೆಳೆಗಳಿಗೂ ಆದ್ಯತೆ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ.
ಕೃಷಿಕ್ಷೇತ್ರದ ಸಮಸ್ಯೆಗಳಿಗೆ ರೈತರು ಎದೆಗುಂದದೆ, ಆತ್ಮಸ್ಥೈರ್ಯದಿಂದ ಮುಂದೆ ಸಾಗಿದರೆ ಪರಿಹಾರದ ದಾರಿಗಳು ಗೋಚರಿಸದೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಹಲವು ಮಾದರಿ ಕೃಷಿಕರ ಅಥವಾ ಸಾಧಕ ರೈತರ ನಡೆ ನಿಜಕ್ಕೂ ಪ್ರೇರಣೆ ನೀಡುವಂಥದ್ದು. ಹಿಂದೊಮ್ಮೆ ನಷ್ಟಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ, ಆದರೆ ಬಳಿಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಮಾದರಿ ರೈತ ಎಂಬ ಹಿರಿಮೆಗೆ ಪಾತ್ರವಾಗಿರುವ ಕೋಲಾರ ಜಿಲ್ಲೆಯ ದುರ್ಗಪ್ಪ ಅಂಗಡಿಯವರನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಗುರುವಾರ ತಮ್ಮ ಕಚೇರಿಗೆ ಕರೆಯಿಸಿಕೊಂಡು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಮತ್ತು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ನಡೆಸಲಾಗುತ್ತಿದೆ. ‘ಸಾಲವಾಗಿದೆ ಎಂದು ಕೊರಗುವುದನ್ನು ಬಿಟ್ಟು ಆದಾಯವನ್ನು ದ್ವಿಗುಣಗೊಳಿಸುವುದು ಹೇಗೆ ಎಂಬುದನ್ನು ದುರ್ಗಪ್ಪ ಮಾಡಿತೊರಿಸಿದ್ದಾರೆ’ ಎಂದು ಕೃಷಿ ಸಚಿವರು ಶ್ಲಾಘಿಸಿದ್ದಾರೆ. ರೈತರ ವಿಶ್ವಾಸ ಹೆಚ್ಚಿಸುವ ಪ್ರಯತ್ನಗಳು ಸರ್ಕಾರದಿಂದ ನಡೆಯುವುದು ಉತ್ತಮ ಬೆಳವಣಿಗೆ.
ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಸಮಗ್ರ ಕೃಷಿ ಪದ್ಧತಿ, ಅರಣ್ಯ ಕೃಷಿ ಹೀಗೆ ಹಲವು ವಿಧಾನಗಳ ಹೊಸ ಸಾಧ್ಯತೆಗಳತ್ತ ಹೊರಳಿ, ರೈತರು ಅವುಗಳನ್ನು ಅನುಷ್ಠಾನದ ರೂಪಕ್ಕೆ ತಂದರೆ ನಷ್ಟದ ಕೂಪದಿಂದ ಹೊರಬಂದು, ಕೃಷಿಯನ್ನು ಲಾಭದಾಯಕವಾಗಿಸಬಹುದು ಎಂಬುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಸಾಧಕ ರೈತರು ಇತರರಿಗೆ ಮಾರ್ಗದರ್ಶನ ನೀಡಿದರೆ ಹೊಸ ಉತ್ಸಾಹದ, ಸಾಧನೆಯ ತುಡಿತದ ಯುವರೈತರ ಪಡೆಯೇ ನಿರ್ವಣವಾಗಬಹುದು. ಸಣ್ಣ ಜಮೀನಿನಲ್ಲೂ ಉತ್ತಮ ಇಳುವರಿ ಪಡೆಯುತ್ತಿರುವ, ಒಣಭೂಮಿಯಲ್ಲೂ ಬಂಪರ್ ಬೆಳೆ ತೆಗೆಯುತ್ತಿರುವ ರೈತಸಾಧಕರು ಸಮಾಜಕ್ಕೆ ಸ್ಪೂರ್ತಿಯಾಗಬೇಕಿದೆ. ಕೃಷಿಉತ್ಪನ್ನಗಳಿಗೆ ನ್ಯಾಯಯುತ ಬೆಲೆ, ಕೃಷಿ ಪರಿಕರಗಳ ಸೂಕ್ತ ಲಭ್ಯತೆಯಂಥ ಕೆಲ ಸವಾಲುಗಳನ್ನು ಪರಿಹರಿಸಿದರೆ, ಈ ಕ್ಷೇತ್ರ ಇನ್ನಷ್ಟು ಶಕ್ತಿಶಾಲಿಯಾಗುವುದರಲ್ಲಿ ಸಂದೇಹವಿಲ್ಲ. ಪ್ರಭುತ್ವ ಮತ್ತು ಜನರು ಕೈಜೋಡಿಸಿದರೆ ಕೃಷಿ ಸಂಸ್ಕೃತಿಯನ್ನು ಮತ್ತೆ ಮೆರೆಸಬಹುದು.