ಬೀಜಿಂಗ್: ಕರೊನಾ ಕೋವಿಡ್ 19 ವೈರಸ್ ಉಗಮ ಸ್ಥಾನವೆಂದು ಪರಿಗಣಿಸಲ್ಪಟ್ಟಿರುವ ವುಹಾನ್ನಿಂದ ಕೇವಲ 1,200 ಕಿ.ಮೀ. ಅಂತರದಲ್ಲಿರುವ ಯುಲಿನ್ ನಲ್ಲಿ ಈಗ ಹತ್ತು ದಿನಗಳ ಡಾಗ್ ಮೀಟ್ ಫೆಸ್ಟಿವಲ್ ಸಂಭ್ರಮವಂತೆ! ಯುಲಿನ್ನಲ್ಲಿರುವ ಒಂದು ಬೀದಿಯನ್ನು ಜಗತ್ತು ಗುರುತಿಸುವುದೇ ಡಾಗ್ ಮೀಟ್ ಸ್ಟ್ರೀಟ್ ಎಂದು. ಕರೊನಾ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿರುವ ಈ ಸಂದರ್ಭದಲ್ಲಿ ಈ ಫೆಸ್ಟಿವಲ್ ನಡೆಸುತ್ತಿರುವುದಕ್ಕೆ ಪ್ರಾಣಿ ಹಕ್ಕು ಸಂಘಟನೆಯವರು ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ಅವರದು ಅರಣ್ಯ ರೋಧನವಾಗಿದೆ.
ಮೇಲ್ ಆನ್ಲೈನ್ ವರದಿ ಪ್ರಕಾರ, ಚೀನಾದ ಗುವಾನ್ಗ್ಸಿ ಪ್ರಾಂತ್ಯ ಕೃಷಿ ಚಟುವಟಿಕೆಗೆ ಹೆಸರುವಾಸಿ. ಆದರೆ, ಇದೇ ಪ್ರಾಂತ್ಯದ ಯುಲಿನ್ ಮಾತ್ರ ಡಾಗ್ ಮೀಟ್ ಫೆಸ್ಟಿವಲ್ ಮೂಲಕ ಗಮನಸೆಳೆದಿದೆ. ಕರೊನಾ ಇದ್ದಾಗ್ಯೂ ಇಲ್ಲಿ ಯಾರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಮಾಸ್ಕ್ ಧರಿಸದೆ ಅಡ್ಡಾಡುತ್ತಿದ್ದಾರೆ. ರಸ್ತೆ ಬದಿಯಲ್ಲೇ ನಾಯಿಗಳನ್ನು ನೇತುಹಾಕಲಾಗಿದ್ದು, ಅದರ ಖಾದ್ಯಗಳನ್ನು ತಯಾರಿಸಿ ಉಣಬಡಿಸುತ್ತಿದ್ದಾರೆ. ಕರೊನಾ ಸೋಂಕಿನ ಭೀತಿ, ಫೆಸ್ಟಿವಲ್ನ ಹೆಸರು ಬದಲಾವಣೆ ಇತ್ಯಾದಿಗಳ ಕಾರಣದಿಂದಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.
ಯುಲಿನ್ ಸಮ್ಮರ್ ಸೊಲ್ಸ್ಟಿಸ್ ಫೆಸ್ಟಿವಲ್ ಎಂದು ಈ ಸಲ ಹೆಸರು ಬದಲಾವಣೆ ಮಾಡಿಕೊಂಡಿದ್ದು, ಡಾಗ್ ಮೀಟ್ ಸ್ಟ್ರೀಟ್ನಲ್ಲಿ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆಯಾದರೂ ಅವರೇನೂ ಮಾಡುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಅಥವಾ ಎಚ್ಚರಿಸುವ ಕೆಲಸವನ್ನು ಮಾಡುತ್ತಿಲ್ಲ ಎಂಬುದು ಸಾಮಾಜಿಕ ಕಾರ್ಯಕರ್ತರ ಕಳಕಳಿ. (ಏಜೆನ್ಸೀಸ್)