ರಸ್ತೆಯಲ್ಲೇ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ ರೋಡ್ ರೋಮಿಯೋ
ಯುವಕನ ಗಿಫ್ಟ್ ಬೇಡ ಎಂದು ಚರಂಡಿಗೆ ಎಸೆದ ಕಾಲೇಜು ವಿದ್ಯಾರ್ಥಿನಿ
ವಿದ್ಯಾರ್ಥಿನಿ ಕುಟುಂಬದ ದೂರಿನಡಿ ಆರೋಪಿಯನ್ನು ಜೈಲಿಗಟ್ಟಿದ ಪೊಲೀಸರು
Muzaffarnagar Incident: ತಾನು ತಂದಿದ್ದ ಗಿಫ್ಟ್ ಬೇಡ ಅಂದಿದ್ದಕ್ಕೆ, ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ರಸ್ತೆಯಲ್ಲೇ ಯುವಕನೊಬ್ಬ ಕೆನ್ನೆಗೆ ಬಾರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಸಿಸಿಟಿವಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.
ಉತ್ತರ ಪ್ರದೇಶದ ಮುಜಫರ್‌ನಗರದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಕೇತ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಕಾಲೇಜು ಮುಗಿಸಿ ಮನೆಗೆ ಬರ್ತಿದ್ದ ವಿದ್ಯಾರ್ಥಿನಿಯ ದಾರಿ ತಡೆದ ಫರ್ಮನ್ ಅಲಿ ಅನ್ನೋ ಯುವಕ, ಕೈಯಲ್ಲಿ ಗಿಫ್ಟ್ ಬ್ಯಾಗ್ ಹಿಡಿದುಕೊಂಡು ಆಕೆಗೆ ಕೊಡೋಕೆ ಹೋಗಿದ್ದಾನೆ.
ಆದ್ರೆ ವಿದ್ಯಾರ್ಥಿನಿ ಉಡುಗೊರೆ ತೆಗೆದುಕೊಳ್ಳಲು ಒಪ್ಪದೇ, ಬ್ಯಾಗ್ ಅನ್ನು ಪಕ್ಕದಲ್ಲಿದ್ದ ಚರಂಡಿಗೆ ಎಸೆದಿದ್ದಾಳೆ. ಇದರಿಂದ ಕೋಪಗೊಂಡ ಆತ, ರಸ್ತೆಯಲ್ಲೇ ಆ ಹುಡುಗಿಗೆ ಸತತವಾಗಿ ಕೆನ್ನೆಗೆ ಬಾರಿಸಿ, ಬೈದಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಆರೋಪಿ ಫರ್ಮನ್ ಆ ವಿದ್ಯಾರ್ಥಿನಿಗೆ ಹಲವು ದಿನಗಳಿಂದ ಪ್ರೀತಿಸುವಂತೆ ಟಾರ್ಚರ್ ಕೊಡುತ್ತಿದ್ದ. ಘಟನೆ ನಡೆದ ದಿನ ದಾರಿಯಲ್ಲಿ ತಡೆದು ಗಿಫ್ಟ್ ಕೊಡಲು ಯತ್ನಿಸಿದ್ದಾನೆ. ಹುಡುಗಿಗೆ ನಿಂದಿಸಿ, ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಹಲ್ಲೆ ಮಾಡುವ ದೃಶ್ಯ, ಹತ್ತಿರದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ನವೆಂಬರ್ 2ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)