ನವದೆಹಲಿ: ವಿವಾದಾತ್ಮಕ ಇಸ್ಲಾಂ ಧರ್ಮಗುರು ಝಾಕೀರ್ ನಾಯ್ಕಗೆ ಗಲ್ಫ್ ರಾಷ್ಟ್ರಗಳಿಂದ ಕೋಟ್ಯಂತರ ರೂ. ಆರ್ಥಿಕ ನೆರವು ಹರಿದುಬಂದಿರುವುದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಹಿರಂಗವಾಗಿದೆ.
ದ್ವೇಷ ಭಾಷಣ, ಮನಿ ಲಾಂಡರಿಂಗ್, ಭಯೋತ್ಪಾದನೆಗೆ ಕುಮ್ಮಕ್ಕು ಸೇರಿದಂತೆ ಅನೇಕ ಆರೋಪಗಳು ಆತನ ಮೇಲಿವೆ. ಮಲೇಷ್ಯಾದಲ್ಲಿರುವ ಆತನನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಭಾರತ ಪದೇಪದೆ ಮನವಿ ಮಾಡಿಕೊಂಡಿದ್ದರೂ ಮಲೇಷ್ಯಾ ಆಸಕ್ತಿ ತೋರಿಸುತ್ತಿಲ್ಲ.
ಇತ್ತೀಚೆಗೆ ಕತಾರ್‌ನಲ್ಲಿರುವ ತನ್ನ ಹಳೆಯ ಪರಿಚಿತನೊಬ್ಬನನ್ನು ಸಂಪರ್ಕಿಸಿದ್ದ ಝಾಕೀರ್, ತನ್ನ ಸಂಘಟನೆಗೆ 50 ಸಾವಿರ ಅಮೆರಿಕನ್ ಡಾಲರ್ ನೀಡುವಂತೆ ಕೋರಿದ್ದ. ಇದಲ್ಲದೇ ಅಲ್ಲಿರುವ ಹಲವು ಶ್ರೀಮಂತ ಉದ್ಯಮಿಗಳನ್ನು ಮತ್ತು ಸಂಘ-ಸಂಸ್ಥೆಗಳನ್ನೂ ಸಂಪರ್ಕಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ VIDEO| ಫ್ಯಾಮಿಲಿ ಡಾನ್ಸ್
ಟರ್ಕಿ ಮತ್ತು ಕತಾರ್ ಜತೆ ಉತ್ತಮ ಸಂಬಂಧ ಹೊಂದಿರುವ ಪಾಕಿಸ್ತಾನ, ಈತನ ಬೇಡಿಕೆಗಳಿಗೆ ಸ್ಪಂದಿಸುವಂತೆ ತನ್ನ ಅಲ್ಲಿನ ಸಂಪರ್ಕಗಳನ್ನು ಬಳಸಿ ಮನವೊಲಿಸಲು ಪ್ರಯತ್ನಿಸಿರುವುದೂ ಬಯಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಕತಾರ್ ಮತ್ತು ಟರ್ಕಿ ನಡುವಿನ ಸಂಬಂಧವೂ ಉತ್ತಮಗೊಂಡಿದ್ದು, ಕತಾರ್ ಭಾರತ ವಿರೋಧಿ ನಿಲುವು ತಳೆಯಲು ಟರ್ಕಿ ಕುಮ್ಮಕ್ಕು ನೀಡುತ್ತಿದೆ. ಈ ಹಿನ್ನೆಲೆಯಲ್ಲೇ ಟರ್ಕಿ ಅಧ್ಯಕ್ಷ ಎರ್ಡೋಗನ್ ಕಳೆದ ವರ್ಷ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಷಯ ಕೆದಕಿದ್ದರು. ಝಾಕೀರ್ ನಾಯ್ಕಗೆ ಮಲೇಷ್ಯಾ ಆತಿಥ್ಯ ನೀಡುವುದಕ್ಕೂ ಪಾಕಿಸ್ತಾನವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತದ ಕಣ್ಣು ತಪ್ಪಿಸಲೆಂದೇ ಝಾಕೀರ್ ನಾಯ್ಕ ಯುಎಇ, ಕತಾರ್ ಸೇರಿದಂತೆ ಗಲ್ಫ್‌ನ ಹಲವು ರಾಷ್ಟ್ರಗಳಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾನೆ. ಇವುಗಳಲ್ಲಿರುವ ಹಣವನ್ನು ಆತ ತನ್ನ ಸಹಚರರಿಗೆ ಮತ್ತು ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್‌ನಂತಹ ಸಂಘಟನೆಗಳಿಗೆ ಅಗತ್ಯ ಬಿದ್ದಾಗಲೆಲ್ಲ ಟ್ರಾನ್ಸ್‌ಫರ್ ಮಾಡುತ್ತಿರುತ್ತಾನೆ. ಈ ಫೌಂಡೇಷನ್ ಅನ್ನು ಭಾರತ ಸರ್ಕಾರ ಈಗಾಗಲೇ ನಿಷೇಧಿಸಿದೆ.
53 ವರ್ಷ ವಯಸ್ಸಿನ ಈ ವಿವಾದಾತ್ಮಕ ಧರ್ಮ ಪ್ರಚಾರಕ 2016ರಲ್ಲೇ ಭಾರತವನ್ನು ತೊರೆದಿದ್ದಾನೆ. ಮಲೇಷ್ಯಾ ಈತನಿಗೆ ಆಶ್ರಯ ನೀಡಿದೆ. ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಎನ್‌ಐಎ 2016ರಲ್ಲಿಯೇ ಈತನ ವಿರುದ್ಧ ಎಫ್‌ಐಆರ್ ದಾಖಲು ಮಾಡಿದೆ.