ಢಾಕಾ : ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಾಂಗ್ಲಾದೇಶದ ಸಹವರ್ತಿ ಶೇಖ್ ಹಸೀನಾ ಅವರನ್ನು ಅಪಹಾಸ್ಯ ಮಾಡುವ ಮ್ಯೂಸಿಕ್ ವಿಡಿಯೋ ತಯಾರಿಸಿದ್ದಕ್ಕಾಗಿ ಬಾಂಗ್ಲಾದೇಶದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಕಟ್ಟುನಿಟ್ಟಾದ ಡಿಜಿಟಲ್ ಸೆಕ್ಯುರಿಟಿ ಆಕ್ಟ್, 2018 ರ ಅಡಿ ದೇಶದ ಉತ್ತರ ಭಾಗದ ಪಟ್ಟಣವೊಂದರ ನಿವಾಸಿ ರಬಿಯುಲ್ ಇಸ್ಲಾಂ (19) ಎಂಬುವನನ್ನು ಮಾರ್ಚ್ 31 ರಂದು ಬಂಧಿಸಲಾಗಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆರೋಪಿಯು ಬಾಂಗ್ಲಾದೇಶ ಮತ್ತು ಭಾರತದ ಪ್ರಧಾನಿಗಳ ಫೋಟೋಗಳನ್ನು ಬಳಸಿ ಅವಮಾನಕಾರಿಯಾದ ಮ್ಯೂಸಿಕ್ ವಿಡಿಯೋವನ್ನು ಮಾಡಿ ತನ್ನ ಫೇಸ್ಬುಕ್ ಟೈಮ್ಲೈನ್ನಲ್ಲಿ ಪೋಸ್ಟ್ ಮಾಡಿದ್ದ. 'ಮಾನನಷ್ಟ ಮತ್ತು ಸರ್ಕಾರದ ಮುಖ್ಯಸ್ಥರ ಚಿತ್ರಣವನ್ನು ಕಳಂಕಿತಗೊಳಿಸಿದ' ಆರೋಪವನ್ನು ಈ ಯುವಕನ ಮೇಲೆ ಹೊರಿಸಲಾಗಿದ್ದು, 14 ವರ್ಷಗಳವರೆಗಿನ ಜೈಲು ಶಿಕ್ಷೆಯಾಗಬಲ್ಲ ಕೃತ್ಯವಿದಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಅಲ್-ಮಾಮುನ್ ಹೇಳಿದ್ದಾರೆ.
ಈ ಘಟನೆಯು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ 50 ನೇ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಢಾಕಾಗೆ ಎರಡು ದಿನಗಳ ಭೇಟಿ ನೀಡಿದ ನಂತರ ಸಂಭವಿಸಿದೆ. ಮೋದಿ ಭೇಟಿಗೆ ಬಾಂಗ್ಲಾದ ಹಲವು ಮೂಲಭೂತವಾದಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆಗಳನ್ನೂ ಹಮ್ಮಿಕೊಂಡಿದ್ದವು ಎನ್ನಲಾಗಿದೆ. (ಏಜೆನ್ಸೀಸ್)