ನ್ಯೂಸ್

ತೆಲಂಗಾಣದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದ ವೈಎಸ್ ಶರ್ಮಿಳಾ!

ಹೈದರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಉದಯವಾದ ನಂತರ ಅಲ್ಲಿ ಕೆ ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರ ಸಮಿತಿಯೇ ಕಳೆದ ಏಳು ವರ್ಷಗಳಿಂದ ಪಾರುಪತ್ಯ ಸಾಧಿಸಿದೆ. ಇನ್ನೊಂದೆಡೆ ಚಂದ್ರಬಾಬು ನಾಯ್ಡು ಅವರ ಟಿಡಿಪಿ ತೆಲಂಗಾಣದಲ್ಲಿ ಅಸ್ತಿತ್ವ ಕಳೆದುಕೊಂಡು ಆಂಧ್ರಕ್ಕೆ ಶಿಫ್ಟ್ ಆಗಿದೆ. ಕಾಂಗ್ರೆಸ್​ ಇದ್ದೂ ಇಲ್ಲದಂತಿದೆ. ಇದರ ನಡುವೆ ಬಿಜೆಪಿ ಸಣ್ಣದಾಗಿ ಹೆಜ್ಜೆಗುರುತುಗಳನ್ನು ಮೂಡಿಸುತ್ತಿದೆ.

ತೆಲಂಗಾಣದ ಸದ್ಯದ ರಾಜಕೀಯ ಪರಿಸ್ಥಿತಿ ಹೀಗಿರುವಾಗ ಪ್ರಬಲ ಟಿಆರ್​ಎಸ್ ಪಾರ್ಟಿ ವಿಚಲಿತಗೊಂಡಿದೆ. ಇದಕ್ಕೆ ಕಾರಣ ಅವಿಭಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈಎಸ್​ ರಾಜಶೇಖರ್ ರೆಡ್ಡಿ ಅವರ ಮಗಳು ಹಾಗೂ ಈಗಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ತಂಗಿ ವೈಎಸ್​ ಶರ್ಮಿಳಾ ತೆಲಂಗಾಣಕ್ಕೆ ತನ್ನ ತಂದೆಯ ನೆರಳಿನಲ್ಲಿ ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದಾರೆ.

ಇದಕ್ಕಾಗಿ ಮೊದಲ ಹೆಜ್ಜೆಯಂಬಂತೆ ಶರ್ಮಿಳಾ ಹೈದರಾಬಾದ್​ನಿಂದ ಕಮ್ಮಂ ಜಿಲ್ಲೆಗೆ ಶುಕ್ರವಾರ ಕಾರ್​ ಯಾತ್ರೆ ಮೂಲಕ ಸಂಕಲ್ಪ ಸಭಾ ಎಂಬ ಬೃಹತ್ ಸಮಾವೇಶ ನಡೆಸಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದ ಸಮಾವೇಶದಲ್ಲಿ ಅವರು ತೆಲಂಗಾಣಕ್ಕೆ ಹೊಸ ರಾಜಕೀಯ ಪಕ್ಷವೊಂದನ್ನು ಹುಟ್ಟಿಹಾಕುವುದಾಗಿ ಘೋಷಣೆ ಮಾಡಿದ್ದಾರೆ. ತಮ್ಮ ಹೊಸ ಪಕ್ಷದ ಹೆಸರು ಹಾಗೂ ಸಿದ್ದಾಂತಗಳ ಬಗ್ಗೆ ಶರ್ಮಿಳಾ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ. ಕೆಲ ವರದಿಗಳ ಪ್ರಕಾರ 'ರಾಜಣ್ಣ ರಾಜ್ಯಂ' ಎಂಬ ಪಕ್ಷವನ್ನು ಜುಲೈ 8 ರಂದು ವೈಎಸ್​ ರಾಜಶೇಖರ್ ರೆಡ್ಡಿ ಅವರ ಜನ್ಮದಿನದಂದು ಶರ್ಮಿಳಾ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಸಂಕಲ್ಪ ಸಭಾದಲ್ಲಿ 'ಸಿಂಹ ಒಂಟಿಯಾಗಿ ಬರುತ್ತದೆ' ಎಂದು ರಜನಿಕಾಂತ್ ಡೈಲಾಗ್ ಹೊಡೆದು, ತಾವು ಯಾವುದೇ ರಾಜಕೀಯ ಪಕ್ಷದ ನೆರಳಿನಲ್ಲಿ ಕೆಲಸ ಮಾಡುವುದಿಲ್ಲ. ತೆಲಂಗಾಣಕ್ಕೆ ನಮ್ಮದೇ ಸ್ವಂತ ಪಕ್ಷವನ್ನು ಆರಂಭಿಸುತ್ತೇವೆ ಎಂದು ಶರ್ಮಿಳಾ ಗುಡುಗಿದ್ದಾರೆ.

ತೆಲಂಗಾಣದಲ್ಲಿಯೂ ದಿವಂಗತ ಮಾಜಿ ಮುಖ್ಯಮಂತ್ರಿ ವೈಎಸ್​ ರಾಜಶೇಖರ ರೆಡ್ಡಿ ಅವರಿಗೆ ಸಾಕಷ್ಟು ಅಭಿಮಾನಿಗಳು, ಬೆಂಬಲಿಗರೂ ಇದ್ದಾರೆ. ಅಲ್ಲದೇ ಈಗಿನ ಸಿಎಂ ಚಂದ್ರಶೇಖರ್ ರಾವ್ ವೆಲಮಾ ಜಾತಿಗೆ ಸೇರಿದವರು. ಹೀಗಾಗಿ ತೆಲಂಗಾಣದಲ್ಲಿ ಬಹುಸಂಖ್ಯಾತರಾದ ರೆಡ್ಡಿ ಸಮುದಾಯದ ಪ್ರತಿನಿಧಿಯಾಗಿ ಹಾಗೂ ಟಿಆರ್​​ಎಸ್​ಗೆ ಪರ್ಯಾಯವಾಗಿ ತಾವೊಂದು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ವೈಎಸ್ ಶರ್ಮಿಳಾ ಮುಂದಾಗಿದ್ದಾರೆ ಎನ್ನುತ್ತಿವೆ ವರದಿಗಳು.

ವಿಶೇಷವೆಂದರೆ ಶರ್ಮಿಳಾ ಅವರ ಈ ನಿರ್ಧಾರದ ಬಗ್ಗೆ ಅವರ ಸಹೋದರ ಜಗನ್ಮೋಹನ ರೆಡ್ಡಿ ಅವರು ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ವೈಎಸ್​ ಶರ್ಮಿಳಾ ಅವರು ವೈಎಸ್​ಆರ್​ ಕಾಂಗ್ರೆಸ್​ ಪಾರ್ಟಿಯ ರಾಷ್ಟ್ರೀಯ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ಶಾಸಕಿಯಾಗಿ ಅಥವಾ ಲೋಕಸಭಾ ಸದಸ್ಯೆಯಾಗಿ ಆಡಳಿತ ನಡೆಸಿದ ಅನುಭವ ಇಲ್ಲ. ಇದೆಲ್ಲದರ ನಡುವೆ ವೈಎಸ್​ ಶರ್ಮಿಳಾ ತೆಲಂಗಾಣದಲ್ಲಿ ಯಾವ ರೀತಿ ರಾಜಕೀಯ ಪಕ್ಷ ಕಟ್ಟುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

-ಮಂಜುನಾಥ್ ಭದ್ರಶೆಟ್ಟಿ, ವೆಬ್ ಡೆಸ್ಕ್ ವಿಜಯವಾಣಿ.