ನ್ಯೂಸ್

ಬಂಗಾಳದ ಐತಿಹಾಸಿಕ ಆದಿನಾ ಮಸೀದಿಗೆ ಭೇಟಿ ನೀಡಿದ ಯೂಸೂಫ್ ಪಠಾಣ್: ಅದನ್ನು ಆದಿನಾಥ ದೇವಾಲಯ ಎಂದ ಬಿಜೆಪಿ| Yusuf Pathan

Kolkata: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಐತಿಹಾಸಿಕ ಮತ್ತು ಪುರಾತತ್ವ ಇಲಾಖೆ ಅಧೀನದಲ್ಲಿರುವ ಆದಿನಾ ಮಸೀದಿಗೆ ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್​(Yusuf Pathan) ಭೇಟಿ ನೀಡಿದ್ದು, ಈ ಕುರಿತು ಮಸೀದಿ ಹಿನ್ನೆಲೆಯನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಯೂಸೂಫ್ ಪಠಾಣ್, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿರುವ ಅದೀನಾ ಮಸೀದಿಯು 14 ನೇ ಶತಮಾನದಲ್ಲಿ ಇಲ್ಯಾಸ್ ಶಾಹಿ ರಾಜವಂಶದ ಎರಡನೇ ದೊರೆ ಸುಲ್ತಾನ್ ಸಿಕಂದರ್ ಷಾ ನಿರ್ಮಿಸಿದ ಐತಿಹಾಸಿಕ ಮಸೀದಿಯಾಗಿದೆ. ಇದನ್ನು 1373-1375 ಇಸವಿಯಲ್ಲಿ ನಿರ್ಮಿಸಲಾಯಿತು. ಇದು ಆ ಸಮಯದಲ್ಲಿ ಭಾರತೀಯ ಉಪಖಂಡದ ಅತಿದೊಡ್ಡ ಮಸೀದಿಯಾಗಿತ್ತು, ಮತ್ತು ಈ ಪ್ರದೇಶದ ವಾಸ್ತುಶಿಲ್ಪದ ಭವ್ಯತೆಯನ್ನು ಪ್ರದರ್ಶಿಸುತ್ತದೆ ಎಂದು ಸ್ಮಾರಕದ ಫೋಟೋಗಳೊಂದಿಗೆ ಬರೆದಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಬಂಗಾಳ ಬಿಜೆಪಿ ಘಟಕವೂ, ಅದು ಆದಿನಾ ಮಸೀದಿ ಅಲ್ಲ, ಆದಿನಾಥ ದೇವಾಲಯ ಎಂದು ಕರೆದು ರಾಜಕೀಯ ಚರ್ಚೆಯನ್ನು ಹುಟ್ಟು ಹಾಕಿದೆ.

ಕಳೆದ ವರ್ಷ ಪುರೋಹಿತರ ಗುಂಪೊಂದು ವೃಂದಾವನದ ವಿಶ್ವವಿದ್ಯಾ ಟ್ರಸ್ಟ್‌ನ ಅಧ್ಯಕ್ಷ ಹಿರಣ್ಮಯ್ ಗೋಸ್ವಾಮಿ ನೇತೃತ್ವದಲ್ಲಿ ಇದು ಹಿಂದೂ ದೇವಾಲಯದ ಮೇಲೆ ಕಟ್ಟಿದ ಮಸೀದಿ ಎಂದು ಅಲ್ಲಿಯೇ ಹಿಂದೂ ವಿಧಿವಿಧಾನಗಳ ಮೂಲಕ ಪೂಜೆಗಳನ್ನು ಸಲ್ಲಿಸಿದ್ದರು. ಇದನ್ನು ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪುರಾತತ್ವ ಇಲಾಖೆ ಹಿರಣ್ಮಯ್ ಗೋಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿತ್ತು.

ಈ ಘಟನೆ ಬಳಿಕ ಮಸೀದಿಯನ್ನು ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ. ಸ್ಥಳದಾದ್ಯಂತ ಸಿಸಿಟಿವಿಗಳನ್ನು ಅಳವಡಿಸಲಾಯಿತು ಮತ್ತು ಪೊಲೀಸ್ ಚೆಕ್‌ಪೋಸ್ಟ್ ಅನ್ನು ಸಹ ಸ್ಥಾಪಿಸಲಾಯಿತು.(ಏಜೆನ್ಸೀಸ್)