ಬೆಂಗಳೂರು: ಕರೊನಾ ವಿರುದ್ಧದ ಹೋರಾಟದ ಅಂಗವಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ಡೌನ್ ಕಟ್ಟಳೆಗಳನ್ನು ವಲಯವಾರು ಆಧಾರದ ಮೇಲೆ ಭಾಗಶಃ ಸಡಿಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ವಿಡಿಯೋ ಕಾನ್ಪರೆನ್ಸ್ ಬಳಿಕ ರಾಜ್ಯ ಸರ್ಕಾರ ಸಭೆ ನಡೆಸಿ ಮೇ 3ರ ಮೊದಲೇ ವಲಯವಾರು ಕೆಲವು ವಿನಾಯಿತಿ ಪ್ರಕಟಿಸಲು ತೀರ್ಮಾನಿಸಿತು.
ಲಾಕ್ಡೌನ್ ಸಡಿಲಿಕೆ ಸನ್ನಿಹಿತವಾಗು ವುದೆಂದು ಜನತೆ ಕಾತರದಿಂದಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಆಯಾ ರಾಜ್ಯಗಳಿಗೇ ನೀಡಿದ್ದಾರೆ. ಪ್ರಧಾನಿಯವರ ಸಂದೇಶದ ಬಳಿಕ ಸಿಎಂ ಬಿ.ಎಸ್. ಯಡಿಯೂರಪ್ಪ ಲಾಕ್ಡೌನ್ ಸಡಿಲಿಕೆ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳ ಜತೆ ವಿಚಾರ ವಿನಿಮಯ ನಡೆಸಿದರು. ಸಂಜೆ ಜಿಲ್ಲಾಡಳಿತಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ಸೂಚನೆ ನೀಡಿದರು. ಪ್ರಸ್ತುತ ರಾಜ್ಯದಲ್ಲಿ ಒಂದೂ ಸೋಂಕು ಕಾಣಿಸಿಕೊಳ್ಳದ ಜಿಲ್ಲೆಗಳನ್ನು ಹಸಿರು ವಲಯ, ಕರೊನಾ ಪ್ರಕರಣ ಕಾಣಿಸಿಕೊಂಡರೂ ಈಗ ನಿಯಂತ್ರಣದಲ್ಲಿರುವ ಜಿಲ್ಲೆಗಳನ್ನು ಕಿತ್ತಳೆ ವಲಯ, ಹೆಚ್ಚು ಪ್ರಕರಣ ಕ್ರಿಯಾಶೀಲವಾಗಿರುವ ಜಿಲ್ಲೆಗಳನ್ನು ಕೆಂಪು ವಲಯ ಎಂದು ಪ್ರತ್ಯೇಕಿಸ ಲಾಗಿದ್ದು, ಮೂರೂ ವಲಯಕ್ಕೆ ಬೇರೆ ಬೇರೆ ವಿನಾಯಿತಿ ನೀಡುವ ನಿರ್ಧಾರ ಮಾಡಿರುವುದನ್ನು ಸಿಎಂ ಪ್ರಕಟಿಸಿದರು.
ಏನೇನು ಕ್ರಮ?: ಮೂರೂ ವಲಯಗಳಿಗೆ ಅನ್ವಯವಾಗುವಂತೆ ಸಾರ್ವಜನಿಕ ಸಾರಿಗೆ ಸದ್ಯಕ್ಕಿಲ್ಲ, ಸಿನಿಮಾ, ಮಾಲ್ಗಳು ಇರುವುದಿಲ್ಲ. ಮೇ 3 ವರೆಗೂ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವ ಕಡ್ಡಾಯ ನಿಯಮವನ್ನು ಮುಂದುವರಿಸಲಾಗುತ್ತದೆ. ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳು ತಕ್ಷಣವೇ ಆರಂಭವಾಗುವ ಕಾರಣ ರಾಜ್ಯಾದ್ಯಂತ ಕ್ರಶರ್ಗೆ ಅವಕಾಶ ಕಲ್ಪಿಸಲಾಗುತ್ತದೆ. ಹಾಗೆಯೇ ಆರ್ಥಿಕ ಚಟುವಟಿಕೆ ಪುನರಾರಂಭವಾಗದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟವಾಗಬಹುದು ಎಂದು ಮುಖ್ಯಮಂತ್ರಿಯವರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಗಳು ವಿವೇಚನೆ ಬಳಸಿ, ಕರೊನಾ ಸೋಂಕು ವ್ಯಾಪಿಸದಂತೆ ಮುಂಜಾಗ್ರತೆ ವಹಿಸಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಹಸಿರು ವಲಯಕ್ಕೇನು?
ಅಂಗಡಿ- ಮುಂಗಟ್ಟು, ಕೈಗಾರಿಕೆ, ಕಟ್ಟಡ ಕಾಮಗಾರಿ ಆರಂಭಿಸಲು ಒಪ್ಪಿಗೆ. ಸಾರ್ವಜನಿಕ ಸಾರಿಗೆ ತಕ್ಷಣಕ್ಕೆ ಬೇಡ, ಸಿನಿಮಾ ಥಿಯೇಟರ್, ಮಾಲ್ಗೆ ಅವಕಾಶವಿಲ್ಲ. ಕಿತ್ತಳೆ ವಲಯಕ್ಕೆ ಷರತ್ತು
ಈ ಜಿಲ್ಲೆಗಳ ಗ್ರಾಮೀಣ ಭಾಗದಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆ, ಕೈಗಾರಿಕೆ ಆರಂಭಿಸಲು ಅವಕಾಶ. ನಗರ ಪ್ರದೇಶದಲ್ಲಿ ಅಂಗಡಿ ಮುಂಗಟ್ಟು, ಸಾರಿಗೆಗೆ ಅವಕಾಶವಿಲ್ಲ.
ಕೆಂಪು ವಲಯದಲ್ಲಿ ಬಿಗಿ
ಕಟ್ಟಡ ನಿರ್ಮಾಣ ಕಾಮಗಾರಿ ಷರತ್ತುಬದ್ಧವಾಗಿ ಮುಂದುವರಿಸಬಹುದು. ನಿರ್ಮಾಣ ಸಂಸ್ಥೆಗಳ ಮ್ಯಾನೇಜರ್ ಮತ್ತು ಇಂಜಿನಿಯರ್ಗಳಿಗೆ ಪಾಸ್ ನೀಡಲಾಗುತ್ತದೆ, ಕಾರ್ವಿುಕರಿಗೆ ಪಾಸ್ ನೀಡಲ್ಲ, ಅವರಿಗೆ ಕಾಮಗಾರಿ ನಡೆಯುವ ಸ್ಥಳದಲ್ಲೇ ವಸತಿ ವ್ಯವಸ್ಥೆ ಮಾಡಿಕೊಡಬೇಕು. ಹಾಗೆಯೇ ತಕ್ಷಣಕ್ಕೆ ಲಭ್ಯತೆ ಇರುವ ಸಾಮಗ್ರಿಗಳನ್ನು ಬಳಸಿಕೊಂಡು ಕೆಲಸ ಮುಂದುವರಿಸಬೇಕಾಗುತ್ತದೆ. ಗ್ರಾಮೀಣ ಭಾಗದ ಕೈಗಾರಿಕೆಗಳಲ್ಲಿ ಶೇ. 33 ಸಿಬ್ಬಂದಿಯನ್ನಿಟ್ಟು ಕಾರ್ಯನಿರ್ವಹಿಸಬೇಕು.