ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂದು ಇಂದು ಸುಪ್ರೀಂಕೋರ್ಟ್ ಹೊರಡಿಸಿದ ತೀರ್ಪು ಕರ್ನಾಟಕಕ್ಕೆ ಬೇಸರ ಉಂಟು ಮಾಡಿರುವುದಂತೂ ನಿಜ. ಆದರೆ, ತಮಿಳುನಾಡು ವಾದಕ್ಕೂ ಹಿನ್ನಡೆಯಾಗಿದೆ.
ಸುಪ್ರೀಂಕೋರ್ಟ್ ಮುಂದೆ ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು. ಕರ್ನಾಟಕ ಈಗ ಬಿಡುತ್ತಿರುವ ನೀರು ಸಾಕಾಗುವುದಿಲ್ಲ. ಇನ್ನು ಹೆಚ್ಚಿನ ನೀರು ಬಿಡಲು ಕರ್ನಾಟಕಕ್ಕೆ ಸೂಚನೆ ನೀಡಬೇಕೆಂದು ಕೋರಿದರು.
ಆದರೆ, ತಮಿಳುನಾಡು ವಾದವನ್ನು ಪುರಷ್ಕರಿಸದ ಸುಪ್ರೀಂಕೋರ್ಟ್ ಹೆಚ್ಚು ನೀರು ಬಿಡಬೇಕು ಎಂಬ ನಿಮ್ಮ ವಾದವನ್ನು ನಾವು ಒಪ್ಪಲಾಗುವುದಿಲ್ಲ. ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರವೂ ತಜ್ಞರಿಂದ ಕೂಡಿದ ಮತ್ತು ವಾಸ್ತವಾಗಳನ್ನು ಅರಿತೇ ಸರಿಯಾದ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಕೋರ್ಟ್ ಹೇಳಿತು.
ಸದ್ಯಕ್ಕೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಕರ್ನಾಟಕ, ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ನಂತೆ 15 ದಿನಗಳವರೆಗೆ ನೀರು ಹರಿಸಬೇಕಿದೆ. ಸೆ.12ರಂದು ಕಾವೇರಿ ನೀರು ನಿಯಂತ್ರಣ ಸಮಿತಿಯು ಕೂಡ ಇದೇ ಆದೇಶವನ್ನು ಹೊರಡಿಸಿತ್ತು. ಇದಾದ ಬಳಿಕ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದಲ್ಲೂ ಇದೇ ಸೂಚನೆ ನೀಡಲಾಗಿತ್ತು. ಇದೀಗ ಸುಪ್ರೀಂಕೋರ್ಟ್ ಕೂಡ ಇದನ್ನೇ ತನ್ನ ತೀರ್ಪಿನಲ್ಲಿ ಮುಂದುವರಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆ.18ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿಯೂ ತಮಿಳುನಾಡು ಹೆಚ್ಚು ನೀರು ಬಿಡಲು ಪಟ್ಟು ಹಿಡಿದಿತ್ತು. ಪ್ರತಿದಿನ 12,500 ಕ್ಯೂಸೆಕ್ನಂತೆ 15 ದಿನ ನೀರನ್ನು ಬಿಡುವಂತೆ ತಮಿಳುನಾಡು ಮನವಿ ಮಾಡಿತ್ತು. ಆದರೆ, 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಪ್ರಾಧಿಕಾರ ಆದೇಶ ಹೊರಡಿಸಿತ್ತು.