ವೆಲ್ಲೋರ್: ನೆರೆಹೊರೆಯ ಮೂವರು ಯುವಕರು 15 ವರ್ಷದ ಬಾಲಕಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿಕೊಂಡು ದೈಹಿಕ ಸಂಪರ್ಕಕ್ಕೆ ಬ್ಲ್ಯಾಕ್ಮೇಲ್ ಮಾಡಿದ್ದರಿಂದ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.
ಶನಿವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆಕೆ ಬೆಂಕಿ ಹಚ್ಚಿಕೊಂಡಿದ್ದಳು. ಆದರೆ, ಆಕೆಯ ಚೀರಾಟ ಕೇಳಿಸಿಕೊಂಡು ಆಕೆಯ ನೆರವಿಗೆ ಧಾವಿಸಿದ ಅಕ್ಕಪಕ್ಕದ ಮನೆಯವರು, ಬೆಂಕಿ ನಂದಿಸಿ ವೆಲ್ಲೋರ್ನ ಸರ್ಕಾರಿ ವೆಲ್ಲೋರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶೇ.90 ಸುಟ್ಟುಗಾಯಗಳಿಂದ ಬಳಲುತ್ತಿರುವ ಸಂತ್ರಸ್ತೆ ತನಗೆ ಬ್ಲ್ಯಾಕ್ಮೇಲ್ ಮಾಡಿದ ಯುವಕರನ್ನು ನೆರೆಮನೆಯ ಕೆ. ಆಕಾಶ್, ಆರ್. ಗಣಪತಿ ಮತ್ತು 17 ವರ್ಷದ ಬಾಲಕ ಎಂದು ಗುರುತಿಸಿದ್ದಾಳೆ. ಈ ಮೂರು ಮಂದಿ ತಾನು ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಅದನ್ನು ದೈಹಿಕ ಸಂಪರ್ಕಕ್ಕೆ ಸಹಕರಿಸದಿದ್ದರೆ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸುತ್ತಿದ್ದರು. ಹೀಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಗಿ ಆಕೆ ಹೇಳಿರುವುದಾಗಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಶುಭಾ ತಿಳಿಸಿದ್ದಾರೆ.
ಸದ್ಯ ಮೂವರು ಯುವಕರನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತೆ ಇದೀಗ ಪ್ರಜ್ಞಾಹೀನಸ್ಥಿತಿಯಲ್ಲಿದ್ದು, ದೇಹಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಹೇಳಿದ್ದಾರೆ.