ನ್ಯೂಸ್

ನಿಮಗೇನು ಗೊತ್ತಿಲ್ಲ.. ನಿಮ್ಮ ಪಕ್ಷ ಏನನ್ನೂ ಮಾಡಿಲ್ಲ; ಆರ್​ಜೆಡಿ ಎಂಎಲ್​ಸಿ ವಿರುದ್ಧ ಸಿಎಂ ನಿತೀಶ್​ ಕುಮಾರ್​ ವಾಗ್ದಾಳಿ | Nitish Kumar

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್(Nitish Kumar)​ ವಿಧಾನಸಭೆಯಲ್ಲಿ ಶುಕ್ರವಾರ(ಮಾರ್ಚ್​ 7)ಆರ್​ಜೆಡಿ ಎಂಎಲ್​ಸಿಯನ್ನು ತರಾಟೆಗೆ ತೆಗೆದಕೊಂಡರು. ಹಿಂದಿನ ಸರ್ಕಾರದಲ್ಲಿ ಮಹಿಳೆಯರಿಗೆ ಶಿಕ್ಷಣವೂ ಇರಲಿಲ್ಲ, ಮಹಿಳಾ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ನಮ್ಮ ಸರ್ಕಾರದಲ್ಲಿ ಮಾಡಲಾಗಿದೆ ಎಂದು ಹೇಳಿದರು.

ಸಿಎಂ ನಿತೀಶ್ ಕುಮಾರ್ ಮೊದಲು ವಿಧಾನಸಭೆಗೆ ಬಂದರು, ಅವರು ಬಂದ ತಕ್ಷಣ ವಿರೋಧ ಪಕ್ಷದ ಶಾಸಕರು ಗದ್ದಲ ಸೃಷ್ಟಿಸಲು ಪ್ರಾರಂಭಿಸಿದರು. ವಿರೋಧ ಪಕ್ಷದ ಗದ್ದಲವನ್ನು ಎದುರಿಸಿದ ನಂತರ ನಿತೀಶ್ ಕುಮಾರ್ ಕೋಪಗೊಂಡು ಇಲ್ಲಿಂದ ಹೊರಟು ವಿಧಾನ ಪರಿಷತ್ತಿಗೆ ಹೋದರು. ವಿಧಾನ ಪರಿಷತ್ತಿನಲ್ಲಿಯೂ ಮುಖ್ಯಮಂತ್ರಿ ನಿತೀಶ್ ಕುಮಾರ್​​ ವಿರೋಧ ಪಕ್ಷದವರ ಗದ್ದಲವನ್ನು ಎದುರಿಸಬೇಕಾಯಿತು.

ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷಗಳು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳುತ್ತಾ ಟೀಕಿಸಿದವು. ಹಲವು ಹಳ್ಳಿಗಳಲ್ಲಿ ಹುಡುಗಿಯರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಏಕೆಂದರೆ ಹತ್ತಿರದ ಶಾಲೆಗೆ ತಲುಪಲು ನಾಲ್ಕರಿಂದ ಐದು ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗುತ್ತದೆ ಎಂದು ಆರ್‌ಜೆಡಿ ಎಂಎಲ್‌ಸಿ ಊರ್ಮಿಳಾ ಠಾಕೂರ್ ಹೇಳುತ್ತಿದ್ದಂತೆ, ಕೋಪಗೊಂಡು ಎದ್ದು ನಿಂತು ನಿತೀಶ್ ಕುಮಾರ್​​ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ನಾವು ಏನು ಮಾಡಿದ್ದೇವೆಂದು ನಿಮಗೆ ತಿಳಿದಿದೆಯೇ? ನಾವು ಅಧಿಕಾರಕ್ಕೆ ಬರುವವರೆಗೂ ಬಿಹಾರದಲ್ಲಿ ಹಳ್ಳಿಯ ಹುಡುಗಿಯರು ಶಾಲೆಗಳಿಗೆ ಹೋಗುತ್ತಿರಲಿಲ್ಲ ಎಂದು ಹೇಳಿದರು. ಅದಕ್ಕೆ ಊರ್ಮಿಳಾ ಠಾಕೂರ್​, ಸರ್ ಹಾಗೆ ಹೇಳಬೇಡಿ. ನಾನು ಕೂಡ ಹಳ್ಳಿಯಿಂದ ಬಂದಿದ್ದು, ನಾನು ಹಳೆಯ ತಲೆಮಾರಿಗೆ ಸೇರಿದ್ದೇನೆ. ಆದರೂ ನಾನು ನನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ ಎಂದರು. ನಮಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿದೆ. ಅದಕ್ಕೆ ಉತ್ತರಿಸುವುದು ನಿಮ್ಮ ಕೆಲಸ ಎಂದು ಮತ್ತೊಬ್ಬ ಆರ್​ಜೆಡಿ ಎಂಎಲ್​ಸಿ ವಾಗ್ದಾಳಿ ನಡೆಸಿದರು.

ನಿತೀಶ್ ವಿರೋಧ ಪಕ್ಷದ ಮೂವರು ಮಹಿಳಾ ವಿಧಾನ ಪರಿಷತ್ ಸದಸ್ಯರ ಹೇಳಿಕೆಗಳನ್ನು ಖಂಡಿಸಿದರು. ನಿಮಗೆ ಏನೂ ಗೊತ್ತಿಲ್ಲ, ಅದಕ್ಕಾಗಿಯೇ ನೀವು ಇದನ್ನು ಹೇಳುತ್ತಿದ್ದೀರಿ. ನಾವು ಮಹಿಳೆಯರಿಗಾಗಿ ಏನು ಮಾಡಿದ್ದೇವೆಂದು ನಿಮಗೆ ತಿಳಿದಿಲ್ಲ. ನೀವು ಮಹಿಳೆಯರಾಗಿರಬಹುದು ಆದರೆ ನಿಮ್ಮ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ರಾಬ್ರಿ ದೇವಿಯ (ಮಾಜಿ ಸಿಎಂ ಲಾಲು ಪ್ರಸಾದ್​ ಯಾದವ್ ಪತ್ನಿ) ಕಡೆಗೆ ಬೆರಳು ತೋರಿಸಿ ನಿತೀಶ್, ಅವರ ಪತಿ ಜೈಲಿಗೆ ಹೋದಾಗ ರಾಬ್ರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅವರು ಇಲ್ಲಿಯವರೆಗೆ ಮಹಿಳೆಯರಿಗಾಗಿ ಏನು ಮಾಡಿದ್ದಾರೆ? ಮಹಿಳೆಯರಿಗಾಗಿ ಎಲ್ಲಾ ಕೆಲಸಗಳನ್ನು ನಮ್ಮ ಸರ್ಕಾರವೇ ಮಾಡಿದೆ ಎಂದು ಹೇಳಿದರು.(ಏಜೆನ್ಸೀಸ್​​)