ನವದೆಹಲಿ: ಕೋವಿಡ್-19 ರೋಗಿಗಳ ಮೇಲೆ ಲಸಿಕೆಯನ್ನು ಪ್ರಯೋಗಿಸಲು ಅವಕಾಶ ನೀಡುವಂತೆ ಕೋರಿ ದೇಶದ ಮತ್ತೊಂದು ಪ್ರತಿಷ್ಠಿತ ಔಷಧ ತಯಾರಿಕಾ ಕಂಪನಿ ಅನುಮತಿ ಕೋರಿದೆ.
ಭಾರತೀಯ ಔಷಧ ಮಹಾನಿಯಂತ್ರಕರಿಗೆ ಪತ್ರವೊಂದನ್ನು ಬರೆಯಲಾಗಿದ್ದು, ಕರೊನಾ ಸೋಂಕಿತರ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲು ಪರವಾನಗಿ ನೀಡಬೇಕೆಂದು ಗುಜರಾತ್ನ ಅಹಮದಾಬಾದ್ನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಕ್ಯಾಡಿಲಾ ಹೆಲ್ತ್ಕೇರ್ ಮನವಿ ಮಾಡಿದೆ.
ಈ ಕಂಪನಿ ಹೆಪಟೈಟಿಸ್- ಬಿ ಹಾಗೂ ಹೆಪಟೈಟಿಸ್- ಸಿ ಕಾಯಿಲೆಗೆಂದೇ ಪೆಗಿಲೆಟೆಡ್ ಇಂಟರ್ಫೆರೊನ್ ಅಲ್ಫಾ2ಬಿ (ಪೆಗಿಹೆಪ್)ಎಂಬ ಔಷಧವನ್ನು ತಯಾರಿಸಿದೆ. ಇದೇ ಔಷಧವನ್ನು ಚೀನಾ ಹಾಗೂ ಕ್ಯೂಬಾದಲ್ಲಿ ಕೋವಿಡ್-19 ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ. ಇದಕ್ಕಿಂತಲೂ ಮುಖ್ಯವಾದ ಅಂಶವೆಂದರೆ, ಕರೊನಾ ಸೋಂಕಿತರಿಗೆ ನೀಡಲಾಗುವ ಚಿಕಿತ್ಸಾ ಕೈಪಿಡಿಯಲ್ಲಿ ಈ ಔಷಧವನ್ನು ಶಿಫಾರಸು ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇದಲ್ಲದೇ, ಕರೊನಾ ರೋಗಿಗಳು ಗುಣಮುಖರಾಗಲು ಈ ಔಷಧದ ಪಾತ್ರ ಕುರಿತಂತೆ ಪರಿಶೀಲನೆ ನಡೆಸಬೇಕೆಂದು ಝೈಡಸ್ ಕ್ಯಾಡಿಲಾ ಕಂಪನಿಯು ಕೇಂದ್ರ ಜೈವಿಕ ತಂತ್ರಜ್ಞನ ಇಲಾಖೆಯನ್ನು ಕೋರಿಕೊಂಡಿದೆ. ಈ ಬಗ್ಗೆ ಮಾತುಕತೆಗಳು ನಡೆದಿದ್ದು, ತಜ್ಞರ ಸಮಿತಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋವಿಡ್-19 ರೋಗಿಗಳ ಕರೊನಾ ವೈರಾಣು ವ್ಯಾಪಿಸುವುದನ್ನು ತಡೆಗಟ್ಟುವಲ್ಲಿ ಈ ಔಷಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ವೈರಸ್ಗಳ ಪ್ರಮಾಣದಲ್ಲಿ 10 ಸಾವಿರಪಟ್ಟು ಇಳಿಮುಖವಾಗಿದೆ ಎಂಬುದು ಟೆಕ್ಸಾಸ್ ವಿವಿಯ ವೈದ್ಯಕೀಯ ವಿಭಾಗ ನಡೆಸಿದ ಅಧ್ಯಯನದಲ್ಲಿ ಕಂಡು ಬಂದಿದೆ.
ಇದಲ್ಲದೇ, ಚೀನಾದ ವುಹಾನ್ನಲ್ಲಿ ಈ ಔಷಧ ಪ್ರಯೋಗಿಸಿದ 77 ರೋಗಿಗಳನ್ನು ಪರೀಕ್ಷೆ ಮಾಡಿದ ಚೀನಾ, ಆಸ್ಟ್ರೇಲಿಯಾ, ಕೆನಡಾ ವಿವಿಗಳ ತಂಡವೂ ಕೂಡ ವೈರಸ್ ಹಬ್ಬುವ ಅವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ ಎಂದು ವರದಿ ನೀಡಿವೆ. ಕೋವಿಡ್ನ ಆರಂಭಿಕ ಹಂತದಲ್ಲೇ ಈ ಔಷಧ ನೀಡಿದರೆ, ರೋಗಿಗೆ ಭಾರಿ ಪ್ರಯೋಜನವಾಗಲಿದೆ. ವೈರಸ್ ಪ್ರಮಾಣವನ್ನು ಕಡಿಮೆಗೊಳಿಸಿ, ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದೇ ಕಂಪನಿ, ಸದ್ಯ ಕೋವಿಡ್ ರೋಗಿಗಳಿಗೆ ಬಳಸಲಾಗುತ್ತಿರುವ ಹೈಡ್ರೊಕ್ಸಿಕ್ಲೊರೊಕ್ವಿನ್ (ಎಚ್ಸಿಕ್ಯೂ) ಮಾತ್ರೆಗಳನ್ನು ಕೂಡ ತಯಾರಿಸುತ್ತಿದೆ.