ನ್ಯೂಸ್

ದಯವಿಟ್ಟು ಈ ಸಮಯದಲ್ಲಿ ಫುಡ್​ ಆರ್ಡರ್​ ಮಾಡೋದನ್ನು ಆದಷ್ಟು ನಿಲ್ಲಿಸಿ: ಗ್ರಾಹಕರಲ್ಲಿ ಝೊಮ್ಯಾಟೋ ಸಂಸ್ಥೆ ಮನವಿ

ಮೋಹನ್​ ಶೆಟ್ಟಿ

ನವದೆಹಲಿ: ದೇಶದಲ್ಲಿ ಗರಿಷ್ಠ ತಾಪಮಾನವನ್ನೂ ಮೀರಿ ಬಿಸಿಲ ಬೇಗೆ ಹೆಚ್ಚುತ್ತಿದ್ದು, ಜನರು ಮನೆಯಿಂದ ಹೊರಬರುವುದಕ್ಕೂ ಇದೀಗ ಹತ್ತು ಬಾರಿ ಯೋಚಿಸುವಂತಾಗಿದೆ. ಅದರಲ್ಲೂ ಪ್ರತ್ಯೇಕವಾಗಿ ಉತ್ತರ ಭಾರತದಲ್ಲಿ ಶಾಖಾಘಾತದಿಂದ 87ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆ ಕೂಡ ಕಳವಳ ವ್ಯಕ್ತಪಡಿಸಿದ್ದು, ಹೆಚ್ಚುತ್ತಿರುವ ಬಿಸಿ ಗಾಳಿಯಿಂದ ಆದಷ್ಟು ಎಚ್ಚರವಹಿಸಿ ಎಂದು ತಿಳಿಸಿದೆ.

ಇನ್ನು ಇದೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಹೆಸರಾಂತ ಫುಡ್ ಡೆಲಿವರಿ ಸಂಸ್ಥೆ ಝೊಮ್ಯಾಟೋ, ಗ್ರಾಹಕರಲ್ಲಿ ವಿನಂತಿ. ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲಿನ ತಾಪಮಾನದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹಾಗಾಗಿ, ಮಧ್ಯಾಹ್ನದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಫುಡ್​ ಆರ್ಡರ್​ ಮಾಡುವವರು, ಆದಷ್ಟು ಇದನ್ನು ತಪ್ಪಿಸಿ ಎಂದು ತಿಳಿಸಿದೆ.

ಮಧ್ಯಾಹ್ನವೇ ಪೀಕ್ ಅವರ್ಸ್​ ಆಗಿರುವ ಕಾರಣ, ಈ ಸಮಯದಲ್ಲಿ ಗ್ರಾಹಕರು ಹೆಚ್ಚಾಗಿ ಆರ್ಡರ್​ ಮಾಡ್ತಾರೆ. ನಮ್ಮ ಡೆಲಿವರಿ ಬಾಯ್ಸ್​ ಕೂಡ ಸಮಯಕ್ಕೆ ಸರಿಯಾಗಿ ಆಹಾರ ತಲುಪಿಸಬೇಕು ಎಂದರೆ ಇದೇ ಬಿಸಿಲ ಬೇಗೆಯ ಜತೆಗೆ ಹೋರಾಡಬೇಕು. ಆದ ಕಾರಣ, ಮಧ್ಯಾಹ್ನ ಫುಡ್​ ಆರ್ಡರ್​ ಮಾಡುವುದನ್ನು ಆದಷ್ಟು ಕೈಬಿಡಿ. ತೀರ ಅಗತ್ಯವಿದ್ದರೆ ಮಾತ್ರ ಮಾಡಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಸಂಸ್ಥೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮನವಿ ಮಾಡಿದೆ,(ಏಜೆನ್ಸೀಸ್).