ನ್ಯೂಸ್

ತಾಯಿ-ಮಕ್ಕಳು ಸಂಬಂಧಿಸಿದಂತೆ ಅಸಭ್ಯ ವಿಡಿಯೋ! ತೆಗೆದುಹಾಕಲು ಸಮಯ ಕೋರಿದ ಯೂಟ್ಯೂಬ್

ಮೋಹನ್​ ಶೆಟ್ಟಿ

ಮುಂಬೈ: ಯೂಟ್ಯೂಬ್‌ನಲ್ಲಿ ತಾಯಂದಿರು ಮತ್ತು ಮಕ್ಕಳನ್ನು ಒಳಗೊಂಡಿರುವ “ಅಸಭ್ಯ ವಿಷಯ”ದ ಬಗ್ಗೆ ಮಕ್ಕಳ ಹಕ್ಕುಗಳ ಸಂಸ್ಥೆ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು (NCPCR) ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಗುರುವಾರ (ಜ.11) ಯೂಟ್ಯೂಬ್ ಇಂಡಿಯಾ ವಿರುದ್ಧ ವೀಡಿಯೊಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಕುರಿತಂತೆ ಜನವರಿ 15ರಂದು ವೈಯಕ್ತಿಕವಾಗಿ ತಮ್ಮ ಮುಂದೆ ಹಾಜರಾಗುವಂತೆ ಎನ್‌ಸಿಪಿಸಿಆರ್ ತಿಳಿಸಿತ್ತು. ವಿಚಾರಣೆಗೆ ಹಾಜರಾದ ಯೂಟ್ಯೂಬ್​ ಮುಖ್ಯಸ್ಥರು ತಿಳಿಸಿದ ವಿಷಯ ಹೀಗಿದೆ.

ತಾಯಿ-ಮಗನ “ಚಾಲೆಂಜ್ ವೀಡಿಯೊಗಳನ್ನು” ಪೋಸ್ಟ್ ಮಾಡಿದ್ದಕ್ಕಾಗಿ ನಿರ್ದಿಷ್ಟ ಯೂಟ್ಯೂಬ್ ಚಾನೆಲ್‌ನ ನಿರ್ವಾಹಕರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇಂತಹ ಚಾನಲ್‌ಗಳ ಪಟ್ಟಿಯೊಂದಿಗೆ ಜನವರಿ 15ರಂದು ವೈಯಕ್ತಿಕವಾಗಿ ತಮ್ಮ ಮುಂದೆ ಹಾಜರಾಗುವಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗವು ಯೂಟ್ಯೂಬ್​ನ ಭಾರತದ ಸರ್ಕಾರಿ ವ್ಯವಹಾರಗಳು ಮತ್ತು ಸಾರ್ವಜನಿಕ ನೀತಿ ಮುಖ್ಯಸ್ಥರಿಗೆ ಸೂಚಿಸಿತ್ತು.

ಆದೇಶದಂತೆ ವಿಚಾರಣೆ ಹಾಜರಾದ ಯೂಟ್ಯೂಬ್​ ಅಧಿಕಾರಿಯೊಬ್ಬರು, ಸುದೀರ್ಘ ಚರ್ಚೆಗಳ ಬಳಿಕ ವಿಡಿಯೋ ತೆಗೆದುಹಾಕಲು ಕಾಲಾವಕಾಶ ಕೋರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎನ್‌ಸಿಪಿಸಿಆರ್, ನೀಡಿರುವ ನಿರ್ದೇಶನಗಳನ್ನು ಅನುಸರಿಸಲು ಯೂಟ್ಯೂಬ್‌ಗೆ ತಿಳಿಸಿದ್ದು, ಜನವರಿ 29 ರವರೆಗೆ ಹೆಚ್ಚುವರಿ ಸಮಯ ನೀಡಿದೆ,(ಏಜೆನ್ಸೀಸ್).